ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುವ ಹಂತದಲ್ಲಿದ್ದ ವೃದ್ಧನನ್ನು ಸಕಾಲಕ್ಕೆ ನೆರವಾದ ವೈದ್ಯರು ಆತನ ಪ್ರಾಣವನ್ನೇ ಕಾಪಾಡಿದ ಪ್ರಸಂಗ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಗುಳೇದಗುಡ್ಡ(ಡಿ.05): ವೈದ್ಯೋ ನಾರಾಯಣ ಹರಿ ಎನ್ನುವಂತೆ, ಅದೃಷ್ಟವಿದ್ದರೆ ಸಾವು ಕೂಡ ಆ ಕ್ಷಣಕ್ಕೆ ದೂರವಾಗುತ್ತದೆ ಎನ್ನುವುದಕ್ಕೆ ಸರ್ಕಾರಿ ಬಸ್ಸಿನ ಪ್ರಯಾಣದಲ್ಲಿ ಆಶ್ಚರ್ಯಕರ ಘಟನೆಯೊಂದು ಮಂಗಳವಾರ ನಡೆದಿದೆ.
ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುವ ಹಂತದಲ್ಲಿದ್ದ ವೃದ್ಧನನ್ನು ಸಕಾಲಕ್ಕೆ ನೆರವಾದ ವೈದ್ಯರು ಆತನ ಪ್ರಾಣವನ್ನೇ ಕಾಪಾಡಿದ ಪ್ರಸಂಗ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿಯ ವೈದ್ಯ ಡಾ.ಪರಶುರಾಮ ದಾನಿ ಎಂಬುವವರು ಗುಳೇದಗುಡ್ಡಕ್ಕೆ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಮಂಗಳವಾರ ಇಳಕಲ್ಲ-ಬಾದಾಮಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಪಕ್ಕದಲ್ಲಿ 70 ವರ್ಷದ ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ವೃದ್ದ ಕುಳಿತಿದ್ದ. ಹುನಗುಂದ- ಅಮೀನಗಡ ಮಾರ್ಗ ಮಧ್ಯದಲ್ಲಿ ಕಿಟಕಿ ಬಳಿ ಆಸನದಲ್ಲಿ ಕುಳಿತಿದ್ದ ವೃದ್ಧ ವಾಂತಿ ಮಾಡಲು ಕಿಟಕಿ ತೆರೆಯುವಂತೆ ಪಕ್ಕದ ವೈದ್ಯರಿಗೆ ಕೇಳುತ್ತಾನೆ. ಆಗ ವೈದ್ಯರು ಸಹಾಯ ಮಾಡುತ್ತಾರೆ. ವಾಂತಿ ಮಾಡುತ್ತಿದ್ದ ವೃದ್ಧ, ವೈದ್ಯರ ಭುಜದ ಮೇಲೆ ತಲೆ ಒರಗಿಸಿ ಕಣ್ಣು ಮುಚ್ಚುತ್ತಾನೆ. ಇದನ್ನು ಗಮನಿಸಿದ ವೈದ್ಯರು ವೃದ್ಧ ಬೆವರುತ್ತಿದ್ದ ಸ್ಥಿತಿ ಕಂಡು ನಾಡಿ ಮಿಡಿತ ಪರೀಕ್ಷಿಸಿದಾಗ, ನಾಡಿಮಿಡಿತವೇ ಇರಲಿಲ್ಲ.
ನವ ಜೋಡಿಗೆ ಗಿಫ್ಟ್ ನೀಡಿದ ಬೆನ್ನಲ್ಲೇ ಹೃದಯಾಘಾತ, ಬೆಂಗಳೂರು ಅಮೇಜಾನ್ ಉದ್ಯೋಗಿ ಸಾವು!
ಹೃದಯಾಘಾತದ ಸೂಚನೆ ಗೊತ್ತಾಗಿ ತಕ್ಷಣ ವೈದ್ಯರು ವೃದ್ಧನ ಎದೆಯನ್ನು ಒತ್ತುವ ಮೂಲಕ ಸಿಪಿ ಆರ್(ಕಾರ್ವಿಯಾಕ್ ಪಲ್ಮನರಿ ರೆಸಸಿಟೇಷ ನ್) ಮಾಡುತ್ತಾರೆ. ಸುಮಾರು 90 ಸೆಕೆಂಡು ಮಾಡಿದಾಗಲೂ ವ್ಯಕ್ತಿ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಲಿಲ್ಲ.
ವೃದ್ದ ಉಸಿರಾಡುತ್ತಿಲ್ಲ ಎಂದು ವೈದ್ಯರು ಖಾತರಿ ಮಾಡಿಕೊಂಡರು. ಆದರೂ ಪುನಃ ಪ್ರಯತ್ನ ಮಾಡಿದರಾಯಿತೆಂದು ಮತ್ತೆ ಜೋರಾಗಿ ಎದೆಯನ್ನು ಒತ್ತಲು ಆರಂಭಿಸಿದರು.10-15 ಸೆಕೆಂಡುಗಳ ಬಳಿಕ ದೇವರ ದಯದಿಂದ ವೃದ್ಧ ಸಾವಕಾಶವಾಗಿ ಉಸಿರಾಡಲು ಆರಂಭಿಸಿ ಮುಚ್ಚಿದ ಕಣ್ಣು ತೆರೆದ. ಸಮಯಕ್ಕೆ ಸರಿಯಾಗಿ ಪಕ್ಕದಲ್ಲಿದ್ದ ನಾನು ನನ್ನ ಜಾಣ್ಮೆಯಿಂದ ವೃದ್ಧನನ್ನು ಸಾವಿನಿಂದ ಪಾರು ಮಾಡಿದೆ. ದೇವರ ದಯೆ. ವೃದ್ಧ ಶೇಖರಪ್ಪ ಮರುಜೀವ ಪಡೆದುಕೊಂಡ ಎಂದು ವೈದ್ಯ ಡಾ. ಪರಶುರಾಮ ದಾನಿ ಹೇಳುತ್ತಾರೆ.
ಬಸ್ಸಿನಲ್ಲಿ ಪ್ರಯಾಣಿಸುವಾಗ ವೈದ್ಯರು ನಮ್ಮ ತಂದೆಯವರಿಗೆ ಸಹಾಯ ಮಾಡದೇ ಹೋಗಿದ್ದರೆ ನಮ್ಮ ತಂದೆ ನಮ್ಮನ್ನು ಕೈ ಬಿಡುತ್ತಿದ್ದರು. ನಮ್ಮ ಪಾಲಿಗೆ ವೈದ್ಯರೇ ದೇವರು. ಅವರ ಸಹಾಯ ನಮ್ಮ ಕುಟುಂಬ ಎಂದೂ ಮರೆಯಲ್ಲ ಎಂದು ಹಂಸನೂರಿನ ವೃದ್ಧನ ಮಗ ಅಶೋಕ ಶೇಖರಪ್ಪ ಕಲಾಗತಿ ತಿಳಿಸಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಘಾತ: ಸಿಪಿಆರ್ ಮಾಡಿ ಜೀವ ಉಳಿಸಿದ ಟಿಟಿಇ
ಸಾಮಾನ್ಯವಾಗಿ ಹೃದಯಾಘಾತಕ್ಕೀಡಾದಾಗ ಜೊತೆಯಲ್ಲಿದ್ದವರಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ, ಕೆಲವರಿಗೆ ಏನಾಯ್ತು ಎಂದು ಕೂಡ ತಿಳಿಯುವುದು ಕಷ್ಟ. ಒಂದು ವೇಳೆ ಹೃದಯಾಘಾತಕ್ಕೀಡಾದಾಗ ಜೊತೆಯಲ್ಲಿದ್ದವರಿಗೆ ಏನು ಮಾಡಬೇಕು ಎಂದು ತಿಳಿದಿದ್ದರೆ ಹೃದಯಾಘಾತಕ್ಕೀಡಾದವರ ಜೀವ ಉಳಿಸಬಹುದಾಗಿದೆ. ಹೃದಯಾಘಾತಕ್ಕೀಡಾದ ಸಿಪಿಆರ್ ಮಾಡುವ ಮೂಲಕ ವ್ಯಕ್ತಿಯ ಜೀವ ಉಳಿಸಬಹುದಾಗಿದೆ. ಇದನ್ನು ತಿಳಿದಿರುವ ಯಾರೇ ಆದರೂ ಮಾಡಬಹುದಾಗಿದೆ.ಇತ್ತೀಚೆಗೆ ಹೃದಯಾಘಾತಕ್ಕೀಡಾಗಿ ಹಠಾತ್ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ರೈಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಕೂಡಲೇ ಸಿಪಿಆರ್ ಮಾಡುವ ಮೂಲಕ ರೈಲಿನ ಟಿಕೆಟ್ ಪರೀಶಿಲನೆ (Ticket checker) ಮಾಡುವ ವ್ಯಕ್ತಿ ಹೃದಯಾಘಾತಕ್ಕೀಡಾದ ವ್ಯಕ್ತಿಯ ಜೀವ ಉಳಿಸಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಮ್ ಮಾಲೀಕನ ಹೃದಯಾಘಾತ: ಸ್ಟೀಮ್ ಬಾತ್‌ನಲ್ಲಿ ದುರಂತ ಅಂತ್ಯ
ಈ ವೀಡಿಯೋವನ್ನು ರೈಲ್ವೆ ಸಚಿವಾಲಯವೂ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಟಿಟಿಯವರ ಸಮಯಪ್ರಜ್ಞೆಯಿಂದ ವ್ಯಕ್ತಿಯೊಬ್ಬರ ಜೀವ ಉಳಿದಿದೆ. 15708 ರೈಲು ಸಂಖ್ಯೆಯ ಅಮ್ರಪಾಲಿ ಎಕ್ಸ್‌ಪ್ರೆಸ್ ರೈಲಿನ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ 70 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ಹಠಾತ್ ಹೃದಯಾಘಾತವಾಗಿದೆ. ಈ ವೇಳೆ ಪ್ರಯಾಣಿಕರ ಟಿಕೆಟ್ ಪರಿಶೀಲನೆ (Travelling Ticket Examiner)ಮಾಡುವ ಟಿಟಿಇ ಒಬ್ಬರು ಆ ವ್ಯಕ್ತಿಗೆ ಕೂಡಲೇ ಸಿಪಿಆರ್(Cardiopulmonary Resuscitation) ಮಾಡುವ ಮೂಲಕ ಅವರ ಜೀವ ಉಳಿಸಿದ್ದಾರೆ ಎಂದು ವೀಡಿಯೋ ಶೇರ್ ಮಾಡಿಕೊಂಡು ವಿವರ ನೀಡಿದ್ದಾರೆ.
ಟಿಟಿಇ ಮಾಡಿದ ಸಿಪಿಆರ್‌ನಿಂದಾಗಿ 70 ವರ್ಷದ ಪ್ರಯಾಣಿಕರು ಕೂಡಲೇ ಚೇತರಿಸಿಕೊಂಡಿದ್ದು, ಅವರ ಹೃದಯ ಮತ್ತೆ ಸ್ವಸ್ಥಿತಿಯಲ್ಲಿ ಕೆಲಸ ಮಾಡಲು ಶುರು ಮಾಡಿದೆ. ಇದಾದ ನಂತರ ಮುಂದಿನ ರೈಲು ನಿಲ್ದಾಣವಾದ ಚಪ್ರಾ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ಅವರನ್ನು ರಕ್ಷಿಸಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗೆ ಆಪತ್ಕಾಲದಲ್ಲಿ ವ್ಯಕ್ತಿಯ ಜೀವ ಉಳಿಸಿದ ಟಿಕೆಟ್ ಚೆಕರ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಇದೊಂದು ಶ್ರೇಷ್ಠ ಕೆಲಸ, ಇಂತಹ ಟಿಟಿಇಗಳು ಸಿಗುವುದು ಬಹಳ ಅಪರೂಪ ಈ ಟಿಟಿಇಗೊಂದು ದೊಡ್ಡ ಸೆಲ್ಯೂಟ್ ಎಂದು ಕಾಮೆಂಟ್ ಮಾಡಿ ಟಿಟಿಇ ಕಾರ್ಯಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿಪಿಆರ್ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿಕೊಡಬೇಕಿದೆ ಎಂದು ಜನ ಚರ್ಚೆ ನಡೆಸಿದ್ದಾರೆ.