ಸಕಾಲಕ್ಕೆ ಆಮ್ಲಜನಕ ಪೂರೈಸುವ ಮೂಲಕ ಸಂಭವನೀಯ ದುರಂತ ತಪ್ಪಿಸಿದ ಅಶ್ವತ್ಥನಾರಾಯಣ| ಡಿಸಿಎಂ ಸೂಚನೆ ಮೇರೆಗೆ ಯುನಿವರ್ಸಲ್ ಕಂಪನಿ-ಕೆ.ಸಿ.ಜನರಲ್ ನಡುವಿನ ಮಾರ್ಗ ಮಧ್ಯೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ ಪೊಲೀಸರು|
ಬೆಂಗಳೂರು(ಮೇ.07): ರಾಜಧಾನಿಯಲ್ಲಿರುವ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಾಮರಾಜನಗರ ಜಿಲ್ಲೆಯ ಮಾದರಿಯಲ್ಲಿ ಸಂಭವಿಸುತ್ತಿದ್ದ ಭಾರೀ ಅನಾಹುತವನ್ನು ತಪ್ಪಿಸಿರುವ ಸರ್ಕಾರ, ಅಧಿಕಾರಿಗಳು, ವೈದ್ಯರು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ 200 ಜನರ ಜೀವ ಉಳಿಸಿದ ಘಟನೆ ನಡೆದಿದೆ.
ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಅಧಿಕಾರಿಗಳು ಹಾಗೂ ವೈದ್ಯರು ಶ್ರಮ ಪಟ್ಟು ಸೂಕ್ತ ಸಮಯಕ್ಕೆ ‘ಆಪರೇಷನ್ ಆಮ್ಲಜನಕ’ ನಡೆಸಿ, ಜೀರೋ ಟ್ರಾಫಿಕ್ ಮೂಲಕ ಸಕಾಲಕ್ಕೆ ಆಮ್ಲಜನಕ ಪೂರೈಸುವ ಮೂಲಕ ಸಂಭವನೀಯ ದುರಂತ ತಪ್ಪಿಸಿದ್ದಾರೆ. ವೆಂಟಿಲೇಟರ್ ಹಾಗೂ ಆಕ್ಸಿಜನ್ ಬೆಡ್‌ಗಳ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಒಟ್ಟು 200 (100 ಬೆಡ್ ಐಸಿಯು ವೆಂಟಿಲೇಟರ್, 100 ಆಮ್ಲಜನಕ ಸಹಿತ ಬೆಡ್) ಕೋವಿಡ್ ಸೋಂಕಿತರ ಅಮೂಲ್ಯ ಜೀವ ರಕ್ಷಿಸಿದ್ದಾರೆ.
undefined
ಪ್ರಾಣಾಪಾಯದಲ್ಲಿದ್ದ 200 ಜೀವ: ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 200 ಸೋಂಕಿತರು ಆಕ್ಸಿಜನ್ ಬೆಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರಿಗೆ ಒದಗಿಸಲಾಗುತ್ತಿದ್ದ ಆಮ್ಲಜನಕವು ರಾತ್ರಿಯ ವೇಳೆಗೆ ಖಾಲಿಯಾಗುತ್ತಾ ಬಂದಿತ್ತು. ‘ಪ್ರಾಕ್ಸಿ ಏರ್’ ಎನ್ನುವ ಕಂಪನಿ ಬುಧವಾರ ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡಬೇಕಾಗಿತ್ತು. ಆದರೆ, ಬಳ್ಳಾರಿಯಿಂದ ಬರಬೇಕಾಗಿದ್ದ ಆ ಕಂಪನಿಯ ಟ್ಯಾಂಕರ್ ರಾತ್ರಿ 11.30 ಆದರೂ ಬರಲೇ ಇಲ್ಲ. ಆಗ ಅಶ್ವತ್ಥನಾರಾಯಣ ಅವರ ಸೂಚನೆ ಮೇರೆಗೆ ಪೊಲೀಸರು ಯುನಿವರ್ಸಲ್ ಕಂಪನಿ-ಕೆ.ಸಿ.ಜನರಲ್ ನಡುವಿನ ಮಾರ್ಗ ಮಧ್ಯೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಮೊದಲು 20 ಜಂಬೋ ಸಿಲಿಂಡರ್‌ಗಳನ್ನು ತರಿಸಲು ಸಹಕರಿಸಿದರು. ಬೆಳಗಿನ ಜಾವ 4.45ರವರೆಗೆ ರೋಗಿಗಳಿಗೆ ಆ ಸಿಲಿಂಡರ್‌ಗಳ ಮೂಲಕ ಆಮ್ಲಜನಕ ಸಂಪರ್ಕ ಕಲ್ಪಿಸಿದ್ದಾರೆ.
ಕೊರೋನಾ ಸೋಂಕಿತರ ಕ್ಷೇಮ ವಿಚಾರಿಸಿದ ಡಿಸಿಎಂ ಅಶ್ವತ್ಥನಾರಾಯಣ
ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಲಿಕ್ವಿಡ್ ಆಕ್ಸಿಜನ್ ಇರುವ ಟ್ಯಾಂಕರ್ ಕೂಡ ಯುನಿವರ್ಸಲ್ ಕಂಪನಿಯಿಂದ ಕೆ.ಸಿ.ಜನರಲ್ ಆಸ್ಪತ್ರೆಗೆ ಬಂದಿದೆ. ಅಲ್ಲಿಗೆ ಇಡೀ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು. ಬದಲಿಗೆ ಆ ಟ್ಯಾಂಕರ್ ಕೆ.ಸಿ.ಜನರಲ್‌ಗೆ ಬರುವ ಬದಲು ಖಾಸಗಿ ಆಸ್ಪತ್ರೆಗೆ ಹೋಗಿದೆ ಎಂಬ ವಿಷಯ ತಿಳಿದು ಬಂದಿದೆ.
ಕೂಡಲೇ ಸಿಬ್ಬಂದಿ ಆಕ್ಸಿಜನ್ ನಿರ್ವಹಣೆ ಹೊಣೆ ಹೊತ್ತಿದ್ದ ವೈದ್ಯಾಧಿಕಾರಿ ಡಾ.ರೇಣುಕಾ ಪ್ರಸಾದ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಡಾ. ರೇಣುಕಾಪ್ರಸಾದ್ ಅವರು ಪ್ರಾಕ್ಸಿ ಏರ್ ಸಂಸ್ಥೆಯನ್ನು ಸಂಪರ್ಕಿಸುವ ಪ್ರಯತ್ನ ಸಫಲವಾಗಿಲ್ಲ. ತಕ್ಷಣ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಮಧ್ಯರಾತ್ರಿ 12.30ರ ಹೊತ್ತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಸಚಿವ ಡಾ. ಅಶ್ವತ್ಥನಾರಾಯಣ ಯುನಿವರ್ಸಲ್ ಎಂಬ ಕಂಪನಿ ಜತೆ ಮಾತನಾಡಿದರಲ್ಲದೆ ತುರ್ತಾಗಿ ಆಕ್ಸಿಜನ್ ವ್ಯವಸ್ಥೆ ಮಾಡಿದರು.
ಬುಧವಾರ ರಾತ್ರಿ 11.30ರಿಂದ ಗುರುವಾರ ಬೆಳಗಿನ ಜಾವ 4.45ರ ವರೆಗೆಗೂ ಎಲ್ಲಾ 200 ಸೋಂಕಿತರ ಮೇಲೆ ತೀವ್ರ ನಿಗಾ ಇಟ್ಟು, ಯಾರಿಗೆ ಹೆಚ್ಚು, ಯಾರಿಗೆ ಕಡಿಮೆ ಆಮ್ಲಜನಕದ ಅಗತ್ಯ ಇದೆ ಎಂಬುದನ್ನು ನೋಡಿಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಸೋಂಕಿತರಿಗೆ ಆಕ್ಸಿಜನ್ ಕಡಿಮೆಯಾಗದಂತೆ ನೋಡಿಕೊಂಡೆವು ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.
ವಿಷಯ ಗೊತ್ತಾದ ಕೂಡಲೇ ನಾನು ಕಾರ್ಯಪ್ರವೃತ್ತನಾದೆ. ಒಂದೆಡೆ ಆಕ್ಸಿಜನ್ ತರಿಸುವುದು, ಇನ್ನೊಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಜೀವ ರಕ್ಷಣೆ ಮಾಡುವುದು. ಎರಡೂ ಸವಾಲುಗಳನ್ನು ಮೆಟ್ಟಿನಿಲ್ಲಲು ವೈದ್ಯರು, ಸಿಬ್ಬಂದಿ, ಪೊಲೀಸರು ಸಹಕರಿಸಿದರು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona