'ಆದೇಶ ತಪ್ಪಾಗಿ ಅರ್ಥೈಸಿಕೊಂಡ ಜನರು: ಲಾಕ್‌ಡೌನ್‌ ಸಡಿಲಿಕೆ ಇಲ್ಲ'

By Kannadaprabha NewsFirst Published Apr 30, 2020, 9:30 AM IST
Highlights

ಜಿಲ್ಲಾಡಳಿತ ಆದೇಶ ತಪ್ಪಾಗಿ ಅರ್ಥೈಸಿಕೊಂಡ ಜನರು| ಮಾಸ್ಕ್‌ ಹಾಕಿಕೊಳ್ಳಿ, ಸಾಮಾಜಿಕ ಅಂತರ ಪಾಲಿ​ಸಿ| ಬಳ್ಳಾರಿ ಜಿಲ್ಲೆ ಆರೆಂಜ್‌ ಜೋನ್‌ನಲ್ಲಿರುವುದರಿಂದ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕೆಲವೊಂದು ನಿಯಮಗಳನ್ನು ಸಡಿಲಿಸಿದೆ| ಇದು ಸಂಪೂರ್ಣ ಸಡಿಲಿಕೆಯಂತೆ ಭಾವಿಸಿದಂತಿರುವ ಜನರು ಲಾಕ್‌ಡೌನ್‌ ಮುಂಚೆಯಂತೆ ತಿರುಗಾಟ ಆರಂಭಿಸಿದ್ದಾರೆ|

ಕೆ.ಎಂ.ಮಂಜುನಾಥ್‌

ಬಳ್ಳಾರಿ(ಏ.30):  ಲಾಕ್‌ಡೌನ್‌ನಿಂದ ಕಂಗೆಟ್ಟವರಿಗೆ ಜಿಲ್ಲಾಡಳಿತ ನೀಡಿದ್ದ ಒಂದಷ್ಟು ಸಡಿಲಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಂತಿರುವ ಜಿಲ್ಲೆಯ ಜನರು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ. ಮಾಸ್ಕ್‌ ಇಲ್ಲದೆ ಓಡಾಟ, ಸಾಮಾಜಿಕ ಅಂತರದ ಬಗ್ಗೆ ನಿರ್ಲಕ್ಷ್ಯ, ವಿನಾಕಾರಣ ಬೈಕ್‌ಗಳಲ್ಲಿ ತಿರುಗಾಟ ಹೆಚ್ಚುತ್ತಿದ್ದು ಜಿಲ್ಲೆಯಲ್ಲಿ ಮತ್ತಷ್ಟೂ ಕೊರೋನಾ ವೈರಸ್‌ ಪ್ರಕರಣ ಹೆಚ್ಚಾಗುವ ಭೀತಿ ಸೃಷ್ಟಿಸಿದೆ.

ಕೊರೋನಾ ವೈರಸ್‌ ಪ್ರಕರಣಗಳಲ್ಲಿ ಬಳ್ಳಾರಿ ಜಿಲ್ಲೆ ಆರೆಂಜ್‌ ಜೋನ್‌ನಲ್ಲಿರುವುದರಿಂದ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕೆಲವೊಂದು ನಿಯಮಗಳನ್ನು ಸಡಿಲಿಸಿದೆ. ಇದು ಸಂಪೂರ್ಣ ಸಡಿಲಿಕೆಯಂತೆ ಭಾವಿಸಿದಂತಿರುವ ಜನರು ಲಾಕ್‌ಡೌನ್‌ ಮುಂಚೆಯಂತೆ ತಿರುಗಾಟ ಆರಂಭಿಸಿದ್ದಾರೆ. ಮಾಸ್ಕ್‌ಗಳನ್ನು ಧರಿಸಿದೆ ಓಡಾಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾಜಿಕ ಅಂತರ ಬಹುತೇಕ ನಿರ್ಲಕ್ಷ್ಯ ವಹಿಸಲಾಗಿದೆ. ಜಿಲ್ಲಾಡಳಿತ ಸೂಚನೆ ಸರಿಯಾಗಿ ಅರಿಯದೆ ಅನೇಕ ಆಟೋಗಳು ರಸ್ತೆಗಿಳಿದು ಪೊಲೀಸ್‌ ಠಾಣೆ ಪಾಲಾಗಿವೆ.

ಇಡೀ ಜಗತ್ತಿಗೆ ಕೊರೋನಾ ಆತಂಕವಾದ್ರೆ ಬಳ್ಳಾರಿಗೆ ಡೆಂಗ್ಯೂ ಕಾಟ: ಆತಂಕದಲ್ಲಿ ಜನತೆ

ಲಾಕ್‌ಡೌನ್‌ ಶುರುವಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ನಿರ್ಮಿಸಿ ಸಾರ್ವಜನಿಕರ ಓಡಾಟ ಸಂಪೂರ್ಣ ನಿರ್ಬಂಧಿಸಲಾಗಿತ್ತು. ತುರ್ತು ಚಿಕಿತ್ಸೆಗಳಿಗೆ ಮಾತ್ರ ಅವಕಾಶವಿತ್ತು. ಬೆಳಗ್ಗೆ 11 ಗಂಟೆಯಾಗುತ್ತಿದ್ದಂತೆಯೇ ರಸ್ತೆಯಲ್ಲಿ ಗಸ್ತು ಆರಂಭಿಸುತ್ತಿದ್ದ ಪೊಲೀಸರು, ವಿನಾಕಾರಣ ಓಡಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸುತ್ತಿದ್ದರು. ಇಷ್ಟಾಗಿಯೂ ಜನರ ಓಡಾಟ ನಿಯಂತ್ರಣ ಪೊಲೀಸರಿಗೆ ಕಷ್ಟಸಾಧ್ಯ ಎನಿಸಿತ್ತು. ಕಳೆದ ಎರಡು ದಿನಗಳಿಂದ ನಗರ ಸೇರಿದಂತೆ ಜಿಲ್ಲೆಯಲ್ಲಿ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಲಾಗಿದ್ದು, ಪೊಲೀಸರ ಗಸ್ತು ಸಂಪೂರ್ಣ ಸ್ಥಗಿತವಾಗಿದೆ. ಇದು ಲಾಕ್‌ಡೌನ್‌ ಪೂರ್ಣ ಸಡಿಲಿಕೆಯ ಭಾವ ಮೂಡಿಸಿದ್ದು, ಸಾರ್ವಜನಿಕರ ಮನಸೋ ಇಚ್ಛೆ ಓಡಾಟ ಶುರುವಾಗಿದೆ. ಬಸ್‌, ಆಟೋ ಸೇರಿದಂತೆ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದರೂ ನಗರದ ಪ್ರಮುಖ ರಸ್ತೆಗಳು ಸಾರ್ವಜನಿಕರಿಂದ ತುಂಬಿಕೊಳ್ಳುತ್ತಿವೆ. ಜಿಲ್ಲೆಯಲ್ಲಿ 13 ವೈರಸ್‌ ಸೋಂಕಿತರ ಪೈಕಿ 5 ಜನರು ಗುಣಮುಖರಾಗಿದ್ದು ಇನ್ನು 8 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವೇಳೆ ಸಾಮಾಜಿಕ ಅಂತರದ ಬಗ್ಗೆ ನಿರ್ಲಕ್ಷ್ಯ ಮುಂದುವರಿದರೆ ಅಪಾಯದ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.

ಸಾರ್ವಜನಿಕರು ಗೊಂದಲ ಪಡಬೇಕಾಗಿಲ್ಲ. ಈ ಹಿಂದಿನ ನಿಯಮಗಳು ಮೇ 3ರವರೆಗೆ ಜಾರಿಯಲ್ಲಿರುತ್ತವೆ. ಜಿಲ್ಲೆಯೊಳಗೆ ಓಡಾಡುವುದು ಸೇರಿದಂತೆ ಕೆಲವೊಂದಕ್ಕೆ ಸಡಿಲಿಕೆ ಬಿಟ್ಟರೆ ಉಳಿದೆಲ್ಲವೂ ಈ ಹಿಂದಿನ ನಿಯಮಗಳು ಜಾರಿಯಲ್ಲಿರುತ್ತವೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಹೇಳಿದ್ದಾರೆ.  

ಸಾಮಾಜಿಕ ಅಂತರ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಮಾಸ್ಕ್‌ ಕಡ್ಡಾಯವಾಗಿ ಧರಿಸುವುದರಿಂದ ಹೆಚ್ಚು ಸುರಕ್ಷಿತ. ಸಾರ್ವಜನಿಕರು ಇದನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ವೈರಾಣು ಹಬ್ಬುವ ಸಾಧ್ಯತೆ ಹೆಚ್ಚು ಎಂದು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಮಧುಸೂದನ್‌ ಕಾರಿಗನೂರು ಅವರು ತಿಳಿಸಿದ್ದಾರೆ. 

ಬಳ್ಳಾರಿ ಜಿಲ್ಲೆಯ ಸುರಕ್ಷತೆಯ ಕವಚದಲ್ಲಿರಬೇಕಾದರೆ ಇನ್ನಷ್ಟು ದಿನಗಳ ಕಾಲ ಲಾಕ್‌ಡೌನ್‌ ಮುಂದುವರಿಸಬೇಕು. ಜನರ ಓಡಾಟ ನೋಡಿದರೆ ಖಂಡಿತ ಭಯವಾಗುತ್ತದೆ. ವೈರಾಣು ಹಬ್ಬಿದರೆ ಏನು ಗತಿ ಎಂದು ಆತಂಕವಾಗುತ್ತದೆ ಎಂದು ಬಳ್ಳಾರಿಯ ಶಿಕ್ಷಕ ಮರಿಯಪ್ಪ ಅವರು ಹೇಳಿದ್ದಾರೆ.
 

click me!