
ತುಮಕೂರು : ಗೋರಕ್ಷಣೆಯ ಹೆಸರಲ್ಲೇ ಗೋವುಗಳ ಸಾವು ಸಂಭವಿಸುತ್ತಿದ್ದು, ಗೋರಕ್ಷಣೆಯ ಹೆಸರಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುತ್ತಿದೆ ಎಂದು ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ಸಾಕಲು ತೆಗೆದುಕೊಂಡು ಹೋಗುತ್ತಿದ್ದ ಗೋವುಗಳನ್ನು ತುಮಕೂರಿನ ಕ್ಯಾತ್ಸಂದ್ರ ಮತ್ತು ಶಿರಾ ಟೋಲ್ ಬಳಿ ತಡೆದು, ಹತ್ತಾರು ಗೋವುಗಳ ಸಾವಿಗೆ ಕಾರಣವಾಗಿರುವ, ರೈತರಿಗೆ ನಷ್ಟಉಂಟು ಮಾಡಿರುವ ಪೊಲೀಸರ ಕ್ರಮವನ್ನು ಖಂಡಿಸಿ, ಸೋಮವಾರ ಜಾಸ್‌ಟೋಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಆಯೋಜಿಸಿದ್ದ ರೈತರ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಗೋ ರಕ್ಷಣೆ ಹೆಸರಿನಲ್ಲಿ ರೈತರ ಗೋವುಗಳನ್ನು ವಶಪಡಿಸಿಕೊಂಡು, ರೈತರು ಮತ್ತು ಗೋವುಗಳ ಮೇಲೆ ಎಫ್‌ಐಆರ್ ದಾಖಲಿಸಿ, ವಶಪಡಿಸಿಕೊಂಡ ಗೋವುಗಳನ್ನು ಗೋಶಾಲೆಗೆ ಕಳುಹಿಸಿ ಅವುಗಳು ಮರಣ ಹೊಂದುವಂತೆ ಮಾಡುವ ಮೂಲಕ ಬೊಮ್ಮಾಯಿ ಸರ್ಕಾರ ಗೋ ರಕ್ಷಣೆಯ ಬದಲು ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ ಎಂದರು.
ಕಳೆದ 15 ದಿನಗಳ ಹಿಂದೆ ಚಿಕ್ಕೋಡಿಯಿಂದ ಹಸುಗಳನ್ನು ತರುತ್ತಿದ್ದ ಸುಮಾರು 11 ಲೋಡ್ ಹಸುಗಳನ್ನು ವಶಪಡಿಸಿಕೊಂಡಿದ್ದು, ಇವುಗಳಲ್ಲಿ 18 ಹಸುಗಳು ಸಾವನ್ನಪ್ಪಿವೆ. ಈ ನಷ್ಟವನ್ನು ರೈತರಿಗೆ ಕಟ್ಟಿಕೊಡುವವರು ಯಾರು? ಇದರಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರು ನೇರವಾಗಿ ಭಾಗಿಯಾಗಿದ್ದಾರೆ. ಕೂಡಲೇ ಈ ರೀತಿಯ ದಂಧೆಯನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮಾತನಾಡಿ, ರೈತರು ಮತ್ತು ಗೋವುಗಳ ಮೇಲೆ ಕಾಳಜಿ ಇದ್ದರೆ, ಎಲ್ಲಿ ಗೋವುಗಳನ್ನು ವಶಪಡಿಸಿಕೊಳ್ಳುತ್ತೀರೋ ಅಲ್ಲಿಯೇ ಗೋವಿನ ಬೆಲೆ ನಿಗದಿಪಡಿಸಿ, ರೈತನ ಖಾತೆಗೆ ಜಮಾ ಮಾಡಿ, ತೆಗೆದುಕೊಂಡು ಹೋಗಲಿ. ಸರ್ಕಾರÜ ರೈತರಿಗೆ ಮಾರಕವಾಗಿರುವ ಈ ಕರ್ನಾಟಕ ಗೋಸಂರಕ್ಷಣಾ ಕಾಯ್ದೆಯನ್ನು ವಾಪಸ್ ಪಡೆದು, ರೈತರು ಸಾಕುವ ಹಸುಗಳಿಗೆ ಸಹಾಯಧನ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಕ್ತರಹಳ್ಳಿ ಭೈರೇಗೌಡ, ಧನಂಜಯ್ ಆರಾಧ್ಯ,ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಚನಹಳ್ಳಿ ಭೈರೇಗೌಡ, ಅನಿಲ್ ಕುಮಾರ್, ರಾಮನಗರ ಜಿಲ್ಲಾಧ್ಯಕ್ಷ ಭೈರೇಗೌಡ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಗೋಶಾಲೆಗೆ ಅನುದಾನ ಕೊರತೆ
ಕಾರವಾರ(ಜ.22): ಸರಕಾರ ಗೋಶಾಲೆಗಳಿಗೆ ಪ್ರೋತ್ಸಾಹ ಹಾಗೂ ಅನುದಾನ ನೀಡುವುದಾಗಿ ಕೇವಲ ದಾಖಲೆಗಳಲ್ಲಿ ಮಾತ್ರ ಘೋಷಣೆ ಮಾಡಿದ ಕಾರಣ ಇಂದಿಗೂ ರಾಜ್ಯದ ಹಲವು ಗೋಶಾಲೆಗಳು ಸಂಕಷ್ಟ ಎದುರಿಸುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರಿನ ಗೋಪಾಲಕೃಷ್ಣ ಗೋಶಾಲೆಯು ಅನುದಾನ ಕೊರತೆಯಿಂದ ಗೋವು ಪಾಲನೆಗೆ ಕಷ್ಟ ಪಡುತ್ತಿದೆ. ಮೇವು ಖರೀದಿಗೂ -ಹಣ ಇಲ್ಲದ ಕಾರಣ ಹಸುಗಳು ಸೊರಗುತ್ತಿವೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ....
ಹೌದು, ರಸ್ತೆಯಲ್ಲಿ ತಿರುಗುವ ಬಿಡಾಡಿ ದನಗಳಿಗೆ ಹಾಗೂ ಕಸಾಯಿಖಾನೆಗೆ ಸಾಗಿಸುವಾಗ ಸಿಕ್ಕಿಬಿದ್ದ ದನಗಳಿಗೆ ಆಶ್ರಯ ತಾಣವಾಗಿದೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರಿನ ಗೋಪಾಲಕೃಷ್ಣ ಗೋಶಾಲೆ. 2016ರಲ್ಲಿ ಗೋಪಾಲಕೃಷ್ಣ ಗೋಶಾಲಾ ಟ್ರಸ್ಟ್ ಆರಂಭಿಸಿದ್ದ ಈ ಗೋಶಾಲೆಯು ದಾನಿಗಳ ಸಹಕಾರದೊಂದಿಗೆ ನಿರ್ವಹಣೆ ಆಗುತ್ತಿತ್ತು. ಆದರೆ, ಇತ್ತೀಚೆಗೆ ಗೋ ಪೋಷಣೆಗೆ ಅಗತ್ಯವಾದ ಹಿಂಡಿ, ಹುಲ್ಲು ಸೇರಿದಂತೆ ಮೇವು ಪದಾರ್ಥಗಳನ್ನು ಖರೀದಿಸಲು ಕೂಡಾ ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ. ಗೋಶಾಲೆಯಲ್ಲಿ ಇರುವ ಅಂದಾಜು 65 ಕ್ಕೂ ಹೆಚ್ಚು ಗೋವುಗಳು ಮೇವು ಹಿಂಡಿ ಸರಿಯಾಗಿ ಸಿಗದೇ ಹಸಿವಿನಿಂದ ಬಳಲುವಂತಾಗಿದೆ. ಈ ಹಸುಗಳಿಂದ ಹಾಲಿನ ಇಳುವರಿ ಕಡಿಮೆಯಿದ್ದು, ಪ್ರತಿದಿನ 750ರೂ. ಮಾತ್ರ.
ASSEMBLY ELECTION: ದೇಶದ ಏಳಿಗೆಗೆ ಮೋದಿ ಪರ ನಿಲ್ಲಿ; ರೂಪಾಲಿ ನಾಯ್ಕ್
ಆದಾಯ ದೊರಕುತ್ತಿದೆ. ಆದರೆ, ಇವುಗಳಿಗೆ ಮೇವು ಹಿಂಡಿ ಸೇರಿದಂತೆ ಅಂದಾಜು ಮೂರು ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಗೋವು ಪಾಲನೆಗಾಗಿ 1 ಲಕ್ಷ ರೂ. ಅನುದಾನ ನೀಡಿತ್ತು. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರು ಈ ಗೋಶಾಲೆಯ ಬಗ್ಗೆ ಸಮೀಕ್ಷೆ ನಡೆಸಿ ಅಂದಾಜು 75 ಸಾವಿರ ರೂ. ಅನುದಾನ ಬಿಡುಗಡೆ ಮಾಡಿದ್ದರು. ಅದರ ಹೊರತಾಗಿ ಬೇರೆ ನೆರವು ಸರ್ಕಾರದಿಂದ ಬಂದಿಲ್ಲ ಎನ್ನುತ್ತಾರೆ ಗೋಶಾಲೆ ನಿರ್ವಹಿಸುತ್ತಿರುವ ಸಿಬ್ಬಂದಿ.
ಅಂದಹಾಗೆ, ಗೋ ಕಳ್ಳತನ ಮಾಡುವವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗಲೂ ಅವರ ವಶದಲ್ಲಿದ್ದ ಗೋವುಗಳನ್ನು ಪೊಲೀಸರು ಇದೇ ಗೋಶಾಲೆಯಲ್ಲಿ ಬಿಟ್ಟು ತೆರಳುತ್ತಾರೆ. ಆದರೆ, ಗೋವುಗಳ ಪಾಲನೆಗೆ ಯಾವುದೇ ಸಹಾಯವಿಲ್ಲದ ಕಾರಣ ಅವುಗಳ ಹೊಟ್ಟೆ ತುಂಬಿಸಲು ಕೂಡಾ ಕಷ್ಟವಾಗುತ್ತಿದೆ. ಜನಪ್ರತಿನಿಧಿಗಳು ಸರಕಾರ ಅನುದಾನ ಘೋಷಣೆ ಮಾಡುತ್ತಿದೆ ಎಂದು ಹೇಳಿಕೆ ನೀಡುತ್ತಾರೆ ಹೊರತು ಸರಕಾರದ ಘೋಷಣೆಗಳು ದಾಖಲೆಗಳಿಗೆ ಮಾತ್ರ ಸೀಮಿತವಾಗಿವೆ. ಈ ಕಾರಣದಿಂದ ಗೋಪಾಲಕೃಷ್ಣ ಗೋಶಾಲೆಗಳಂತೆ ಹಲವು ಗೋಶಾಲೆಗಳು ಕೂಡಾ ಬಹಳಷ್ಟು ಕಷ್ಟದಲ್ಲೇ ನಡೆಯುತ್ತಿದೆ. ಈ ಕಾರಣದಿಂದ ಪುಣ್ಯಕೋಟಿ ನಿಧಿಯಡಿ ಸರ್ಕಾರ ಈ ಗೋಶಾಲೆಯನ್ನು ಪರಿಗಣಿಸಿ ತಕ್ಷಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಗೋಪಾಲಕೃಷ್ಣ ಗೋಶಾಲಾ ಟ್ರಸ್ಟ್‌ನ ಅಧ್ಯಕ್ಷ ವಿಷ್ಣು ನಾಯ್ಕ ವಿನಂತಿಸಿದ್ದಾರೆ.
ಒಟ್ಟಿನಲ್ಲಿ ಗೋಶಾಲೆಗಳು ಅನುದಾನಗಳ ಕೊರತೆಯಿಂದ ಸಾಕಷ್ಟು ಸಮಸ್ಯೆಯಲ್ಲಿದ್ದು, ಸರಕಾರದ ನಿರ್ಲಕ್ಷ್ಯಕ್ಕೊಳಗಾಗಿವೆ. ಚುನಾವಣೆಯ ಮುನ್ನವೇ ಸರಕಾರ ಎಚ್ಚೆತ್ತು ಗೋಶಾಲೆಗಳಿಗೆ ಅನುದಾನ ನೀಡುವ ಮೂಲಕ ಗೋವುಗಳನ್ನು ರಕ್ಷಿಸಬೇಕಿದೆ.