
ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಮತ್ತು ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಆರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮುಂದಿನ ಒಂದು ವಾರದೊಳಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಜಯಲಕ್ಷ್ಮಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ, ಮಾನಹಾನಿ ಮಾಡುವ ಉದ್ದೇಶದಿಂದ ಕಾಮೆಂಟ್‌ಗಳನ್ನು ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ತ್ವರಿತ ತನಿಖೆ ನಡೆಸಿ ಆರು ಮಂದಿಯನ್ನು ಬಂಧಿಸಿದ್ದರು.
ತನಿಖೆಯ ಭಾಗವಾಗಿ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳು ಬಳಸಿದ ಪೋಸ್ಟ್‌ಗಳು, ಕಾಮೆಂಟ್‌ಗಳು ಹಾಗೂ ಡಿಜಿಟಲ್ ದಾಖಲೆಗಳನ್ನು ಪ್ರಮುಖ ಸಾಕ್ಷಿಗಳಾಗಿ ಸಂಗ್ರಹಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಒಳಗೊಂಡಂತೆ ಸುಮಾರು 50 ಪುಟಗಳ ಚಾರ್ಜ್‌ಶೀಟ್ ತಯಾರಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳ ಕೇಂದ್ರ ಕಚೇರಿಗಳಿಗೆ ಪೊಲೀಸರು ಪತ್ರ ಬರೆದಿದ್ದು, ಕೆಲವು ಖಾತೆಗಳ (ಐಡಿ) ವಿವರಗಳು ಮತ್ತು ತಾಂತ್ರಿಕ ಮಾಹಿತಿಗಾಗಿ ಉತ್ತರದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಇನ್ನೂ ಕೆಲವು ಸಾಮಾಜಿಕ ಜಾಲತಾಣ ಖಾತೆಗಳ ಪೂರ್ಣ ಮಾಹಿತಿಗಳು ಲಭ್ಯವಾಗಿಲ್ಲ ಎಂಬುದು ತನಿಖೆಗೆ ಅಡ್ಡಿಯಾಗಿರುವ ಅಂಶವಾಗಿದೆ.
ಕಾನೂನಿನ ಪ್ರಕಾರ, ಆರೋಪಿಗಳನ್ನು ಬಂಧಿಸಿದ ದಿನದಿಂದ 60 ದಿನಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಸದಿದ್ದರೆ ಆರೋಪಿಗಳಿಗೆ ಜಾಮೀನು ದೊರೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ, ಆರೋಪಿಗಳು ಜಾಮೀನಿನಲ್ಲಿ ಹೊರಬರುವುದನ್ನು ತಡೆಯಲು ಸೈಬರ್ ಪೊಲೀಸರು ನಿಗದಿತ ಅವಧಿಯೊಳಗೆ, ಅಂದರೆ ಮುಂದಿನ ಒಂದು ವಾರದೊಳಗೆ ಚಾರ್ಜ್‌ಶೀಟ್ ಸಲ್ಲಿಸಲು ತಯಾರಿ ನಡೆಸಿದ್ದಾರೆ.
ಬಂಧನವಾಗಿ ಈಗಾಗಲೇ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೂ, ಆರೋಪಿಗಳು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ತನಿಖೆ ಅಂತಿಮ ಹಂತ ತಲುಪಿರುವುದರಿಂದ, ಶೀಘ್ರದಲ್ಲೇ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಭಾಷೆ ಬಳಕೆ ಮತ್ತು ವ್ಯಕ್ತಿಗತ ಮಾನಹಾನಿ ವಿಚಾರದಲ್ಲಿ ಕಾನೂನು ಕ್ರಮ ಎಷ್ಟು ಗಂಭೀರವಾಗಿರುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.