Bengaluru: BBMP ಅಧಿಕಾರಿಗಳಿಗೆ ದಿನವಿಡೀ ಮೀಟಿಂಗ್‌: ಕೆಲಸ ನಾಸ್ತಿ..!

By Kannadaprabha News  |  First Published Dec 12, 2021, 7:10 AM IST

*   ಸರಣಿ ಸಭೆಗಳಲ್ಲಿ ಅಧಿಕಾರಿಗಳು: ಕರ್ತವ್ಯಕ್ಕೆ ಅಡ್ಡಿ
*   8 ವಲಯಗಳಲ್ಲಿ 28 ವಿಧಾನಸಭಾ ಕ್ಷೇತ್ರ
*   ಉನ್ನತಾಧಿಕಾರಿಗಳೇ ಸಭೆ ಬರಲು ಜನ ಪ್ರತಿನಿಧಿಗಳ ಪಟ್ಟು
 


ಬೆಂಗಳೂರು(ಡಿ.12):  ಪಾಲಿಕೆ ವ್ಯಾಪ್ತಿಯಲ್ಲಿ ಕ್ಲಸ್ಟರ್‌ ಮಾದರಿಯಲ್ಲಿ ಕೊರೋನಾ(Coronavirus) ಪತ್ತೆಯಾಗುತ್ತಿದೆ. ಜೊತೆಗೆ ಒಮಿಕ್ರೋನ್‌(Omicron) ಭೀತಿಯೂ ಹೆಚ್ಚಿದೆ. ಈ ಸಂದರ್ಭದಲ್ಲಿ ಸೋಂಕು ತಡೆಗೆ ತಳಮಟ್ಟದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಪ್ರಮುಖ ಅಧಿಕಾರಿಗಳು(Officers) ಸರಣಿ ಸಭೆಗಳಲ್ಲಿ ಕಳೆದು ಹೋಗಿದ್ದಾರೆ.

ಈ ಸಭೆಗಳಲ್ಲೇ ದಿನದ ಬಹುಪಾಲು ಸಮಯ ವ್ಯಯವಾಗುತ್ತಿದ್ದು, ಕೊರೋನಾ ತಡೆ ಕೆಲಸ ಕಾರ್ಯಗಳಿಗೆ ತೀವ್ರ ಹಿನ್ನೆಡೆಯಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ(BBMP) ಭೌಗೋಳಿಕ ವಿಸ್ತೀರ್ಣ ಜಾಸ್ತಿಯಿದ್ದು, 28 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಆರ್‌ಆರ್‌ ನಗರ, ಯಲಹಂಕ ವಲಯ ಹೊರತು ಪಡಿಸಿದರೆ ಉಳಿದೆಲ್ಲ ವಲಯಗಳು ಮೂರಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರವನ್ನು ಹೊಂದಿವೆ. ಇನ್ನು ಬೆಂಗಳೂರಿನ(Bengaluru) ಕೇಂದ್ರ ಪ್ರದೇಶದಲ್ಲಿರುವ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳು ತಲಾ ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿವೆ.

Tap to resize

Latest Videos

undefined

Land Encroachment: ಕೆಜಿಎಫ್‌ ಬಾಬು ಒತ್ತುವರಿ ಮಾಡಿದ್ದ ಜಾಗ ತೆರವಿಗೆ BBMP ಸಿದ್ಧತೆ

ಪ್ರತಿ ವಲಯ ಮಟ್ಟದಲ್ಲಿ ಕಂದಾಯ ಅಧಿಕಾರಿಗಳು, ವೈದ್ಯಕೀಯ ಆರೋಗ್ಯಾಧಿಕಾರಿ, ಘನತ್ಯಾಜ್ಯ ನಿರ್ವಹಣೆಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಸೇರಿದಂತೆ ಇತರೆ ಅಧಿಕಾರಿಗಳು ಇದ್ದಾರೆ. ಆದರೂ ಇಲ್ಲಿನ ಸಣ್ಣಪುಟ್ಟ ಸಮಸ್ಯೆಗಳಿಗೂ ಹಿರಿಯ ಅಧಿಕಾರಿಗಳನ್ನೇ ಸಭೆಗೆ ಬರುವಂತೆ ಶಾಸಕರು(MLA's) ಒತ್ತಾಯಿಸುತ್ತಾರೆ. ಪ್ರಮುಖ ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ತೀರ್ಮಾನ ಕೈಗೊಳ್ಳಬೇಕಾ ಅಥವಾ ಪರಿಶೀಲನೆ ಸಭೆ(Meeting) ಮಾಡಬೇಕಾ?. ಸಚಿವರು, ಶಾಸಕರು ದಿನವಿಡೀ ಸಭೆಗಳನ್ನು ಕರೆಯುತ್ತಿದ್ದರೆ ಅಧಿಕಾರಿಗಳು ಯಾವ ಸಮಸ್ಯೆ ಬಗೆಹರಿಸಬೇಕು. ಯಾವ ಕಾಮಗಾರಿಯನ್ನು ಪರಿಶೀಲಿಸಲು ಸಾಧ್ಯ? ಕಡತಗಳ ವಿಲೇವಾರಿ ಯಾವಾಗ ಮಾಡಬೇಕು? ಸಾರ್ವಜನಿಕರಿಂದ ಅಹವಾಲು ಆಲಿಸುವುದೆಂದು ಎಂಬುದು ಅಧಿಕಾರಿಗಳ ಯಕ್ಷಪ್ರಶ್ನೆ.

ವಾರದಲ್ಲಿ ಒಂದೊಂದು ವಿಧಾನಸಭಾ ಕ್ಷೇತ್ರದ ಶಾಸಕ ಸಭೆ ಕರೆದರೂ ಆರು ದಿನವೂ ಸಭೆಯಲ್ಲೇ ವಾರ ಮುಗಿದು ಹೋಗುತ್ತದೆ. ಇನ್ನು ಕಚೇರಿಯಲ್ಲಿ ಕಡತ ವಿಲೇವಾರಿ, ಸಾರ್ವಜನಿಕರ ಭೇಟಿ, ಕಾಮಗಾರಿಗಳ ಪರಿಶೀಲನೆ, ಕ್ಷೇತ್ರದ ಪ್ರಗತಿ, ಕೆಳ ಅಧಿಕಾರಿಗಳ ಕಾರ್ಯವೈಖರಿ, ರಾಜಕಾಲುವೆ ಒತ್ತುವರಿ, ಅನಧಿಕೃತ ಕಟ್ಟಡಗಳು, ಅನಧಿಕೃತ ಪ್ರತಿಮೆ, ಪುತ್ಥಳಿ, ರಸ್ತೆ ಗುಂಡಿ ಹೀಗೆ ಯಾವುದನ್ನು ಸರಿಯಾಗಿ ನಿರ್ವಹಿಸಲು ಸಾಧ್ಯ ಎಂಬ ಗೊಂದಲದಲ್ಲಿ ಅಧಿಕಾರಿಗಳು ಮುಳುಗಿದ್ದಾರೆ.

ಮುಖ್ಯವಾಗಿ ಕೋವಿಡ್‌(Covid19) ಸಂಕಷ್ಟದ ಈ ಸಮಯದಲ್ಲಿ ಬಿಬಿಎಂಪಿಯ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯ ಪರಿಸ್ಥಿತಿಯಂತೂ ಹೇಳತೀರದು. ಒಂದೆಡೆ ಲಸಿಕಾ ಅಭಿಯಾನ(Vaccine Drive) ನೋಡಿಕೊಳ್ಳಬೇಕು. ಸೋಂಕು ಪರೀಕ್ಷೆ, ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ, ಹೋಂ ಕ್ವಾರಂಟೈನ್‌ನಲ್ಲಿ(Home Quarantine) ಇರುವವರ ಮೇಲ್ವಿಚಾರಣೆ, ಕಂಟೈನ್ಮೆಂಟ್‌(Containment) ನಿರ್ವಹಣೆ, ಬಸುರಿ ಬಾಣಂತಿಯರ ಆರೋಗ್ಯ ನಿರ್ವಹಣೆ ಸೇರಿದಂತೆ ಹತ್ತು ಹಲವು ಕೆಲಸಗಳನ್ನು ಮಾಡಬೇಕಿದೆ. ಈ ನಡುವೆಯೇ ಸರಣಿ ಸಭೆಗಳಿಂದ ಆರೋಗ್ಯ ಸಿಬ್ಬಂದಿ ಬೇಸತ್ತಿದ್ದಾರೆ ಎಂದು ಆರೋಗ್ಯಾಧಿಕಾರಿಯೊಬ್ಬರು ಕನ್ನಡಪ್ರಭದೊಂದಿಗೆ(Kannada Prabha) ನೋವು ತೋಡಿಕೊಂಡಿದ್ದಾರೆ.

ರಸ್ತೆ ಗುಂಡಿ ತ್ವರಿತವಾಗಿ ಮುಚ್ಚಲು ಮುಖ್ಯ ಆಯುಕ್ತರ ಸೂಚನೆ

ಬಿಬಿಎಂಪಿ ವ್ಯಾಪ್ತಿಯ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳು ಸೇರಿದಂತೆ ರಸ್ತೆ ಗುಂಡಿ(Road) ಬಿದ್ದಿರುವ ರಸ್ತೆಗಳಿಗೆ ಡಾಂಬರೀಕರಣ ಮಾಡುವ ಕೆಲಸವನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಬಿಬಿಎಂಪಿ ಸೂಚನೆ ನೀಡಿದೆ.

Covid Vaccine Drive: ಲಸಿಕಾ ಮೇಳಕ್ಕೆ ಸಿಗದ ಸ್ಪಂದನೆ: ತಲುಪದ ಗುರಿ

ನಗರದಲ್ಲಿ ಮಳೆ(Rain) ಬಹುತೇಕ ಕಡಿಮೆಯಾಗಿದ್ದು, ಮಳೆಯಿಂದ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಲು ಕ್ರಮಕೈಗೊಳ್ಳಬೇಕು. ಎಲ್ಲ ರಸ್ತೆಗಳಲ್ಲಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆಯಲ್ಲಿ ರಸ್ತೆ ಗುಂಡಿ ಮುಚ್ಚದೇ ಇರುವುದು ಕಂಡು ಬಂದರೆ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಕ್ರಮಗೊಳ್ಳಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್‌ಗುಪ್ತಾ ಎಚ್ಚರಿಸಿದರು.

ಶನಿವಾರ ನಗರದಲ್ಲಿ ರಸ್ತೆಗುಂಡಿ ಮುಚ್ಚುವ ಹಾಗೂ ಡಾಂಬರೀಕರಣ ಮಾಡುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ದುರಸ್ತಿಯಲ್ಲಿರುವ ರಸ್ತೆಗಳ ಪೈಕಿ ತುರ್ತಾಗಿ ಯಾವ ರಸ್ತೆ ದುರಸ್ತಿಪಡಿಸಬೇಕಿದೆ ಎಂಬುದನ್ನು ಪಟ್ಟಿಮಾಡಿ ಕೂಡಲೇ ಡಾಂಬರೀಕರಣ ಕೆಲಸ ಪ್ರಾರಂಭಿಸಬೇಕು. ಮಳೆಯಿಂದಾಗಿ ಹೆಚ್ಚು ಹಾಳಾಗಿರುವ ರಸ್ತೆಗಳಲ್ಲಿ ಯಾವುದೇ ತೊಂದರೆಯಾಗದಂತೆ ಡಾಂಬರೀಕರಣ ಮಾಡಿ ವಾಹನಗಳು ಸಂಚರಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರಭಾಕರ್‌, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ಉಪಸ್ಥಿತರಿದ್ದರು.
 

click me!