Chamarajanagar: ಬೆಳೆ ಹಾನಿ: ಸಮಗ್ರ ವರದಿ ನೀಡಲು ಸಚಿವ ವೆಂಕಟೇಶ್‌ ಸೂಚನೆ

By Kannadaprabha News  |  First Published Jul 2, 2023, 8:43 PM IST

ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡಲಾಗಿದ್ದ ಬೆಳೆ ಹಾನಿಯಾಗಿದ್ದು, ಕೃಷಿ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಸಮಗ್ರ ವರದಿ ನೀಡುವಂತೆ ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅವರು ಸೂಚನೆ ನೀಡಿದರು. 


ಚಾಮರಾಜನಗರ (ಜು.02): ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡಲಾಗಿದ್ದ ಬೆಳೆ ಹಾನಿಯಾಗಿದ್ದು, ಕೃಷಿ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಸಮಗ್ರ ವರದಿ ನೀಡುವಂತೆ ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅವರು ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಬೆಳೆ ಹಾನಿ ಬಗ್ಗೆ ಮಾಹಿತಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕ ಮದುಸೂಧನ್‌ ಅವರನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಈಗಾಗಲೇ ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲೂಕಿನಲ್ಲಿ ಪೂರ್ವ ಮುಂಗಾರಿಗೆ ಬಿತ್ತನೆ ಮಾಡಲಾಗಿದ್ದ ಜೋಳ, ಸೂರ್ಯಕಾಂತಿ ಮತ್ತು ಹತ್ತಿ ಬೆಳೆ ಸುಮಾರು 28 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಾಡಿ ಹೋಗಿದೆ ಎಂದು ಮಾಹಿತಿ ನೀಡಿದರು . ಈ ಮಾಹಿತಿಯಿಂದ ತೃಪ್ತರಾಗದ ಸಚಿವರು ಬೆಳೆ ಎಷ್ಟುಪ್ರಮಾಣದಲ್ಲಿ ಹಾನಿಯಾಗಿದೆ, ಎಷ್ಟುಇಳುವರಿ ಬರುತ್ತದೆ ಅಥವಾ ಸಂಪೂರ್ಣ ಒಣಗಿ ಹೋಗಿದಿಯೇ ಮಾಹಿತಿ ನೀಡಿ, ಇದರಿಂದ ರೈತರಿಗೆ ನೆರವಾಗಲು ಅನುಕೂಲವಾಗುತ್ತದೆ ಎಂದರು.

Tap to resize

Latest Videos

undefined

ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಆರ್‌.ನರೇಂದ್ರ

ಸರ್ಕಾರ ರೈತರಿಗೆ ಸಂಕಷ್ಟದಲ್ಲಿ ನೆರವಾಗುವ ನಿಟ್ಟಿನಲ್ಲಿ ಬೆಳೆ ವಿಮೆ ಯೋಜನೆ ಜಾರಿಗೆ ತಂದಿದ್ದು, ಬೆಳೆ ಹಾನಿಯಾದ ರೈತರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎಂದು ಸಚಿವರು ಪ್ರಶ್ನಿಸಿದರು. 6 ಸಾವಿರ ರೈತರಿಗೆ ಬೆಳೆ ವಿಮೆ ಮಾಡಿಸಲಾಗಿದೆ. ಕೆಲವು ಬೆಳೆಗಳಿಗೆ ವಿಮೆ ಅವಧಿ ಮುಗಿದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಉತ್ತರಿಸಿದರು. ವಿಮಾ ಯೋಜನೆ ರೈತರನ್ನು ಸರಿಯಾಗಿ ತಲುಪಿಲ್ಲ, ನೀವು ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿಲ್ಲ , ಬೆಳೆ ಹಾನಿಯ ಬಗ್ಗೆಯೂ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕೊರತೆಯಾಗದಂತೆ ನೋಡಿಕೊಳ್ಳಿ: ಜಿಲ್ಲೆಯ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಇನ್ನಿತರ ಪರಿಕರಗಳನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಂಡಿರಬೇಕು. ಬೇಡಿಕೆಗೆ ತಕ್ಕಂತೆ ರೈತರಿಗೆ ಪೂರೈಸಬೇಕು. ಬೆಳೆಗಳಿಗೆ ವಿಮೆ ಸೌಲಭ್ಯ ಪಡೆಯಲು ಹೆಚ್ಚಿನ ಜಾಗೃತಿ ಮೂಡಿಸಬೇಕು. ಕರಪತ್ರ, ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಇನ್ನಿತರ ವಿಧಾನಗಳ ಮೂಲಕ ಬೆಳೆ ವಿಮೆ ಕುರಿತು ಹೆಚ್ಚು ಪ್ರಚಾರ ಮಾಡಬೇಕು. ತಾಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ಈ ಬಗ್ಗೆ ಜವಾಬ್ದಾರಿ ನೀಡಬೇಕೆಂದು ಸಚಿವರು ತಿಳಿಸಿದರು.

ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಬೇಕು. ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪ್ರಸ್ತುತ ಕುಡಿಯುವ ನೀರಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಮುಂದೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿದ್ದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಿರಲು ಈಗಿನಿಂದಲೇ ಆಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಜನರಿಗೆ ಕುಡಿಯುವ ನೀರಿನ ಬವಣೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಅವರು ನಿರ್ದೇಶನ ನೀಡಿದರು. ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದೆಂಬ ಬಗ್ಗೆ ಪೂರ್ವ ಪರಿಶೀಲನೆ ಮಾಡಬೇಕು. 

ಗ್ರಾಮ ಪಂಚಾಯಿತಿಗಳಲ್ಲಿ ಈಗ ಇರುವ ಹಣವನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಕೆ ಮಾಡಲು ಸಿದ್ಧವಾಗಿಟ್ಟುಕೊಳ್ಳಬೇಕು. ಪ್ರಥಮ ಆದ್ಯತೆಯನ್ನು ಕುಡಿಯುವ ನೀರಿಗೆ ನೀಡಬೇಕು. ಪಂಚಾಯತ್‌ ಅಭಿವೃದ್ಧಿ ಅ​ಧಿಕಾರಿಗಳ ಸಭೆ ಕರೆದು ಮುಂಬರುವ ದಿನಗಳಲ್ಲಿ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಕೊರತೆ ಬಾರದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ತಾಪಂ ಇಒ ಅಧಿ​ಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಇದೇ ವೇಳೆ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿಅವರು ಮುಂಗಾರು ಹಂಗಾಮಿಗೆ ಈವರೆಗೆ ಎಷ್ಟುಮಂದಿ ರೈತರು ಬೆಳೆ ವಿಮೆಗೆ ನೊಂದಾಯಿಸಿದ್ದಾರೆ. ಕಳೆದ ಬಾರಿ ವಿಮೆ ಮಾಡಿಸಿದವರಿಗೆ ಹಣ ಬಂದಿದಿಯೇ? ಎಂಬ ಬಗ್ಗೆ ವಿವರ ನೀಡಬೇಕು. ಸಕಾಲದಲ್ಲಿ ಪ್ರಯೋಜನ ರೈತರಿಗೆ ತಲುಪಬೇಕು ಎಂದು ತಿಳಿಸಿದರು.

ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ ಅವರು ಕಳೆದ ಬಾರಿ ಮಳೆಯಿಂದ ಬಾಳೆ ಸೇರಿದಂತೆ ಇತರೆ ಬೆಳೆಗಳು ಹಾನಿಗೀಡಾಗಿವೆ. ಈ ಬಗ್ಗೆ ನೀಡಲಾಗಿರುವ ಪರಿಹಾರಗಳ ಕ್ರಮದ ಕುರಿತು ಮಾಹಿತಿ ನೀಡಬೇಕು. ಮುಂದೆ ಮಳೆ ಬರದಿದ್ದರೆ ಪರಿಸ್ಥಿತಿ ನಿಭಾಯಿಸಲು ಯಾವ ಸಿದ್ಧತಾ ಕ್ರಮಕೈಗೊಂಡಿದ್ದೀರಿ? ಎಂಬ ಬಗ್ಗೆ ವಿವರ ನೀಡಬೇಕು ಎಂದರು. ಶಾಸಕರಾದ ಎಂ.ಆರ್‌. ಮಂಜುನಾಥ್‌ ಮಾತನಾಡಿ ಹನೂರು ವಿಧಾನಸಭಾ ಕ್ಷೇತ್ರದ ಹಲವೆಡೆ ಇತ್ತೀಚೆಗೆ ವೇಗವಾಗಿ ಬೀಸಿದ ಗಾಳಿ ಬಡಿತಕ್ಕೆ ಸಾಕಷ್ಟುಬೆಳೆ ಹಾನಿಯಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ತೊಂದರೆ ಅನುಭವಿಸಿದ್ದು, ಬಾಳೆ ಹಾಳಾಗಿದೆ. ಇದಕ್ಕೆ ಹೆಚ್ಚಿನ ಪರಿಹಾರ ಸಿಗಬೇಕು ಎಂದರು.

ಸಹಕಾರ ಇಲಾಖೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌ ಮಾತನಾಡಿ ಮಳೆಯ ಮುನ್ಸೂಚನೆ ಬಗ್ಗೆ ಹವಾಮಾನ ಇಲಾಖೆ ನಿಖರ ಮಾಹಿತಿ ನೀಡಲಿದೆ. ಮಳೆ ಕೊರತೆಯಾದರೆ ಪರ್ಯಾಯವಾಗಿ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಪೂರ್ವಸಿದ್ಧತೆಯನ್ನು ಅ​ಧಿಕಾರಿಗಳು ಮಾಡಬೇಕಿದೆ ಎಂದು ತಿಳಿಸಿದರು. ಕಾಡಂಚಿನ ಪ್ರದೇಶಗಳು, ಪೋಡುಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಅನುಮತಿ ವಿಳಂಬವಾಗುತ್ತಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಈ ಸಂದರ್ಭದಲ್ಲಿ ಸಚಿವರು ಕುಡಿಯುವ ನೀರಿನಂತಹ ಅಗತ್ಯ ಸೌಕರ್ಯಗಳಿಗೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಜಿಲ್ಲಾ​ಕಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅ​ಧಿಕಾರಿಗಳು ಸಭೆ ನಡೆಸಿ ಯೋಜನೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಿ ಎಂದರು.

ಡಯಾಲಿಸಿಸ್‌ ಕೇಂದ್ರಕ್ಕೆ ಅನುದಾನ: ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ ಮಾತನಾಡಿ ಕಾಡಂಚಿನ ಭಾಗಗಳಲ್ಲಿ ಜನರು ಆಸ್ಪತ್ರೆಗೆ ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅರಣ್ಯ ವಾಸಿಗಳಿಗೆ ಸಮರ್ಪಕವಾಗಿ ಆರೋಗ್ಯ ಸೌಲಭ್ಯ ಸಿಗಬೇಕು. ಡಯಾಲಿಸಿಸ್‌ ನ ಒಂದು ಚಿಕಿತ್ಸಾ ಕೇಂದ್ರ ವ್ಯವಸ್ಥೆಗೆ ನನ್ನ ಕ್ಷೇತ್ರದ ಅನುದಾನದಲ್ಲಿ ನೆರವು ನೀಡುವುದಾಗಿ ತಿಳಿಸಿದರು. ವಿಧಾನ ಪರಿಷತ್‌ ಸದಸ್ಯರಾದ ಡಾ. ಡಿ. ತಿಮ್ಮಯ್ಯ ಮಾತನಾಡಿ ಅದಿವಾಸಿಗಳ ಸಂಖ್ಯಗೆ ಅನುಗುಣವಾಗಿ ಆರೋಗ್ಯ ಸೌಲಭ್ಯ ಒದಗಿಸಬೇಕಿದೆ. ವಾರದಲ್ಲಿ ಎರಡು ದಿನ ಮೊಬೈಲ್‌ ವಾಹನಗಳ ಮೂಲಕ ಹಾಡಿಗಳಿಗೆ ಸಂಚರಿಸಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್‌ ಮಾತನಾಡಿ ಅಧಿ​ಕಾರಿಗಳು ಸ್ಪಂದನಾಶೀಲರಾಗಿ ಕಾರ್ಯನಿರ್ವಹಿಸಬೇಕು. ಜನರನ್ನು ಅಲೆದಾಡಿಸದೇ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಯಾವುದೇ ಸಬೂಬು, ಕಾರಣ ಹೇಳಿ ಜನರ ಕೆಲಸ ಮಾಡುವುದನ್ನು ನಿಲ್ಲಿಸಬಾರದು. ಸರ್ಕಾರ ಇರುವುದೇ ಜನರ ಕೆಲಸಕ್ಕಾಗಿ. ಸಾರ್ವಜನಿಕರ ಒಳಿತಿಗೆ ಕಾರ್ಯನಿರ್ವಹಿಸಿದರೆ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದು ತಿಳಿಸಿದರು.

Chamarajanagar: ಕೃಷಿ ಜಮೀನಿಗೆ ಕಾಡಾನೆ ದಾಳಿ: ಕಂಗಾಲಾದ ರೈತರು

ಶಾಸಕರಾದ ಎಚ್‌.ಎಂ. ಗಣೇಶ್‌ ಪ್ರಸಾದ್‌ ಮಾತನಾಡಿ ತಮ್ಮ ಕ್ಷೇತ್ರದ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಹಕ್ಕಿನಡಿ ಕೇಳಲಾದ ಮಾಹಿತಿಗೆ ಹೆಚ್ಚು ಮೊತ್ತದ ಶುಲ್ಕ ಕಟ್ಟುವಂತೆ ಅರ್ಜಿದಾರರಿಗೆ ಕೇಳಲಾಗಿದೆ. ಈ ಬಗ್ಗೆ ನಿಖರವಾಗಿ ಪರಿಶೀಲಿಸಿ ವಿವರ ನೀಡಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಶು ಸಂಗೋಪನೆ, ತೋಟಗಾರಿಕೆ, ರೇಷ್ಮೆ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಪ್ರಭಾರ ಜಿಲ್ಲಾಧಿ​ಕಾರಿ ಹಾಗೂ ಜಿಪಂ ಸಿಇಒ ಎಸ್‌. ಪೂವಿತ, ಎಡಿಸಿ ಗೀತಾ ಹುಡೇದ, ಎಎಸ್ಪಿ ಉದೇಶ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್‌ಕುಮಾರ್‌, ಬಿ.ಆರ್‌.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ದೀಪಾ ಕಂಟ್ರಾಕ್ಟರ್‌, ಜಿಲ್ಲಾಮಟ್ಟದ ಅ​ಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

click me!