ಯಾದಗಿರಿ: ಸಾವಿರಾರು ಸಂಖ್ಯೆಯಲ್ಲಿ ವಲಸಿಗರ ಆಗಮನ, ಜಿಲ್ಲಾಡಳಿತಕ್ಕೆ ಸವಾಲಾದ ಕ್ವಾರಂಟೈನ್‌..!

By Kannadaprabha NewsFirst Published May 16, 2020, 8:19 AM IST
Highlights

ಸಾವಿರಾರು ಜನ ವಲಸಿಗರು, ಕೂಲಿ ಕಾರ್ಮಿಕರು ವಾಪಸ್| ದಿಕ್ಕು ತಪ್ಪಿದ ಲೆಕ್ಕಾಚಾರ : ಗ್ರಾಮಗಳಲ್ಲೇ ಕ್ವಾರಂಟೈನ್‌ಗೆ ನಿರ್ಧಾರ| ಅವ್ಯವಸ್ಥೆಯಿಂದ ರೋಸಿ ಹಿಂಬಾಗಿಲು ಮುರಿದು ಪಾರಾಗಲೆತ್ನಿಸಿದ್ದ ವಲಸಿಗರು|

ಯಾದಗಿರಿ(ಮೇ.16):  ಲಾಕ್‌ಡೌನ್ ಸಡಿಲಿಕೆ ನಂತರ, ಮುಂಬೈ, ಗೋವಾ, ತಮಿಳುನಾಡು ಹಾಗೂ ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಂದ ಯಾದಗಿರಿ ಜಿಲ್ಲೆಗೆ ವಾಪಸ್ಸಾಗುತ್ತಿರುವ ಕಾರ್ಮಿಕರು ಹಾಗೂ ವಲಸಿಗರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ನಾಲ್ಕೈದು ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು (ಜಿಲ್ಲಾಡಳಿತ ಮಾಹಿತಿ) ಜನ ಬಂದಿದ್ದರೆ, ಇನ್ನೂ ನಾಲ್ಕೈದು ದಿನಗಳಲ್ಲಿ ಇದು ಹೆಚ್ಚುವ ನಿರೀಕ್ಷೆಯಿದೆ.

ಶುಕ್ರವಾರದ ಮಾಹಿತಿಯಂತೆ. ಯಾದಗಿರಿ ಜಿಲ್ಲೆಯ ಒಟ್ಟು 65 ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಮೇ 15 ರಂದು ಸೇರ್ಪಡೆಯಾಗಿರುವ 472 ಜನ ಸೇರಿದಂತೆ ಒಟ್ಟು 5229 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಇದರಲ್ಲಿ ಠಾಣೆ ಹಾಗೂ ಮುಂಬೈನಿಂದ ರೈಲು ಮೂಲಕ ಕಲಬುರಗಿಯಿಂದ ಯಾದಗಿರಿ ಜಿಲ್ಲೆಗೆ ಆಗಮಿಸಿದ (ಮೇ 11 ಮತ್ತು ಮೇ 14 ರಂದು) 597 ಜನರಿದ್ದಾರೆ. 

ಕೈಯಲ್ಲಿ ದುಡ್ಡಿಲ್ಲದೇ ಕಂಗಾಲಾದ ಕಾರ್ಮಿಕರು: ತವರಿಗೆ ಮರಳಲು ಮೂರು ಪಟ್ಟು ದರ ಹೆಚ್ಚಿಸಿದ ಸಾರಿಗೆ ಸಂಸ್ಥೆ

ಭಾನುವಾರ ಯಾದಗಿರಿಗೆ ಆಗಮಿಸಲಿರುವ ರೈಲು ಶ್ರಮಿಕ್ ಎಕ್ಸಪ್ರೆಸ್‌ನಲ್ಲಿ ಒಂದು ಸಾವಿರ ಜನರು ಬರುವ ನಿರೀಕ್ಷೆಯಿದೆ. ಬೇರೆ ರಾಜ್ಯಗಳಿಂದ ವಾಪಸ್ಸಾದ ವಲಸಿಗರನ್ನು ‘ಇನ್ಸಟಿಟ್ಯೂಷನಲ್ ಕ್ವಾರಂಟೈನ್’ನಲ್ಲಿರಿಸಲು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ವಾಪಸ್ಸಾಗುವ ಜನರ ಬಗ್ಗೆ ಜಿಲ್ಲಾಡಳಿತದ ನಿರೀಕ್ಷೆಯ ಲೆಕ್ಕಾಚಾರ ತಲೆ ಕೆಳಗಾದಂತಿದ್ದು, ಏಕಾಏಕಿ ಸಾವಿರಾರು ಜನರು ಜಿಲ್ಲೆಯಲ್ಲಿ ಕಾಲಿಟ್ಟಿರುವುದು ಆತಂಕ ಜೊತೆಗೆ, ‘ಕ್ವಾರಂಟೈನ್’ ವ್ಯವಸ್ಥೆಯೇ ಕಂಗಾಲಾದಂತಿದೆ. ಕೆಲವು ಕೇಂದ್ರಗಳಲ್ಲಿ ಕುಡಿಯುವ ನೀರು, ಊಟ, ವಿದ್ಯುತ್, ಶೌಚಾಲಯ ವ್ಯವಸ್ಥೆಯಂತೂ ದಗೆಟ್ಟಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಇಲ್ಲಿ ಮರೀಚಿಕೆಯಾಗಿದೆ.

ಶಹಾಪುರದ ಬೇವಿನಹಳ್ಳಿ (ಜೆ) ಕೇಂದ್ರವೊಂದರಲ್ಲಿ ಅವ್ಯವಸ್ಥೆಯಿಂದಾಗಿ ಹತಾಷರಾದಂತಿದ್ದ ಕೆಲವರು ಹಿಂಬಾಗಿಲು ಮುರಿದು ಓಡಿ ಹೋಗುವ ಪ್ರಯತ್ನ ನಡೆಸಿದಾಗ, ಬಂದೀಖಾನೆಗಳಿಂದ ತಪ್ಪಿಸಿಕೊಂಡ ಅಪರಾಧಿಗಳಂತೆ ಅವರನ್ನು ಹಿಂಡು ಹಿಂಡಾಗಿ ಒಳಗೆ ದಬ್ಬಲಾಗಿದೆಯಂತೆ !

ಮುಂಬೈನಿಂದ ಬಂದು ಬೆಂಡೆಬೆಂಬಳಿ ಕೇಂದ್ರದಲ್ಲಿ ನಾಲ್ಕೈದು ದಿನಗಳಿಂದ ಇರುವ ತಮಗೆ ಕನಿಷ್ಠ ಜ್ವರ ತಪಾಸಣೆಯೂ ನಡೆಸಿಲ್ಲ, ಊಟ ಹಾಗೂ ನೀರಿನ ಬಗ್ಗೆ ಕೇಳುವುದೇ ಬೇಡ ಎಂದು ಜನ ಆಕ್ರೋಶಗೊಂಡು, ಹಿಡಿಶಾಪ ಹಾಕುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಜನ ನಿಯಂತ್ರಿಸುವುದು ಅಸಾಧ್ಯವೆಂದು ಮನಗಂಡತಿರುವ ಜಿಲ್ಲಾಡಳಿತ, ಅವರವರ ಗ್ರಾಮಗಳಲ್ಲಿನ ಶಾಲೆ/ವಸತಿ ನಿಲಯ/ಕಾಲೇಜುಗಳಲ್ಲಿ ಕ್ವಾರಂಟೈನ್ ಮಾಡುವ ಬಗ್ಗೆ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರದ ಮುಂಬೈ, ಥಾಣೆ, ಪುಣೆ, ಸೋಲಾಪುರ, ತೆಲಂಗಾಣದ ಹೈದರಾಬಾದ್, ಮೆಹಬೂಬನಗರ ಸೇರಿದಂತೆ, ಗುಜರಾತ್, ತಮಿಳನಾಡು ಮುಂತಾದೆಡೆಯಿಂದ ಬಂದವರೆಲ್ಲರನ್ನೂ ಒಂದೇ ಕೇಂದ್ರದಲ್ಲಿರಿಸಿರುವುದರಿಂದ ಹಾಟ್ ಸ್ಪಾಟ್ ಪ್ರದೇಶಗಳಿಂದ ಬಂದವರು, ಕಡಮೆ ಸೋಂಕಿರುವ ಪ್ರದೇಶಗಳ ಜನರ ಜೊತೆಗೆ ಬೆರೆಯುತ್ತ ಸಾಗಿದರೆ ಮುಂದಿನ ದಿನಗಳಲ್ಲಿ ಕ್ವಾರಂಟೈನ್ ಕೇಂದ್ರಗಳ ಪರಿಸ್ಥಿತಿ ಹದಗೆಡುವ ಆತಂಕ ಎದುರಾಗಿದೆ.

click me!