
ರಾಯಚೂರು (ನ.24): ಇತ್ತೀಚೆಗೆ ಸಾರ್ವಜನಿಕ ಸಾರಿಗೆ ಬಸ್ ಚಾಲಕ-ಕಂಡಕ್ಟರ್ ಮೇಲೆ ಪುಂಡರು ಹಲ್ಲೆ ಮಾಡುವ, ಬೆದರಿಕೆಯೊಡ್ಡುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಇದೀಗ ರಾಯಚೂರು ಜಿಲ್ಲೆಯಲ್ಲೂ ಅಂತಹದ್ದೇ ಪ್ರಕರಣ ಮರುಕಳಿಸಿದೆ.
ಹೌದು ಓವರ್ ಟೇಕ್ ಮಾಡಿದ ವಿಚಾರಕ್ಕೆ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮೂವರು ಪುಂಡರು ಕಟ್ಟಿಗೆ ಕೊಡಲಿ ಹಿಡಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಬುಂಕಲದೊಡ್ಡಿ ಗ್ರಾಮದ ಬಳಿ ನಡೆದಿದೆ. ಹುಲಗಯ್ಯ,ತಿಮ್ಮಣ್ಣ ಹಾಗೂ ಪುರುಷೋತ್ತಮ್ ಹಲ್ಲೆ ಮಾಡಿರುವ ಪುಂಡರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹಲ್ಲೆಯಿಂದ ಗಾಯಗೊಂಡಿರುವ ಬಸ್ ಚಾಲಕ ಅಯ್ಯಣ್ಣ, ಕಾರ್ಯನಿರ್ವಾಹಕ ಬಸವರಾಜ್ ಜಾಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ದೇವದುರ್ಗ-ಬೆಂಗಳೂರು ಮಾರ್ಗದ ಬಸ್ ಎಂದಿನಂತೆ ಪ್ರಯಾಣಿಕರನ್ನೊತ್ತು ಹೊರಟಿತ್ತು. ಜಾಲಹಳ್ಳಿ ಸಮೀಪ ಬಸ್ ಓಡುತ್ತಿದ್ದಾಗ ಬಸ್ ಮುಂದೆ ಒಂದೇ ಬೈಕ್‌ನಲ್ಲಿ ಮೂವರು ಆರೋಪಿಗಳು ಯಾವುದೇ ಹೆಲ್ಮೆಟ್ ಇಲ್ಲದೆ, ರೂಲ್ಸ್ ಫಾಲೋ ಮಾಡದೆ ರಸ್ತೆ ಮಧ್ಯದಲ್ಲೇ ಅಡ್ಡಾದಿಡ್ಡಿ ರೈಡ್ ಮಾಡಿದ್ದಾರೆ. ಬಸ್ ಚಾಲಕ ಬೈಕ್ ಓವರ್ ಟೇಕ್ ಮಾಡಿದ್ದಾರೆ ಎನ್ನಲಾಗಿದೆ, ಓವರ್ ಟೇಕ್ ಮಾಡಿದರೆಂಬ ಕ್ಷುಲ್ಲಕ ವಿಚಾರ ಇಟ್ಟುಕೊಂಡು ಹುಲಗಯ್ಯ, ತಿಮ್ಮಣ್ಣ ಹಾಗೂ ಪುರುಷೋತ್ತಮ್ ಮೂವರು ಆರೋಪಿಗಳು ಬಸ್ ಅಡ್ಡಗಟ್ಟಿದ್ದಾರೆ.
ಪ್ರತ್ಯಕ್ಷದರ್ಶಿಗಳು, ಬಸ್ ಚಾಲಕ, ನಿರ್ವಾಹಕ ಹೇಳುವ ಪ್ರಕಾರ, ಓವರ್ ಟೇಕ್ ಮಾಡಿದ ವಿಚಾರಕ್ಕೆ ಹಲ್ಲೆ ಮಾಡಿದ್ದಾರೆ. ರಸ್ತೆ ಮಧ್ಯೆ ಬಸ್ ಅಡ್ಡಗಟ್ಟಿದ್ದಾರೆ. ಬಸ್ ನಿಲ್ಲಿಸಿ ವಾಗ್ವದ ನಡೆಸಿದ್ದಾರೆ. ಈ ವೇಳೆ ರಸ್ತೆ ಮಧ್ಯೆದಲ್ಲಿ ಬೈಕ್ ಚಲಾಯಿಸಿದರೆ ಬಸ್ ಮುಂದೆ ಹೋಗೋದು ಹೇಗೆ ಎಂದು ಪ್ರಶ್ನಿಸಿದ ಚಾಲಕ ಅಯ್ಯಣ್ಣರ ಮೇಲೆ ಪುಂಡರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಆರೋಪಿಸಲಾಗಿದೆ. ಬೆಂಗಳೂರಿಗೆ ಹೊರಟಿದ್ದ ಪ್ರಯಾಣಿಕರು ದಾರಿ ಮಧ್ಯೆ ಬಸ್ ಚಾಲಕನ ಮೇಲೆ ನಡೆದ ಹಲ್ಲೆಯಿಂದ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಮನಬಂದಂತೆ ಥಳಿಸಿದ್ದರಿಂದ ಚಾಲಕ ಹಾಗೂ ನಿರ್ವಾಹಕರಿಗೆ ಗಾಯಗಳಾಗಿದ್ದು ಸಮೀಪದ ಜಾಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಘಟನೆ ಸಂಬಂಧ ಆರೋಪಿ ಹುಲಗಯ್ಯ ಎಂಬಾತನನ್ನ ಪೊಲೀಸರು ಬಂಧಿಸಿದ್ದು, ಮೂವರ ವಿರುದ್ಧ ಪ್ರಕರಣ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.