ಹಳ್ಳಿ ಸುತ್ತುತ್ತಿರುವ ವೈದ್ಯರು, ತಗ್ಗಿದ ಕೊರೋನಾ ಸೋಂಕು..!

By Kannadaprabha News  |  First Published Jun 12, 2021, 11:32 AM IST

* ಗ್ರಾಮೀಣ ಭಾಗದಲ್ಲಿ 100ಕ್ಕೂ ಅಧಿಕ ವೈದ್ಯರ ಸಂಚಾರ
* ವೈದ್ಯರ ನಡೆ, ಹಳ್ಳಿಯ ಕಡೆ ಯೋಜನೆಗೆ ಉತ್ತಮ ಸ್ಪಂದನೆ
* ವೈದ್ಯರಿಂದ ಜಾಗೃತಿ ಮೂಡಿಸುವ, ತಪಾಸಣೆ ನಡೆಸುವ ಕಾರ್ಯ
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.12): ವೈದ್ಯರ ನಡೆ, ಹಳ್ಳಿಯ ಕಡೆ ಎನ್ನುವ ಘೋಷಣೆಯೊಂದಿಗೆ ಸರ್ಕಾರ ಆರಂಭಿಸಿದ ಯೋಜನೆಯಿಂದ ಜಿಲ್ಲೆಯಲ್ಲಿ ವೈದ್ಯರು ಹಳ್ಳಿಯತ್ತ ಮುಖ ಮಾಡಿದ್ದಾರೆ. ಕಳೆದೊಂದು ವಾರದಿಂದ ಹಳ್ಳಿ ಹಳ್ಳಿಯಲ್ಲಿ ಸುತ್ತಾಡುತ್ತಿದ್ದಾರೆ. ಕೋವಿಡ್‌ ಸೇರಿದಂತೆ ನಾನಾ ಕಾಯಿಲೆಯಿಂದ ಜರ್ಝರಿತರಾದವರಿಗೆ ಧೈರ್ಯ ತುಂಬಿ, ಅವರನ್ನು ಚಿಕಿತ್ಸೆಗೆ ಅಣಿಗೊಳಿಸುತ್ತಿದ್ದಾರೆ.

Tap to resize

Latest Videos

ಹೌದು, ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹೊರತುಪಡಿಸಿ ಜಿಲ್ಲಾದ್ಯಂತ ಸುಮಾರು 100 ವೈದ್ಯರು ಈಗ ಹಳ್ಳಿಗಳಲ್ಲಿಯೇ ಇರುತ್ತಾರೆ. ಪ್ರತಿ ಹಳ್ಳಿ ಹಳ್ಳಿಯನ್ನು ಸುತ್ತಾಡಿ, ಆರೋಗ್ಯದ ಜಾಗೃತಿ ಮೂಡಿಸುತ್ತಿದ್ದಾರೆ. ನಾವು ನಿಮ್ಮ ಚಿಕಿತ್ಸೆಗೆ ಸಿದ್ಧವಿದ್ದೇವೆ, ನೀವೇನೂ ಅಂಜಬೇಡಿ ಎಂದು ಧೈರ್ಯ ತುಂಬುತ್ತಿದ್ದಾರೆ. ಚಿಕಿತ್ಸೆಗೆ ಮುಂದಾಗುವವರಿಗೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆಯನ್ನು ಸಹ ನೀಡುತ್ತಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾದಿಂದ ತತ್ತರಿಸಿರುವ ಗ್ರಾಮಗಳನ್ನು ಆಯ್ದುಕೊಂಡು, ಅಲ್ಲಿಗೆ ಹೋಗಿ ವೈದ್ಯರು-ನಾವು ಚಿಕಿತ್ಸೆ ನೀಡಲು ಇನ್ನು ಮುಂದೆ ನಿಮ್ಮೂರಿಗೆ ಬರುತ್ತೇವೆ. ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದಾ ಲಭ್ಯ ಇರುತ್ತೇವೆ ಎನ್ನುತ್ತಿದ್ದಾರೆ. ಇದು ಹಳ್ಳಿಯಲ್ಲಿ ರೋಗಿಗಳು ಸೇರಿದಂತೆ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಳ ಮಾಡಿದೆ. ಹಳ್ಳಿಗೆ ವೈದ್ಯರೇ ಬರುವುದಿಲ್ಲ, ನಮಗೆ ಪ್ಯಾಟಿಯಲ್ಲಿ ಚಿಕಿತ್ಸೆ ದೊರೆಯುವುದೇ ಇಲ್ಲ ಎಂದು ಕುಳಿತವರಿಗೆ ಸಮಾಧಾನವಾಗಿದೆ.

ಕೊಪ್ಪಳ: ಈ ಗ್ರಾಮದತ್ತ ಕಾಲಿಡದ ಕೊರೋನಾ..!

ತಗ್ಗಿದ ಕೊರೋನಾ:

ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ತಗ್ಗುತ್ತಿದೆ. ಸಾವಿನ ಪ್ರಮಾಣವೂ ಕಳೆದೊಂದು ವಾರದಿಂದ ಬಹಳ ದೊಡ್ಡ ಪ್ರಮಾಣದಲ್ಲಿಯೇ ತಗ್ಗುತ್ತಿದೆ. ಹತ್ತಾರು ಸಾವುಗಳು ಆಗುತ್ತಿರುವುದು ಈಗ ಒಂದು, ಎರಡಕ್ಕೆ ಬಂದು ನಿಂತಿದೆ. ಇದು ಸಹ ಸಂಪೂರ್ಣ ಶೂನ್ಯವಾಬೇಕು. ಕೋವಿಡ್‌ನಿಂದ ಯಾರೂ ಸಾಯಬಾರದು ಎನ್ನುವಂತಾಗಲಿ ಎನ್ನುತ್ತಿದ್ದಾರೆ.

600-700ರ ಗಡಿಯಲ್ಲಿ ಇದ್ದ ಕೊರೋನಾ ಸೋಂಕಿತರ ಸಂಖ್ಯೆ ಈಗ ಜಿಲ್ಲೆಯಲ್ಲಿ ಕೇವಲ 100-200 ಗಡಿಯಲ್ಲಿಯೇ ಇದೆ. ಹೀಗಾಗಿ ಜನರು ಸಹ ನಿಟ್ಟುಸಿರು ಬಿಟ್ಟಿದ್ದಾರೆ. ಕೊರೋನಾ ಪಾಸಿಟಿವ್‌ ರೇಟ್‌ ಶೇ. 6-7ಕ್ಕೆ ಇಳಿದಿದೆ. ಇದು ಶೇ. 30-40ರಷ್ಟು ಆಗಿದ್ದಾಗ ಭಯಾನಕ ವಾತಾವರಣ ಇತ್ತು. ಆಸ್ಪತ್ರೆಯಲ್ಲಿ ಬೆಡ್‌ ಇರುತ್ತಿರಲಿಲ್ಲ, ಆಕ್ಸಿಜನ್‌ ಬೆಡ್‌ ಮತ್ತು ವೆಂಟಿಲೆಟರ್‌ಗಾಗಿ ಹಾಹಾಕಾರ ಎದ್ದಿತ್ತು. ಆದರೆ, ಕಳೆದೊಂದು ವಾರದಿಂದ ಅಂಥ ಹಾಹಾಕಾರ ಇಲ್ಲ. ಬೆಡ್‌ಗಳು ಖಾಲಿ ಇವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಈಗ ಬೆಡ್‌ಗಳ ಆರಾಮವಾಗಿ ಸಿಗುತ್ತವೆ. ಹೀಗಾಗಿ, ಕೋವಿಡ್‌ ನಿಯಂತ್ರಣಕ್ಕೆ ಬಂದಿರುವುದು ಮಾತ್ರ ಜನರಲ್ಲಿ ಇದ್ದ ಆತಂಕ ತನ್ನಿಂದ ತಾನೆ ದೂರಾಗುತ್ತಿದೆ.

ಹುದ್ದೆಗಳು ಖಾಲಿ ಖಾಲಿ:

ಈಗ ಸರ್ಕಾರ ಘೋಷಣೆ ಮಾಡಿರುವ ಯೋಜನೆಯಿಂದ ವೈದ್ಯರು ಹಳ್ಳಿಯತ್ತ ಹೋಗುತ್ತಿದ್ದಾರೆ. ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ವೈದ್ಯರ ಹುದ್ದೆಗಳು ಬಹುತೇಕ ಖಾಲಿಯಾಗಿಯೇ ಇವೆ. ಸುಮಾರು ವರ್ಷಗಳಿಂದ ಇಲ್ಲಿಗೆ ಯಾರೂ ಬರುತ್ತಲೇ ಇಲ್ಲ. ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುರ್ವೇದ ವೈದ್ಯರೇ ಆಸರೆಯಾಗಿದ್ದಾರೆ. ಆದರೆ, ಇವರು ಇದ್ದರೂ ಅಲೋಪತಿ ಔಷಧ ಬಳಕೆ ಮಾಡುವಂತೆಯೇ ಇಲ್ಲ. ಇದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹೆರಿಗೆಗಾಗಿ ಜಿಲ್ಲಾಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಗಳಿಗೆ ಬರಬೇಕು. ಹಲವು ವರ್ಷಗಳಿಂದ ಅರ್ಧದಷ್ಟುವೈದ್ಯರ ಕೊರತೆ ಇದೆ. ಇವುಗಳನ್ನು ಭರ್ತಿ ಮಾಡುವ ಕಾರ್ಯ ಆಗುತ್ತಲೇ ಇಲ್ಲ.

ವೈದ್ಯರ ನಡೆ, ಹಳ್ಳಿಯ ಕಡೆ ಎನ್ನುವ ಯೋಜನೆಯನ್ನು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಜಾರಿ ಮಾಡಲಾಗುತ್ತಿದೆ. 100ಕ್ಕೂ ಅಧಿಕ ವೈದ್ಯರು ಈಗ ಹಳ್ಳಿ ಹಳ್ಳಿಗಳನ್ನು ಸುತ್ತಾಡುತ್ತಿದ್ದಾರೆ. ಇವರ ಜಾಗೃತಿಯಿಂದಲೇ ಹಳ್ಳಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಲು ಸಾಧ್ಯವಾಯಿತು ಎಂದು ಕೊಪ್ಪಳ ಡಿಎಚ್‌ಒ ಲಿಂಗರಾಜ ತಿಳಿಸಿದ್ದಾರೆ. 
 

click me!