Mandya : ಸತ್ತವನ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿ

Published : Oct 21, 2022, 05:20 AM IST
Mandya :  ಸತ್ತವನ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿ

ಸಾರಾಂಶ

ಸತ್ತವನ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಂಡು ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಪರಭಾರೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

 ಮಂಡ್ಯ (ಅ.21):  ಸತ್ತವನ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಂಡು ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಪರಭಾರೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೋಟ್ಯಂತರ ರು. ಬೆಲೆ ಬಾಳುವ ಸರ್ಕಾರಿ ಜಮೀನನ್ನು (Land)  ಭೂ ಕಬಳಿಕೆ ಮಾಡುವ ದೃಷ್ಟಿಯಿಂದ ಮಂಡ್ಯ (Mandya) ತಾಲೂಕು ಕಚೇರಿ ಅಧಿಕಾರಿಗಳು- ಸಿಬ್ಬಂದಿ ಭೂ ಕಬಳಿಕೆ ಮಾಡುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಅಕ್ರಮ ನಡೆಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್‌.ರವೀಂದ್ರ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

ಪ್ರಕರಣವೇನು?

ಮಂಡ್ಯ ಗ್ರಾಮದ ಸರ್ವೇ ನಂ.174/8ರಲ್ಲಿ 3 ಗುಂಟೆ ಜಮೀನಿದ್ದು, 1962-63ನೇ ಸಾಲಿನ ಫಸಲು ಪಹಣಿಯಂತೆ ಪಿ.ಶ್ರೀನಿವಾಸಯ್ಯ ಎಂಬುವರ ಹೆಸರಿನಲ್ಲಿದ್ದು, ಅವರ ಹೆಸರಿನಲ್ಲೇ ಸರ್ಕಾರಕ್ಕೆ ಭೂಸ್ವಾಧೀನವಾಗಿದೆ. ಅಲ್ಲದೇ, ಸರ್ವೇ ನಂ.174/3ರಲ್ಲಿ ಮಂಚ ಬಿನ್‌ ಅಜ್ಜಹಳ್ಳಿ ಹೆಸರಿನಲ್ಲಿ 14 ಗುಂಟೆ ಜಮೀನಿದ್ದು, ಅದನ್ನೂ ಸರ್ಕಾರ ಬೆಂಗಳೂರು-ಮೈಸೂರು ರಾಜ್ಯಹೆದ್ದಾರಿ, ತೋಟಗಾರಿಕೆ ಇಲಾಖೆ ಹಾಗೂ ಪ್ರವಾಸಿ ಮಂದಿರಕ್ಕೆ ಸೇರಿದ ಜಾಗವಾಗಿದೆ. ವಾಸ್ತವದಲ್ಲಿ ಸರ್ವೇ ನಂ.174ರ ಸಂಪೂರ್ಣ ಜಮೀನೆಲ್ಲವೂ ಸರ್ಕಾರಕ್ಕೆ ಸ್ವಾಧೀನವಾಗಿದೆ. ಈ ಭೂ ಸ್ವಾಧೀನವಾಗಿರುವ 174/9ರ 3 ಗುಂಟೆ ಜಮೀನು ಪಿ.ಶ್ರೀನಿವಾಸಯ್ಯನವರ ಹೆಸರಿನಲ್ಲಿದ್ದರೂ ಕೂಡ ಮಂಚ ಬಿನ್‌ ಅಜ್ಜಹಳ್ಳಿ ಹೆಸರಿಗೆ ಆರ್‌ಟಿಸಿ ತಿದ್ದಿರುವುದು ದಾಖಲೆಗಳಿಂದ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಆರ್‌ಟಿಸಿ ದುರ್ಬಳಕೆ:

ಈ ಹಿಂದೆಯೇ ಮೃತಪಟ್ಟಿರುವ ಮಂಚ ಬಿನ್‌ ಅಜ್ಜಹಳ್ಳಿ ಹೆಸರಿನಲ್ಲಿದ್ದ ಕಂಪ್ಯೂಟರ್‌ ಆರ್‌ಟಿಸಿಯನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಜಮೀನನ್ನು ಕಬಳಿಕೆ ಮಾಡುವ ಸಲುವಾಗಿ ಮದ್ದೂರು ತಾಲೂಕು ಯಡವನಹಳ್ಳಿ ಗ್ರಾಮದ ಪಿ.ಸಿ.ಕೃಷ್ಣೇಗೌಡ ಎಂಬುವರು ಸಂಚು ರೂಪಿಸಿ ಮಂಚ ಎಂಬ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿ ಯಾವುದೋ ವ್ಯಕ್ತಿಯನ್ನು ಮಂಚ ಎಂದು ಬಿಂಬಿಸಿ 3 ಗುಂಟೆ ಜಮೀನನ್ನು 28 ಫೆಬ್ರವರಿ 2022ರಂದು 23,14,276 ರು.ಗಳಿಗೆ ಕ್ರಯ ಮಾಡಿಕೊಂಡಿರುವುದಾಗಿ ದಾಖಲೆಗಳ ಸಹಿತ ದೂರು ನೀಡಿದ್ದಾರೆ.

ಖಾತೆಗೆ ರಾಜಸ್ವ ನಿರೀಕ್ಷಕರ ತಿರಸ್ಕಾರ:

ಈ ಸರ್ಕಾರಿ ಜಮೀನಿನ ಕುರಿತು ಕಸಬಾ-ಒಂದನೇ ವೃತ್ತದ ರಾಜಸ್ವ ನಿರೀಕ್ಷಕರು ನೀಡಿರುವ ವರದಿಯಲ್ಲಿ ಮಂಚ ಎಂಬುವರು ನೀಡಿರುವ ವಿಳಾಸದಲ್ಲಿ ವಾಸವಿರುವುದಿಲ್ಲ. ಸರ್ವೇ ನಂ.174/8ರ ಆರ್‌ಟಿಸಿಯಲ್ಲಿ ಎಂ.ಆರ್‌.ಸಂಖ್ಯೆ ನಮೂದಾಗಿರುವುದಿಲ್ಲ. ಖಾತೆದಾರರು ವಿಸ್ತೀರ್ಣದಲ್ಲಿ ಅನುಭವದಲ್ಲಿರುವುದಿಲ್ಲ. ಹಕ್ಕು ದಾಖಲೆ ಮತ್ತು ಖಾತೆದಾರರ ಬಗ್ಗೆ ಸಂಶಯವಿರುವುದರಿಂದ ಕ್ರಯದಂತೆ ಖಾತೆ ಮಾಡಲು ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದಾರೆ.

ತಹಸೀಲ್ದಾರ್‌ ಅಧಿಕಾರ ದುರುಪಯೋಗ:

ಆದರೂ, ತಹಸೀಲ್ದಾರ್‌ ಅವರು ಕಾನೂನುಬಾಹೀರವಾಗಿ 25 ಜುಲೈ 2022ರಂದು ಅಧಿಕಾರ ದುರುಪಯೋಗಪಡಿಸಿಕೊಂಡು ಹಣದ ಆಮಿಷಕ್ಕೆ ಒಳಗಾಗಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪಿ.ಸಿ.ಕೃಷ್ಣೇಗೌಡ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಎಸ್ಪಿ ಅವರಿಗೆ ನೀಡಿರುವ ದೂರಿನ ಜೊತೆ ರವೀಂದ್ರ ಸಲ್ಲಿಸಿದ್ದಾರೆ.

ಇದಲ್ಲದೇ, ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು 18 ಆಗಸ್ಟ್‌ 2022ರಂದು ಕೃಷ್ಣೇಗೌಡರಿಗೆ ನೀಡಿರುವ ಹಿಂಬರಹದಲ್ಲಿ ಮಂಡ್ಯ ಗ್ರಾಮದ ಸರ್ವೇ ನಂ.174/8ರ ಜಮೀನು ಹಳೆಯ ಬೆಂಗಳೂರು-ಮೈಸೂರು ರಸ್ತೆ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಭೂ ಉಪಯೋಗ ಕೋರಿ ಪಿ.ಸಿ.ಕೃಷ್ಣೇಗೌಡರು ಸಲ್ಲಿಸಿರುವ ಅರ್ಜಿಯಲ್ಲಿ ತೋರಿಸಿರುವ ಕಚ್ಚಾನಕ್ಷೆ ಸ್ವತಃ ಅವರೇ ಸೃಷ್ಟಿಸಿಕೊಂಡಿದ್ದಾಗಿದೆ ಎಂದು ಆರೋಪಿಸಿದ್ದಾರೆ.

ನಕಲಿ ಆಧಾರ್‌ ಸೃಷ್ಟಿಸಿ ಸರ್ಕಾರಕ್ಕೆ ಭೂಸ್ವಾಧೀನವಾಗಿರುವ ಕೋಟ್ಯಂತರ ರು. ಬೆಲೆಬಾಳುವ ಜಮೀನನ್ನು ಕಬಳಿಕೆ ಮಾಡುವ ದೃಷ್ಟಿಯಿಂದ ಸಂಚು ರೂಪಿಸಿ ಕ್ರಯಕ್ಕೆ ಪಡೆದಿರುವ ಪಿ.ಸಿ.ಕೃಷ್ಣೇಗೌಡ, ಮಂಚ ಬಿನ್‌ ಅಜ್ಜಹಳ್ಳಿ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ನೀಡಿರುವ ಸಂಸ್ಥೆ, ವ್ಯಕ್ತಿಗಳು, ಕ್ರಯ ಪತ್ರದ ಸಾಕ್ಷಿಗಳು, ಜಿಲ್ಲಾ ಪತ್ರ ಬರಹಗಾರರು, ಉಪನೋಂದಣಾಧಿಕಾರಿ, ತಹಸೀಲ್ದಾರ್‌ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC