ಚುನಾವಣೆ ವೇಳೆ ಕಾಂಗ್ರೆಸಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸಿ ಕಠಿಣ ಶ್ರಮ ವಹಿಸಿದ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೆಂದು ಕೈ ಮುಖಂಡರೋರ್ವರು ಹೇಳಿದ್ದಾರೆ.
ಶಿವಮೊಗ್ಗ [ಡಿ.13]: ವಿಧಾನಸಭಾ ಉಪ ಚುನಾವಣೆಯಲ್ಲಿನ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜಿನಾಮೆ ಅಂಗೀಕರಿಸದೆ ಅವರನ್ನೇ ಮುಂದುವರಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್. ಎಸ್. ಸುಂದರೇಶ್ ಒತ್ತಾಯಿಸಿದ್ದಾರೆ.
ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲದೇ ಹೋದರೂ ಬಿಜೆಪಿ ಸರ್ಕಾರದ ವಿರುದ್ಧ ಚುನಾವಣಾ ಪ್ರಚಾರದಲ್ಲಿ ದಿನೇಶ್ ಗುಂಡೂರಾವ್ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ. ಆದ್ದರಿಂದ ದಿನೇಶ್ ಅವರ ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಂಗೀಕರಿಸಬಾರದು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾಂಗ್ರೆಸ್ ಸಾಮೂಹಿಕ ನಾಯಕತ್ವದಡಿ ಕೆಲಸ ಮಾಡುತ್ತದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಹೊಣೆಯನ್ನು ಕೆಪಿಸಿಸಿ ಅಧ್ಯಕ್ಷರ ಮೇಲೆ ಹೊರಿಸುವುದು ಸರಿಯಲ್ಲ. ಅನರ್ಹರ ಗೆಲುವಿಗೆ ಹಣಬಲ ಸೇರಿದಂತೆ ಅನೇಕ ಕಾರಣಗಳಿವೆ. ಆದ್ದರಿಂದ ದಿನೇಶ್ ಗುಂಡೂರಾವ್ ಅವರು ತಮ್ಮ ರಾಜೀನಾಮೆ ಪತ್ರ ಹಿಂಪಡೆಯಬೇಕು.
ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಶ್ರಮಿಸಿದ ಕಾರ್ಯವೈಖರಿ ಅಪಾರವಾಗಿದೆ. ರಾಜ್ಯಮಟ್ಟದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ದಿನೇಶ್ ಗುಂಡೂರಾವ್ ನಾಯಕತ್ವ ಅಗತ್ಯವಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಬೆಂಬಲ ಸಂಪೂರ್ಣ ದಿನೇಶ್ ಅವರಿಗಿದೆ. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಇತರೆ ಜಿಲ್ಲೆಗಳಿಂದಲೂ ಬೆಂಬಲ ಸೂಚಿಸಿ ಪತ್ರ ರವಾನಿಸಲಾಗಿದೆ. ದಿನೇಶ್ ಗುಂಡೂರಾವ್ ಅವರು ತಮ್ಮ ನಿರ್ಧಾರ ಬದಲಿಸಿ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಸುಂದರೇಶ್ ಒತ್ತಾಯಿಸಿದ್ದಾರೆ.