ಮೃತಳಿಗೆ ಪಾಸಿಟಿವ್: ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರ ಪರೀಕ್ಷೆ | 3 ದಿನಗಳ ಹಿಂದೆ ಕಡೂರಹಳ್ಳಿ ಮಹಿಳೆ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು | ಸಖರಾಯಪಟ್ಟಣ ಮಹಿಳೆಯಲ್ಲೂ ಸೋಂಕು ದೃಢ
ಕಡೂರು (ಜು. 19): ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದ ತಾಲೂಕಿನ ಕಡೂರಹಳ್ಳಿಯ ಮಹಿಳೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವ ವರದಿ ಬಂದಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಸಮೀಪದ ಕಡೂರು ಹಳ್ಳಿಯ 51 ವರ್ಷದ ಮಹಿಳೆಯು 2016ರಿಂದಲೂ ಕಿಡ್ನಿ, ಶುಗರ್ ಮತ್ತು ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.
3 ದಿನಗಳ ಹಿಂದೆ ಸದರಿ ಮಹಿಳೆ ಮೃತಪಟ್ಟಿದ್ದರಿಂದ ಊರಿನವರು ಅಂತ್ಯಸಂಸ್ಕಾರ ಮಾಡಿದ್ದರು. ಶನಿವಾರ ಮೃತ ಮಹಿಳೆಯ ಲ್ಯಾಬ್ ವರದಿ ಬಂದಿದ್ದು, ಮೃತ ಮಹಿಳೆಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದರು.
ಶಿವಮೊಗ್ಗದಲ್ಲಿ 49 ಮಂದಿಗೆ ಕೊರೊನಾ ಸೋಂಕು ದೃಢ; 800 ರ ಗಡಿ ದಾಟಿದ ಸೋಂಕಿತರು
ಮಹಿಳೆಯಲ್ಲಿ ವೈರಸ್ ಪಾಸಿಟಿವ್ ಕಂಡುಬಂದಿದ್ದರಿಂದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಮತ್ತು ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 10ಕ್ಕೂ ಹೆಚ್ಚು ಜನರನ್ನು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮಹಿಳೆ ವಾಸವಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ 42 ವರ್ಷದ ಮಹಿಳೆಗೂ ಸೋಂಕು ದೃಢಪಟ್ಟಿದೆ. ಆಕೆಯನ್ನು ಚಿಕ್ಕಮಗಳೂರಿನ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.