ರಾಮಾಯಣದ ರಾಮ, ಲಕ್ಷ್ಮಣ, ರಾವಣ ಕ್ರೂರಿಗಳು ಎಂದ ಬಂಡಾಯ ಸಾಹಿತಿ ಲಲಿತಾ ನಾಯಕ್ ವಿರುದ್ಧ ಎಫ್‌ಐಆರ್

Published : Nov 29, 2025, 03:35 PM IST
BT Lalitha Naik

ಸಾರಾಂಶ

ಬಂಡಾಯ ಸಾಹಿತಿ ಹಾಗೂ ಕಾಂಗ್ರೆಸ್ ಮುಖಂಡೆ ಬಿ.ಟಿ. ಲಲಿತಾ ನಾಯಕ್ ಅವರ ವಿರುದ್ಧ ದಾವಣಗೆರೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಚಾರ ಸಂಕಿರಣವೊಂದರಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾವಣಗೆರೆ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆಂದು ಆರೋಪಿಸಿ ಬಂಡಾಯ ಸಾಹಿತಿ ಹಾಗೂ ಕಾಂಗ್ರೆಸ್ ಮುಖಂಡೆ ಬಿ.ಟಿ. ಲಲಿತಾ ನಾಯಕ್ ಅವರ ವಿರುದ್ಧ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇತ್ತೀಚೆಗೆ ನಗರದ ಎವಿಕೆ ಕಾಲೇಜು ಸಭಾಂಗಣದಲ್ಲಿ ನವೆಂಬರ್ 23ರಂದು ನಡೆದ ವಿಚಾರ ಸಂಕಿರಣದಲ್ಲಿ ಲಲಿತಾ ನಾಯಕ್ ಅವರು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಸ್ಥಳೀಯರು ದೂರು ಸಲ್ಲಿಸಿದ ಪರಿಣಾಮ, ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿವಾದಕ್ಕೆ ಕಾರಣವಾದ ಹೇಳಿಕೆ

ವಿಚಾರ ಸಂಕಿರಣದಲ್ಲಿ ಮಾತನಾಡಿದ ವೇಳೆ ಲಲಿತಾ ನಾಯಕ್ ಅವರು, “ರಾಮಾಯಣದಲ್ಲಿ ಕಾಣುವ ಶ್ರೀರಾಮ, ಲಕ್ಷ್ಮಣ ಮತ್ತು ರಾವಣರು ಆದರ್ಶರು ಅಲ್ಲ; ಅವರು ಕ್ರೂರಿಗಳೇ” ಎಂದು ಹೇಳಿಕೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಧಾರ್ಮಿಕ ಭಾವನೆಗಳನ್ನು ಹಾನಿಗೊಳಿಸುವ ಉದ್ದೇಶಪೂರ್ವಕ ಯತ್ನವೆಂದು ದೂರಲಾಗಿದೆ.

ಮೂರು ಸೆಕ್ಷನ್‌ಗಳಡಿ ಪ್ರಕರಣ

ಬಡಾವಣೆ ಪೊಲೀಸರು ಕೆಳಗಿನ ಸೆಕ್ಷನ್‌ಗಳಡಿ ಲಲಿತಾ ನಾಯಕ್ ಅವರ ವಿರುದ್ಧ FIR ದಾಖಲಿಸಿದ್ದಾರೆ. ಬಿಎನ್‌ಎಸ್ ಸೆಕ್ಷನ್ 299 – ಧಾರ್ಮಿಕ ಭಾವನೆಗಳಿಗೆ ಧಕ್ಕೆಂಟಿಸುವ ಹೇಳಿಕೆ / ಕಾರ್ಯ. ಬಿಎನ್‌ಎಸ್ ಸೆಕ್ಷನ್ 352 – ಸಾರ್ವಜನಿಕ ಅವಹೇಳನ, ಬಿಎನ್‌ಎಸ್ ಸೆಕ್ಷನ್ 353 – ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶಪೂರ್ವಕ ಕೃತ್ಯ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ನವೆಂಬರ್ 23ರಂದು ದಾವಣಗೆರೆಯ ಎವಿಕೆ ಕಾಲೇಜು ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಹಲವು ವಿಮರ್ಶಾತ್ಮಕ ವಿಚಾರಗಳು ಚರ್ಚೆಗೆ ಬಂದಿದ್ದವು. ಅದೇ ಸಂದರ್ಭದಲ್ಲಿ ಲಲಿತಾ ನಾಯಕ್ ಅವರ ಹೇಳಿಕೆ ನೆರೆದಿದ್ದವರ ಕೆಲವರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ತಿರುಗಿತು. ಧಾರ್ಮಿಕ ಭಾವನೆಗಳನ್ನು ಕೆಣಕುವ ಕೆಲಸ ನಡೆದಿದೆ ಎಂದು ಬಡಾವಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಸಾರ್ವಜನಿಕ ಅವಹೇಳನ, ಶಾಂತಿ ಕದಡಲು ಉದ್ದೇಶಪೂರ್ವ ಯತ್ನ ಆರೋಪದಡಿ ಕೇಸ್ ದಾಖಲಾಗಿದೆ.

ಮುಂದೇನು?

ಪ್ರಕರಣ ದಾಖಲಾದ ಬಗ್ಗೆ ಲಲಿತಾ ನಾಯಕ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪೊಲೀಸರು ವಿಚಾರಣೆಯನ್ನು ನಡೆಸಿ, ಕಾರ್ಯಕ್ರಮದ ವಿಡಿಯೋ, ಸಾಕ್ಷಿಗಳ ಹೇಳಿಕೆ ಮತ್ತು ದೂರಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ