ನಿರಾಶ್ರಿತ ಕೇಂದ್ರಗಳಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಜಿಲ್ಲೆಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿ: ಜಿಲ್ಲಾಧಿಕಾರಿ ಆರ್.ಗಿರೀಶ್| ಎಷ್ಟು ಚೆಕ್‌ಪೋಸ್ಟ್‌ಗಳ ಅವಶ್ಯಕತೆಯಿದೆ ಎಂಬ ವರದಿ ನೀಡಿ| ಜಿಲ್ಲೆಯಿಂದ ಕಾರ್ಮಿಕರು ಒಂದು ಬಾರಿ ಪ್ರಯಾಣ ಮಾಡಲು ಮಾತ್ರ ಅವಕಾಶ| ಕೋವಿಡ್-19 ನಿಯಂತ್ರಣಕ್ಕೆ ಬರುವವರೆಗೂ ಮತ್ತೆ ಪ್ರಯಾಣ ಮಾಡಲು ಅವಕಾಶವಿಲ್ಲ| ಎಲ್ಲ ತಾಲೂಕಿನ ತಹಶೀಲ್ದಾರ್‌ಗಳೊಂದಿಗೆ ಡಿಸಿ ವೀಡಿಯೋ ಸಂವಾದ|
ಹಾಸನ(ಏ.29): ಮುಖ್ಯ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಅಳವಡಿಸಿರುವುದರಿಂದ ಒಳದಾರಿಗಳ ಮೂಲಕ ಹೊರ ಜಿಲ್ಲೆಯಿಂದ ಜನರು ನುಸುಳಿ ಬರುತ್ತಿದ್ದಾರೆ. ಹಾಗಾಗಿ ಅಂತಹ ಒಳದಾರಿಗಳನ್ನು ಗುರುತಿಸಿ, ಅಲ್ಲಿ ಹೊಸ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಜಿಲ್ಲೆ ಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲ ತಾಲೂಕಿನ ತಹಸೀಲ್ದಾರ್ ಅವರೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಒಳದಾರಿಗಳ ಮೂಲಕ ಬರುವವರನ್ನು ನಿಯಂತ್ರಿಸಲು ಯಾವ ಯಾವ ತಾಲೂಕಿಗೆ ಹೊಸದಾಗಿ ಎಷ್ಟು ಚೆಕ್‌ಪೋಸ್ಟ್‌ಗಳ ಅವಶ್ಯಕತೆಯಿದೆ ಎಂಬುದನ್ನು ಗುರುತಿಸಿ ವರದಿ ನೀಡಿ ಎಂದು ತಿಳಿಸಿದ್ದಾರೆ.
undefined
ಗ್ರೀನ್ ಝೋನ್‌ನಲ್ಲಿ ಲಾಕ್‌ಡೌನ್ ಸಡಿಲ, ವಾಹನ ಸಂಚಾರ ಹೆಚ್ಚಳ
ಹೊರ ರಾಜ್ಯಗಳಿಗೆ ಹೋಗಿ ಬರುವ ಸರಕು ಸಾಗಣೆ ವಾಹನಗಳ ಡ್ರೈವರ್‌ಗಳು ಎರಡು ಮೂರು ದಿನ ಇದ್ದು ಪುನಃ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಾರೆ. ಹಾಗಾಗಿ ಅಂತವರನ್ನು ಮನೆಗಳಿಗೆ ಹೋಗಲು ಅಥವಾ ಹೊರಗಡೆ ಓಡಾಡಲು ಅವಕಾಶ ಮಾಡಿಕೊಡದೆ ಎಪಿಎಂಸಿಗಳಲ್ಲೇ ತಂಗಲು ವ್ಯವಸ್ಥೆ ಮಾಡಿ. ಎಪಿಎಂಸಿ ಕಾರ್ಯದರ್ಶಿಗಳು ಇದಕ್ಕೆ ಪೂರ್ಣ ವ್ಯವಸ್ಥೆ ಮಾಡಿ ಅಗತ್ಯ ನಿಗಾ ವಹಿಸುವಂತೆ ಸೂಚನೆ ನೀಡಿ ಎಂದು ತಹಸೀಲ್ದಾರರಿಗೆ ತಿಳಿಸಿದರು.
60 ವರ್ಷ ಮೇಲ್ಪಟ್ಟವರು, ಜ್ವರ, ಶೀತ ಮುಂತಾದ ರೋಗ ಲಕ್ಷಣಗಳಿರುವವರ ಸರ್ವೇ ಮಾಡಲು ಬಿಎಲ್‌ಒ ಆ್ಯಪ್ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಎಲ್ಲ ಬಿಎಲ್‌ಒಗಳು ಸಿದ್ಧರಿರಬೇಕು. ಯಾವ ವಾರ್ಡ್‌ಗಳಲ್ಲಿ ಬಿಎಲ್‌ಒಗಳು ಇರುವುದಿಲ್ಲವೋ ಅಂತಹ ಕಡೆ ಸ್ಥಳೀಯ ಶಾಲಾ ಶಿಕ್ಷಕರನ್ನೇ ನೇಮಿಸಿ ತರಬೇತಿ ನೀಡಿ ಎಂದು ಜಿಲ್ಲಾಧಿಕಾರಿ ಹೇಳಿದರು.
ಎಚ್ಐವಿ ಸೋಂಕಿತರು, ಕ್ಷಯ ರೋಗಿಗಳು, 60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಸೋಂಕು ಹೆಚ್ಚಾಗಿ ಹರಡಬಹುದಾದ ಸಾಧ್ಯತೆ ಇದೆ, ಹಾಗಾಗಿ ಅಂತವರನ್ನು ಸರ್ವೇ ಮಾಡಿ ತಪಾಸಣೆ ಮಾಡಿ ಎಂದು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಆರ್.ಗಿರೀಶ್ ಸೂಚನೆ ನೀಡಿದರು.
ತವರಿನತ್ತ ಕಾರ್ಮಿಕರು:
ನಿರಾಶ್ರಿತ ಕೇಂದ್ರಗಳಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಜಿಲ್ಲೆಗಳಿಗೆ ಕಳುಹಿಸಲು ಸರ್ಕಾರದಿಂದ ಅನುಮತಿ ದೊರೆತಿದ್ದು, ಅವರನ್ನು ಕಳುಹಿಲು ವ್ಯವಸ್ಥೆ ಮಾಡಿ. ಒಂದು ವೇಳೆ ಅವರಲ್ಲಿ ಯಾರಾದರೂ ಇಲ್ಲೇ ಕೆಲಸ ಮಾಡಲು ಬಯಸಿದಲ್ಲಿ ಅವರು ಕೆಲಸ ಮಾಡುವ ಸ್ಥಳಕ್ಕೆ ಕಳುಹಿಸಿ. ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವವರು ಹೋಗಲು ಬಯಸಿದರೆ ಅದರ ಖರ್ಚುವೆಚ್ಚಗಳನ್ನು ಅವರ ಮಾಲೀಕರೆ ಭರಿಸಬೇಕು. ಆದರೆ, ಇಲ್ಲಿಂದ ಹೋಗುವವರಿಗೆ ಅಥವಾ ಬರುವವರಿಗೆ ಒಂದು ಬಾರಿ ಪ್ರಯಾಣ ಮಾಡಲು ಮಾತ್ರ ಅವಕಾಶವಿದ್ದು, ಕೋವಿಡ್-19 ನಿಯಂತ್ರಣಕ್ಕೆ ಬರುವವರೆಗೂ ಮತ್ತೆ ಪ್ರಯಾಣ ಮಾಡಲು ಅವಕಾಶವಿಲ್ಲ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪವಿಬಾಗಾಧಿಕಾರಿ ಡಾ.ನವೀನ್ ಭಟ್, ತಹಶೀಲ್ದಾರ್ ಶಿವಶಂಕರಪ್ಪ ಹಾಗೂ ಮತ್ತಿತರ ಅಧಿಕಾರಿಗಳು ಇದ್ದರು.
ವಲಸೆ ಕಾರ್ಮಿಕರಿಗೆ ತಮ್ಮ ತಮ್ಮ ಜಿಲ್ಲೆಗಳಿಗೆ ತೆರಳಲು ಅನುಮತಿ ನೀಡಿರುವುದರಿಂದ ನಮ್ಮ ಜಿಲ್ಲೆಯಿಂದ ಹೊರಗೆ ಹೋಗುವುದು ಮಾತ್ರವಲ್ಲದೇ, ಬೇರೆ ಜಿಲ್ಲೆಗಳಿಂದ ಕಾರ್ಮಿಕರು ಬರುವ ಸಾಧ್ಯತೆಯೂ ಇದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ತಾಲೂಕಿನಲ್ಲಿಯೂ ಒಂದೊಂದು ಹೆಚ್ಚುವರಿ ಐಸೋಲೇಷನ್ ಕೇಂದ್ರಗಳನ್ನು ಸಾಧ್ಯವಾದಷ್ಟುನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ದೂರದಲ್ಲಿ ಸಿದ್ಧ ಪಡಿಸಬೇಕು.