3 ದಿನ ಅಲೆದರೂ ಬೆಡ್ ಸಿಕ್ಕಿಲ್ಲ: ಚಿಕಿತ್ಸೆಗಾಗಿ ಸಿಎಂ ಮನೆಗೇ ಬಂದು ಸೋಂಕಿತ ಮೊರೆ..!

By Kannadaprabha NewsFirst Published Jul 17, 2020, 7:53 AM IST
Highlights

ಕೊರೋನಾ ಸೋಂಕಿತರಿಗೆ ದಾಖಲಾಗಲು ಆಸ್ಪತ್ರೆಗಳಲ್ಲಿ ಹಾಸಿಗೆಯೇ ದೊರಕುತ್ತಿಲ್ಲ ಹಾಗೂ ಸೂಕ್ತ ಚಿಕಿತ್ಸೆ ಲಭಿಸುತ್ತಿಲ್ಲ ಎಂಬ ದೂರುಗಳ ನಡುವೆಯೇ, ಈ ಆರೋಪಕ್ಕೆ ಪುಷ್ಟಿನೀಡುವಂಥ ಹೃದಯವಿದ್ರಾವಕ ಘಟನೆಯೊಂದು ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮನೆಯ ಎದುರೇ ನಡೆದಿದೆ. ಮುಖ್ಯಮಂತ್ರಿಗಳ ಮನೆ ಮುಂದೆ ನಡೆಯುತ್ತಿರುವ ಇಂಥ 2ನೇ ಪ್ರಸಂಗ ಇದಾಗಿದೆ.

ಬೆಂಗಳೂರು(ಜು.17): ಕೊರೋನಾ ಸೋಂಕಿತರಿಗೆ ದಾಖಲಾಗಲು ಆಸ್ಪತ್ರೆಗಳಲ್ಲಿ ಹಾಸಿಗೆಯೇ ದೊರಕುತ್ತಿಲ್ಲ ಹಾಗೂ ಸೂಕ್ತ ಚಿಕಿತ್ಸೆ ಲಭಿಸುತ್ತಿಲ್ಲ ಎಂಬ ದೂರುಗಳ ನಡುವೆಯೇ, ಈ ಆರೋಪಕ್ಕೆ ಪುಷ್ಟಿನೀಡುವಂಥ ಹೃದಯವಿದ್ರಾವಕ ಘಟನೆಯೊಂದು ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮನೆಯ ಎದುರೇ ನಡೆದಿದೆ. ಮುಖ್ಯಮಂತ್ರಿಗಳ ಮನೆ ಮುಂದೆ ನಡೆಯುತ್ತಿರುವ ಇಂಥ 2ನೇ ಪ್ರಸಂಗ ಇದಾಗಿದೆ.

"

ಚಿಕಿತ್ಸೆ ಸಲುವಾಗಿ ಹಲವು ಆಸ್ಪತ್ರೆಗಳಿಗೆ ಅಲೆದರೂ ಹಾಸಿಗೆ ಸಿಗದೆ ಹತಾಶೆಗೊಂಡ ಕರೋನಾ ಸೋಂಕಿತರೊಬ್ಬರು ಪತ್ನಿ ಹಾಗೂ ಎರಡು ಪುಟ್ಟಮಕ್ಕಳ ಸಹಿತ ತಮ್ಮ ಕುಟುಂಬ ಸಮೇತ ಮುಖ್ಯಮಂತ್ರಿಯರ ಅಧಿಕೃತ ನಿವಾಸದ ಬಳಿ ಆಗಮಿಸಿ ಚಿಕಿತ್ಸೆ ಕೊಡಿಸುವಂತೆ ಅಂಗಲಾಚಿದ್ದಾರೆ.

ಕರ್ತವ್ಯ ಬಹಿಷ್ಕರಿಸಿದ ಆಯುಷ್‌ ವೈದ್ಯರು: 2000 ಸರ್ಕಾರಿ ವೈದ್ಯರಿಂದ ರಾಜೀನಾಮೆ

ಇದರಿಂದಾಗಿ, ‘ಹಾಸಿಗೆ ಕೊರತೆಯಿಲ್ಲ’ ಎಂದು ಹೇಳುವ ಸರ್ಕಾರಕ್ಕೆ ಪರಿಸ್ಥಿತಿಯ ನೈಜ ದರ್ಶನವಾಗಿದೆ. ಮೇಲಾಗಿ ಯಡಿಯೂರಪ್ಪ ಅವರ ಮನೆಯ ಮುಂದೆಯೇ ಈ ಘಟನೆ ನಡೆದಿರುವುದು ಮುಖ್ಯಮಂತ್ರಿಗಳ ಆರೋಗ್ಯ ಹಾಗೂ ಅವರ ಭದ್ರತೆಗೆ ಸವಾಲಾಗುವಂಥದ್ದಾಗಿದೆ.

ಬನಶಂಕರಿ ಸಮೀಪದ ಡಾ.ಬಿ.ಆರ್‌.ಅಂಬೇಡ್ಕರ್‌ ನಗರದ ನಿವಾಸಿಗೆ ಕೊರೋನಾ ಸೋಂಕು ತಗುಲಿತ್ತು. 3 ದಿನಗಳಿಂದ ಚಿಕಿತ್ಸೆಗಾಗಿ ಆತ ಹಲವು ಆಸ್ಪತ್ರೆಗಳಿಗೆ ಎಡ ತಾಕಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಸೋಂಕಿತ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಕುಮಾರಕೃಪಾ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕೆ ತನ್ನ ಕುಟುಂಬ ಸಮೇತ ಬಂದಿದ್ದ. ಆಗ ಮುಖ್ಯಮಂತ್ರಿಗಳ ಮನೆ ಗೇಟಿನ ದ್ವಾರದಲ್ಲೇ ಸೋಂಕಿತನನ್ನು ತಡೆದ ಪೊಲೀಸರು ಅಂತಿಮವಾಗಿ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೆಡ್‌ ಕೊಡಿಸಿ, ನಾನು ಉಳಿಯಲ್ಲ:

ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಸೋಂಕಿತ, ಕೆಲ ದಿನಗಳ ಹಿಂದೆ ಕೋವಿಡ್‌ ಪರೀಕ್ಷೆಗೊಳಗಾಗಿದ್ದರು. ಬಳಿಕ ವೈದ್ಯಕೀಯ ವರದಿಯಲ್ಲಿ ಆತನಿಗೆ ಸೋಂಕು ದೃಢಪಟ್ಟಿತು. ಈ ವರದಿ ಹಿನ್ನೆಲೆಯಲ್ಲಿ ಚಿಕಿತ್ಸೆ ಸಲುವಾಗಿ ಕೋವಿಡ್‌ ನಿಗದಿತ ಆಸ್ಪತ್ರೆಗಳಿಗೆ ಆತ ತೆರಳಿದ್ದಾನೆ. ‘ಆದರೆ ಬೆಡ್‌ ಲಭ್ಯತೆ ಇಲ್ಲವೆಂದು ಹೇಳಿ ಸೋಂಕಿತನನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿವೆ. ಈ ಸಂಬಂಧ ಸಹಾಯ ಕೋರಿ ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಆತ ಆರೋಪಿಸಿದ್ದಾನೆ.

ಬೆಡ್‌ ಸಿಗದೆ ಹತಾಶೆಗೊಂಡ ಸೋಂಕಿತನಿಗೆ ಜ್ವರ ಕಾಣಿಸಿಕೊಂಡಿದೆ. ಇದರಿಂದ ಆತ ನಿತ್ರಾಣಗೊಂಡಿದ್ದಾನೆ. ಹೀಗಾಗಿ ಗುರುವಾರ ಮಧ್ಯಾಹ್ನ 3.20 ರ ಸುಮಾರಿಗೆ ಆತ, ತನ್ನ ಪತ್ನಿ ಮತ್ತು ಮಗು ಜತೆ ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಕಾವೇರಿ ನಿವಾಸ ಬಳಿಗೆ ಬಂದಿದ್ದಾನೆ.

ಚಿಕಿತ್ಸೆ ನಿರಾಕರಿಸಿದರೆ 1 ವರ್ಷ ಜೈಲು ಶಿಕ್ಷೆ..!

ಆಗ ಪ್ರವೇಶ ದ್ವಾರದಲ್ಲಿದ್ದ ಪೊಲೀಸರನ್ನು ಕಂಡ ಆತ, ‘ನನಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತು ಹಲವು ಬಾರಿ ಕರೆ ಮಾಡಿ ಮಾಹಿತಿ ನೀಡಿದರೂ ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಯಾವ ಆಸ್ಪತ್ರೆಗಳಲ್ಲೂ ಬೆಡ್‌ ಸಿಗುತ್ತಿಲ್ಲ’ ಎಂದು ಗೋಳಾಡಿದ್ದಾನೆ. ‘ನನ್ನ ಪತ್ನಿ ಹಾಗೂ ಮಕ್ಕಳು ಇದ್ದು, ಮಕ್ಕಳಿಗೆ ಸೋಂಕು ತಗುಲಿದರೆ ಏನು ಗತಿ ಎಂಬ ಭಯ ಇದೀಗ ಕಾಡುತ್ತಿದೆ’ ಎಂದೂ ಆತಂಕ ವ್ಯಕ್ತಪಡಿಸಿದ್ದಾನೆ.

ಆ ವೇಳೆ ಮುಖ್ಯಮಂತ್ರಿಗಳ ನಿವಾಸದ ಬಳಿ ವರದಿ ಸಲುವಾಗಿ ಹೋಗಿದ್ದ ದೃಶ್ಯ ಮಾಧ್ಯಮಗಳ ಪತ್ರಿನಿಧಿಗಳು, ಬಾಳೇ ಹಣ್ಣು ಹಾಗೂ ಬಿಸ್ಕೆಟ್ಸ್‌ ನೀಡಿ ಸೋಂಕಿತನಿಗೆ ಉಪಚರಿಸಿದ್ದಾರೆ. ಬಳಿಕ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳಿಗೆ ಸೋಂಕಿತ ಆಗಮನ ವಿಚಾರ ತಿಳಿಸಿದ್ದಾರೆ. ಈ ಮಾಹಿತಿ ಪಡೆದ ಬಿಬಿಎಂಪಿ ಅಧಿಕಾರಿಗಳು, ಅರ್ಧ ತಾಸಿನ ನಂತರ ಅಂದರೆ 3.50 ರ ಸುಮಾರಿಗೆ ಕೆ.ಸಿ.ಜನರಲ್‌ ಆಸ್ಪತ್ರೆ ಆ್ಯಂಬುಲೆನ್ಸ್‌ ಕಳುಹಿಸಿ ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಿಎಂ ಮನೆ ಬಳಿಯ 2ನೇ ಪ್ರಕರಣ

ಬೇರೆ ದಾರಿ ಕಾಣದೆ ಸೋಂಕಿತರು ನಾಡಿನ ದೊರೆಯ ಮೊರೆ ಹೋಗಿರುವ ಎರಡನೇ ಪ್ರಕರಣವಿದು. ಸೋಂಕಿತನೊಬ್ಬ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಬೇಸತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದ ಘಟನೆ ಜು.8ರಂದು ಜರುಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಬೆಡ್‌ ಸಿಗದ ಕಾರಣ ಆಟೋದಲ್ಲೇ ಸುತ್ತಾಡಿ ಯಾತನೆ ಅನುಭವಿಸಿದ್ದ. ಕೊನೆಗೆ ಮುಖ್ಯಮಂತ್ರಿ ಮನೆ ಬಳಿಗೆ ತೆರಳಿ ತನ್ನ ಅಳಲು ತೋಡಿಕೊಂಡಿದ್ದ. ನಂತರ ಸೋಂಕಿತನನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

click me!