
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ. 07): ಶ್ರೀ ರಾಮಸೇನೆ (Sri Ram Sena) ವತಿಯಿಂದ ದತ್ತಮಾಲ ಅಭಿಯಾನಕ್ಕೆ ಇಂದು ಚಾಲನೆ ದೊರೆಯಿತು. ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಶಂಕರಮಠದಲ್ಲಿ 50ಕ್ಕೂ ಅಧಿಕ ಶ್ರೀರಾಮ ಸೇನಾ ಕಾರ್ಯಕರ್ತರು ಶ್ರೀ ರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದತ್ತಮಾಲೆಯನ್ನು ಧರಿಸಿದರು. ಇಂದಿನಿಂದ ನವೆಂಬರ್ 14 ರ ವರೆಗೆ ಶ್ರೀ ರಾಮಸೇನೆ ವತಿಯಿಂದ ದತ್ತಮಾಲಾ ಅಭಿಯಾನ ನಡೆಯಲಿದ್ದು, ನ.14 ರಂದು ಮಾಲಾಧಾರಿಗಳು ದತ್ತಾತ್ರೇಯ ಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನವನ್ನು ಪಡೆಯಲಿದ್ದಾರೆ.
ಹಿಂದೂ ಅರ್ಚಕರ ನೇಮಕಕ್ಕೆ ಒತ್ತಾಯ, ಹೋರಾಟದ ಎಚ್ಚರಿಕೆ: ಪ್ರತಿ ವರ್ಷ ದತ್ತಪೀಠಕ್ಕೆ ಬರುವುದು ಅಲ್ಲಿ ಹೆಣ ಇಲ್ಲದ ಗೋರಿಗಳನ್ನು ನೋಡಿಕೊಂಡು ಹೋಗುವುದು, ನಮಗೆ ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬಂದಿದೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರು ನಗರದ ಶಂಕರ ಮಠದಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ವರ್ಷ ನಮಗೆ ಎಚ್ಚರಿಕೆ ನೀಡಿ...ನೀಡಿ... ಬೇಜಾರಾಗಿದೆ. ಆಕ್ರೋಶವಾಗಿದೆ. ಧರ್ಮದ ವಿಚಾರದಲ್ಲಿ ಈ ಡ್ರಾಮಾ ಒಳ್ಳೆದಲ್ಲ. ಏನಾದರೂ ಆಗಲಿ ಎಂದು ದತ್ತಪೀಠದ ವಿಚಾರದಲ್ಲಿ ಸರ್ಕಾರ ತಕ್ಷಣ ಗಟ್ಟಿ ನಿರ್ಧಾರ ಮಾಡಲಿ.ಕೂಡಲೇ ದತ್ತಪೀಠವನ್ನ ಹಿಂದೂಗಳ ಪೀಠವೆಂದು ಆದೇಶಿಸಿ, ಅಲ್ಲಿ ಹಿಂದೂ ಅರ್ಚಕರ ನೇಮಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ವಿರೋಧ: ಕನಕ ಜಯಂತಿಗೆ ಶ್ರೀರಾಮ ಸೇನೆ ಮನವಿ
ಇಂದಿನಿಂದ 7 ದಿನಗಳ ಕಾಲ ನಡೆಯುವ ದತ್ತಮಾಲಾ ಅಭಿಯಾನದ 13ನೇ ತಾರೀಖು ಕೊನೆಯಾಗಲಿದೆ. ಅಷ್ಟರೊಳಗೆ ಹಿಂದೂ ಅರ್ಚಕರ ನೇಮಿಸಬೇಕು. ಇಲ್ಲವಾದರೆ, ಪರಿಸ್ಥಿತಿ ಕಠಿಣವಾಗಲಿದೆ. ಅಲ್ಲಿ ಹಿಂದೂಗಳು ಹಾಗೂ ದತ್ತಭಕ್ತರಿಂದ ಅಲ್ಲಿ ಏನಾದರೂ ಅನಾಹುತವಾದರೆ ಸರ್ಕಾರವೇ ನೇರ ಹೊಣೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಸ್ಥಾನವನ್ನೇ ಕಳೆದುಕೊಳ್ಳಬೇಕಾಗತ್ತೆ: ಮಂಗಳೂರಿನಲ್ಲಿ ಹೇಗೆ ಬಿಜೆಪಿ ಅಧ್ಯಕ್ಷರ ಕಾರು ಅಲುಗಾಡಿತ್ತೋ, ಅದೇ ರೀತಿ ಸರ್ಕಾರವೂ ಅಲುಗಾಡುತ್ತೆ ಎಂದು ಎಚ್ಚರಿಸಿದ್ದಾರೆ. ಕಳೆದ ವರ್ಷ ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸದಿದ್ದರೆ ಯಡಿಯೂರಪ್ಪನವರ ಪೀಠ ಹೋಗುತ್ತೆ ಎಂದು ಹೇಳಿದ್ದೆವು. ದತ್ತ ಗುರುಗಳ ಶಾಪದಿಂದ ಯಡಿಯೂರಪ್ಪನವರು ಪೀಠ ಕಳೆದುಕೊಂಡರು. ಈಗ ಬೊಮ್ಮಾಯಿಗೂ ಎಚ್ವರಿಕೆ ನೀಡುತ್ತಿದ್ದೇವೆ. ಮುಂದೆ ನಿಮ್ಮ ಸರ್ಕಾರ ಬರಬೇಕಂದ್ರೆ ತಕ್ಷಣ ದತ್ತಪೀಠವನ್ನ ಹಿಂದುಗಳಿಗೆ ಒಪ್ಪಿಸಿ. ಇಲ್ಲವಾದರೆ, ಯಡಿಯೂರಪ್ಪನವರಿಗೆ ಆದ ಪರಿಸ್ಥಿತಿಯೇ ನಿಮಗೂ ಆಗುತ್ತೆ ಎಂದು ಸಿಎಂಗೂ ಭಾವನಾತ್ಮಕವಾಗಿ ಭಯಪಡಿಸಿದ್ದಾರೆ. ಶ್ರೀರಾಮ ಸೇನೆ ವತಿಯಿಂದ ನಡೆಯುತ್ತಿರುವ 18ನೇ ವರ್ಷದ ಈ ದತ್ತಮಾಲಾ ಅಭಿಯಾನ ಇದೇ 13ರಂದು ಕೊನೆಗೊಳ್ಳಲಿದೆ.