ಧರ್ಮಸ್ಥಳ ಲಕ್ಷ ದೀಪೋತ್ಸವ : ಇದೆ ಹಲವು ಕಂಡೀಶನ್

By Kannadaprabha NewsFirst Published Dec 10, 2020, 4:03 PM IST
Highlights

 ಇಂದಿನಿಂದ ಶ್ರೀ ಮಂಜುನಾಥಸ್ವಾಮಿಯ ಹೊಸಕಟ್ಟೆಉತ್ಸವದೊಂದಿಗೆ ಲಕ್ಷದೀಪೋತ್ಸವ ಆರಂಭಗೊಂಡು ಡಿ.14ರಂದು ಗೌರಿಮಾರುಕಟ್ಟೆಉತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.

ಬೆಳ್ತಂಗ​ಡಿ (ಡಿ.10):  ದಾನ ಪರಂಪರೆಗೆ ಹೆಸರುವಾಸಿಯಾಗಿರುವ ನಾಡಿನ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಿ.10ರಿಂದ 14ರವರೆಗೆ ಭಗವಾನ್‌ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಇಂದಿನಿಂದ ಶ್ರೀ ಮಂಜುನಾಥಸ್ವಾಮಿಯ ಹೊಸಕಟ್ಟೆಉತ್ಸವದೊಂದಿಗೆ ಲಕ್ಷದೀಪೋತ್ಸವ ಆರಂಭಗೊಂಡು ಡಿ.14ರಂದು ಗೌರಿಮಾರುಕಟ್ಟೆಉತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.

ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ನಡೆಯುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ಜನಮಾನಸವನ್ನು ಸೆಳೆಯಲಿವೆ. ಮೊದಲನೆಯ ದಿನವಾದ ಗುರು​ವಾ​ರ ದೇವರ ಕಾರ್ಯಕ್ರಮದ ಅಂಗವಾಗಿ ರಾತ್ರಿ 9 ಗಂಟೆ ಬಳಿಕ ಹೊಸಕಟ್ಟೆಉತ್ಸವ ನಡೆಯಲಿದ್ದು, ಅಲ್ಲಿ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ಅಷ್ಟಸೇವೆಗಳು ನಡೆಯಲಿವೆ. ಇದಕ್ಕೂ ಮೊದಲು ಸಂಜೆ 3 ಗಂಟೆಯಿಂದ ಸಹಸ್ರಾರು ಭಕ್ತರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಪಾದಚಾರಿಗಳಾಗಿ ಹೊರಟು ಶ್ರೀ ಕ್ಷೇತ್ರವನ್ನು ಸೇರಿಕೊಳ್ಳಲಿದ್ದಾರೆ. ಅಲ್ಲಿ ಸಂಜೆ 6 ಗಂಟೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಪಾದಯಾತ್ರಿಕರನ್ನು ಆಶೀರ್ವದಿಸಲಿದ್ದಾರೆ.

ಲಕ್ಷದೀಪೋತ್ಸವದ ಯಶಸ್ವಿ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಸಮಿತಿಗಳನ್ನು ರಚಿಸಲಾಗಿದ್ದು, ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ದೇವರು ಸವಾರಿ ಮಾಡುವ ರಥ ಬೀದಿ, ರಾಜ ಬೀದಿಗಳನ್ನು, ದೇವಸ್ಥಾನ, ಬೀಡು, ಅನ್ನಪೂರ್ಣ ಸೇರಿದಂತೆ ಕ್ಷೇತ್ರದಲ್ಲಿ ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿದೆ.

ದೇಗುಲಗಳಿಗೆ ಧರ್ಮಸ್ಥಳದಿಂದ 14 ಕೋಟಿ ರು.: ಡಾ.ಹೆಗ್ಗಡೆ ...

 ದೀಪೋತ್ಸವದ ಎರಡನೆಯ ದಿನ ಶುಕ್ರವಾರ ಶ್ರೀ ಮಂಜುನಾಥ ಸ್ವಾಮಿಯ ಕೆರೆಕಟ್ಟೆಉತ್ಸವ ನೆರವೇರಲಿದೆ. ಡಿ. 13 ಮತ್ತು 14 ರಂದು 88ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಡಿ.15 ರಂದು ಶ್ರೀ ಚಂದ್ರನಾಥಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.

* ಕೊರೋನಾ ಹಿನ್ನೆಲೆ ಹಲವು ನಿಯಮ

ಪ್ರಸ್ತುತ ಕೊರೋನಾ ಕಾರಣದಿಂದ ಸರ್ಕಾರದ ಎಲ್ಲ ಆದೇಶಗಳನ್ನು ಪಾಲಿಸಿ ಕಾರ‍್ಯಕ್ರಮ ನಡೆಯಲಿದೆ. ಜನ ಸೇರಿಸಬಾರದು ನಿಯಮವಿದ್ದು, ಆದ್ದರಿಂದ ರಾಜ್ಯಮಟ್ಟದ ವಸ್ತಪ್ರದರ್ಶನ ಈ ಬಾರಿ ಇರುವುದಿಲ್ಲ. ಆದರೆ ಸಾಹಿತ್ಯ ಸಮ್ಮೇಳನ ಮತ್ತು ಸರ್ವಧರ್ಮ ಸಮ್ಮೇಳನ ಸರಳವಾಗಿ ನಡೆಯುತ್ತದೆ. ಈ ಕಾರ‍್ಯಕ್ರಮಗಳನ್ನು ನೇರಪ್ರಸಾರ ಮಾಡುವುದರಿಂದ ಭಕ್ತರು ಮನೆಯಲ್ಲೇ ಕುಳಿತು ಉತ್ಸವವನ್ನು ನೋಡಬೇಕು ಎಂದು ಧರ್ಮಾ​ಧಿ​ಕಾರಿ ಡಾ.ಡಿ.​ವೀ​ರೇಂದ್ರ ಹೆಗ್ಗಡೆ ಮನವಿ ಮಾಡಿ​ದ್ದಾರೆ.

ಸ್ಥಳೀಯರಿಗೆ ಉತ್ಸವ ನೋಡಲು ಆಸಕ್ತಿ ಇರುವವರು, ಆಗಮಿಸಿ ದರ್ಶನ ಮಾಡಿ ಪ್ರಸಾದ ಸ್ವೀಕರಿಸಬಹುದು ಎಂದೂ ಸ್ಪಷ್ಟ​ಪ​ಡಿ​ಸಿ​ದ್ದಾರೆ. ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಶ್ರೀ ಕ್ಷೇತ್ರ ಧರ್ಮಸ್ಥಳ’ ಯೂಟ್ಯೂಬ್‌, ಫೇಸ್ಬುಕ್‌ ಹಾಗೂ ನಮ್ಮ ಕುಡ್ಲ, ಶ್ರೀಶಂಕರ ಟಿವಿಯಲ್ಲಿ ನೇರ ಪ್ರಸಾರಗೊಳ್ಳಲಿದೆ.

click me!