ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯ ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳುವುದು ಸಂಪ್ರದಾಯ
ಚಿಕ್ಕಮಗಳೂರು (ಫೆಬ್ರವರಿ 15, 2023) :
(ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು )
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುಲಿರುವ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಪಾಲ್ಗೊಳ್ಳಲು ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ಧರ್ಮಸ್ಥಳಕ್ಕೆ ದೂರದೂರುಗಳಿಂದ ಪಾದಯಾತ್ರೆಯಲ್ಲಿ ತೆರಳುವ ಸಾವಿರಾರು ಭಕ್ತರಿಗೆ ಊಟ, ಉಪಹಾರದ ಜೊತೆಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡುವ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಯುವಕರ ತಂಡವೊಂದು ಸಾರ್ಥಕ ಸೇವೆ ಸಲ್ಲಿಸುತ್ತಿದೆ. ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯ ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳುವುದು ಸಂಪ್ರದಾಯ. ಯಥಾ ಪ್ರಕಾರ ಈ ವರ್ಷವೂ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ನೂರಾರು ಕಿ.ಮೀ. ದೂರ ನಡೆದೇ ತೆರಳುತ್ತಿದ್ದಾರೆ. ಅಂತಹ ಭಕ್ತರಿಗಾಗಿ ಉಚಿತ ಊಟ, ಉಪಹಾರದ ವ್ಯವಸ್ಥೆಯನ್ನು ಈ ತಂಡ ಮಾಡುತ್ತಿದೆ.
ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಬರುವ ಭಕ್ತರು :
undefined
ಶ್ರೀಕ್ಷೇತ್ರ ಧರ್ಮಸ್ಥಳ (Dharmasthala) ಪಾದಯಾತ್ರಿಗಳ (Padayatra) ಸೇವಾ ತಂಡದ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ನಗರಸಭೆ ಆಯುಕ್ತರು ಸೇರಿದಂತೆ ಇತರರು ನೆರವು (Help) ನೀಡಿದ್ದಾರೆ. ದಾನಿಗಳು (Donors) ನೀಡುವ ದೇಣಿಗೆಯಿಂದ ಭಕ್ತರಿಗೆ ಊಟ, ಉಪಚಾರ ಮಾಡಲಾಗುತ್ತಿದೆ. ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಬರುವ ಭಕ್ತರು ದಣಿವಾರಿಸಿಕೊಳ್ಳಲು, ವಿಶ್ರಮಿಸಲು ಸೂಕ್ತ ಸ್ಥಳವಿಲ್ಲದೆ ಪರದಾಡುವುದನ್ನು ಮನಗಂಡ ಈ ತಂಡ ಅವರ ನೆರವಿಗೆ ನಿಂತಿದೆ. ಬೆಳಗಿನಿಂದ ರಾತ್ರಿಯವರೆಗೆ ಸಾವಿರಾರು ಭಕ್ತರು ಇಲ್ಲಿ ಸ್ವಲ್ಪ ಸಮಯ ತಂಗಿದ್ದು, ಆತಿಥ್ಯ ಸ್ವೀಕರಿಸಿ ಮುಂದುವರಿಯುತ್ತಿದ್ದಾರೆ. ಮಹದೇವ್, ರಾಮು, ಧರ್ಮ, ಮುಖೇಶ್, ಆನಂದ್, ಸಮದೀಪ್, ಪ್ರಶಾಂತ್, ಗಿರಿ, ಶಿವು, ಪಾಪಣ್ಣ ಇತರರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನು ಓದಿ: Mandya: 30 ವರ್ಷ ದಾಟಿ ಮದುವೆಯಾಗದ ಹಿನ್ನೆಲೆ, ಮಹದೇಶ್ವರ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ
ಪಾದಯಾತ್ರಿಗಳ ಆರೋಗ್ಯ ತಪಾಸಣೆ :
ಈ ಯುವಕರ ತಂಡದ ಜೊತೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ವೈದ್ಯರು (Doctors) ಮತ್ತು ಸಿಬ್ಬಂದಿಗಳು ಸಹ ದಿನವಿಡೀ ಸ್ಥಳದಲ್ಲಿ ಕ್ಯಾಂಪ್ ಮಾಡಿ ಪಾದಯಾತ್ರಿಗಳ ಆರೋಗ್ಯ ತಪಾಸಣೆ (Health Check up) ಮಾಡುತ್ತಿದ್ದಾರೆ. ಜ್ವರ (Fever), ಇನ್ನಿತರೆ ಸಮಸ್ಯೆಯಿಂದ ಬಳಲುವವರಿಗೆ ಹತ್ತಿರದಲ್ಲೇ ಹೊಸಮನೆ ಬಡಾವಣೆಯಲ್ಲಿರುವ ಸಂಸ್ಥೆಯ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾನ್ಯ ಆರೋಗ್ಯ ಸಮಸ್ಯೆ ಇರುವವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಜೊತೆಗೆ ಉಚಿತ ಔಷಧಿ, ಮಾತ್ರೆಗಳನ್ನು ನೀಡಲಾಗುತ್ತಿದೆ. ತಂಡದಲ್ಲಿ ವೈದ್ಯರುಗಳಾದ ಡಾ. ಹೇಮಂತ್, ಡಾ. ಅರ್ಫಾನ್, ಡಾ. ಸಚಿನ್ ಮತ್ತು ಸಿಬ್ಬಂದಿ ಇದ್ದಾರೆ. ವೈದ್ಯರು ಹಾಗೂ ಯುವಕರ ಸೇವಾ ಕಾರ್ಯದ ಬಗ್ಗೆ ಪಾದಯಾತ್ರಿ ಭಕ್ತರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಮಾರ್ಗದಲ್ಲಿ ತೆರೆದ ನೀರು, ಶೌಚಾಲಯ, ಕಸ ವಿಲೇವರಿ ಘಟಕ
ಮೂಡಿಗೆರೆ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ದಾನಿಗಳ ನೆರವಿನಲ್ಲಿ ಸ್ವಯಂ ಸೇವಕರು ಧರ್ಮಸ್ಥಳಕ್ಕೆ ತೆರಳುವ ಪಾದಚಾರಿಗಳಿಗೆ ನಿತ್ಯ ದಾಸೋಹ ವ್ಯವಸ್ಥೆ ಮಾಡುತ್ತಿದ್ದಾರೆ. ರಸ್ತೆಯುದ್ದಕ್ಕೂ ಭಕ್ತರಿಗೆ ತಂಪು ಪಾನಿಯ, ಕಸವಿಲೇವರಿ ಘಟಕ, ಕುಡಿಯುವ ನೀರು ಸೇರಿದಂತೆ ತಂಗಲು, ವಿಶ್ರಮಿಸಿಕೊಳ್ಳಲು ವ್ಯವಸ್ಥೆ ಮಾಡುವ ಮೂಲಕ ಸಾರ್ಥಕ ಸೇವೆಯನ್ನು ಹಲವು ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ಇದನ್ನೂ ಓದಿ: ಶೃಂಗೇರಿಗೆ ಪಾದಯಾತ್ರೆ ಹೊರಟವರಿಗೆ ಬೀದಿನಾಯಿ ಸಾಥ್, ಕ್ಷೇತ್ರ ತಲುಪಿದ ನಂತರ ಕಣ್ಮರೆ!