
ಬೆಂಗಳೂರು (ಜು.24): ಧರ್ಮಸ್ಥಳ (Dharmasthala) ಶವ ಹೂತಿಟ್ಟ ಕೇಸ್ (body burial) ಬೆನ್ನಲ್ಲೇ ಇತಿಹಾಸದ ಮತ್ತಷ್ಟು ಸಾಕ್ಷ್ಯವನ್ನು ವಕೀಲ ಕೆ.ವಿ.ಧನಂಜಯ್ ಬಿಚ್ಚಿಟ್ಟಿದ್ದಾರೆ. ಧರ್ಮಸ್ಥಳ ನೇತ್ರಾವತಿಯಲ್ಲಿ ಮೃತಪಟ್ಟವರ ಶವಗಳನ್ನು ಕುಟುಂಬದವರಿಗೆ ಮಾಹಿತಿ ನೀಡದೇ ಪೊಲೀಸರೇ ದಫನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಳ್ತಂಗಡಿ ಪೊಲೀಸರ ಕರ್ತವ್ಯ ಲೋಪದ ಬಗ್ಗೆ ವಿಧಾನಸೌಧದಲ್ಲೂ ಭಾರೀ ಚರ್ಚೆ ನಡೆದಿತ್ತು ಎಂದು ತಿಳಿಸಿದ್ದಾರೆ.
ಹೆಣ ಕೇಳಲು ಹೋದವರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆಯಾಗಿತ್ತು. 1983ರ ಘಟನೆ ಉಲ್ಲೇಖಿಸಿ ಸದನದ ಕಡತಗಳ ದಾಖಲೆ ಸಹಿತ ಕೆ.ವಿ.ಧನಂಜಯ್ ಪತ್ರ ಬರದಿದ್ದಾರೆ.
ಶಿರಗುಪ್ಪ ತಾಲೂಕಿನ ವೆಂಕೋಬರಾವ್ ಎಂಬವರ ಪುತ್ರ ಹಾಗೂ ಮೂವರು ಸ್ನೇಹಿತರು ಧರ್ಮಸ್ಥಳ ತೆರಳಿದ್ದರು. ಅಲ್ಲಿ ನೇತ್ರಾವತಿಯಲ್ಲಿ ಸ್ನಾನಕ್ಕೆ ಇಳಿದಾಗ ವೆಂಕೋಬ್‌ರಾವ್ ಪುತ್ರ ಹಾಗೂ ಇನ್ನೊಬ್ಬ ಸಾವು ಕಂಡಿದ್ದರು. ಆದರೆ ಇಬ್ಬರ ಮೃತದೇಹಗಳನ್ನ ಮನೆಯವರಿಗೆ ತಿಳಿಸದೇ ಪೊಲೀಸರೇ ದಫನ್ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ತಿಂಗಳ ಬಳಿಕ ವಿಷಯ ತಿಳಿದು ಠಾಣೆಗೆ ಬಂದ ವೆಂಕೋಬಾರಾವ್ ಮೇಲೆ ಪೊಲೀಸರು ದೌರ್ಜನ್ಯ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
1983ರ ಅಗಸ್ಟ್ 31ರಂದು ಕರ್ನಾಟಕ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಕೂಡ ಆಗಿತ್ತು. ಶಿರಗುಪ್ಪ ಶಾಸಕ ಶಂಕರರೆಡ್ಡಿ ಪ್ರಶ್ನೆ ಮೇಲೆ ವಿಧಾನ ಸಭೆಯಲ್ಲಿ ಚರ್ಚೆಯಾಗಿತ್ತು. ಚರ್ಚೆಯಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ವಿಪಕ್ಷ ನಾಯಕ ಬಂಗಾರಪ್ಪ, ಬೆಳ್ತಂಗಡಿ ಶಾಸಕ ವಸಂತ ಬಂಗೇರ ಭಾಗಿಯಾದ ಬಗ್ಗೆ ದಾಖಲೆ ಇದೆ. ವಿಧಾನಸಭೆ ಕಡತಗಳಲ್ಲಿ ಚರ್ಚೆಯ ದಾಖಲೆಗಳು ಉಲ್ಲೇಖವಾಗಿವೆ.
ಬೆಳ್ತಂಗಡಿ ಪೊಲೀಸರನ್ನ ಪ್ರಶ್ನೆ ಮಾಡಿದ್ದಕ್ಕೆ ವೆಂಕೋಬಾರಾವ್ ಜನಿವಾರ ಹರಿದು ಲಾಕಪ್ ನಲ್ಲಿ ಇಟ್ಟು ದೌರ್ಜನ್ಯ ಮಾಡಲಾಗಿತ್ತು. ಸರ್ಕಾರ ಪೊಲೀಸ್ ದೌರ್ಜನ್ಯ ನಿಲ್ಲಿಸಬೇಕು ಎಂದು ಬೆಳ್ತಂಗಡಿ ಶಾಸಕ ವಸಂತ್ ಬಂಗೇರ ಅಗ್ರಹಿಸಿದ್ದರು. ನಾಲ್ಕು ಜನರಲ್ಲಿ ಇಬ್ಬರು ಸತ್ತಿದ್ದಾರೆ, ಉಳಿದ ಇಬ್ಬರು ಏನಾದರು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಚರ್ಚೆಯಾಗಿತ್ತು. ಧರ್ಮಸ್ಥಳ ಶವ ಹೂತ ಕೇಸ್ ಚರ್ಚೆ ಬೆನ್ನಲ್ಲೇ ಮತ್ತೆ 1983ರ ಘಟನೆ ಮುನ್ನೆಲೆಗೆ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.