ಮಾಂಸ ಹಾಗೂ ಮೊಟ್ಟೆಯ ಸೇವನೆಯಿಂದ ಕೊರೋನಾ ವೈರಸ್ ಹರಡುವುದೇ ಈ ಬಗ್ಗೆ ಇಲ್ಲಿದೆ ಮಾಹಿತಿ.. ಜನರು ಮಾಂಸ ಸೇವನೆ ಬಗ್ಗೆ ಆತಂಕಗೊಳ್ಳಬೇಕೆ..?
ಹಾಸನ [ಮಾ.15] : ಕೋಳಿ, ಮೊಟ್ಟೆಮತ್ತು ಮಾಂಸ ಸೇವನೆ ಮಾಡುವುದರಿಂದ ಕೊರೋನಾ ವೈರಸ್ ಹರಡುವುದಿಲ್ಲ. ಪ್ರಮುಖವಾಗಿ ಸ್ವಚ್ಛತೆಯತ್ತ ಗಮನ ಹರಿಸಿದರೇ ಯಾವ ಕಾಯಿಲೆಯೂ ಬರೋಲ್ಲ ಎಂದು ಹಿರಿಯ ವೈದ್ಯರಾದ ಭಾರತಿ ರಾಜಶೇಖರ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರ ದೇಶದಲ್ಲಿ ಹರಡಿರುವ ಕೊರೋನಾ ಎಂಬ ವೈರಸ್ ಇಂದು ಭಾರತ ದೇಶದ ಜನರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಕೋಳಿ ಮಾಂಸ ತಿಂದ್ರೆ ಕೊರೋನಾ ಹರಡುತ್ತದೆ ಎಂಬ ಮೂಢನಂಬಿಕೆ ಎಲ್ಲಡೆ ಹರಡಿದ್ದು, ಕೋಳಿಗಳಿಂದ ಯಾವುದೇ ಕೊರೋನಾ ಹರಡಿರೋದು ವೈಜ್ಞಾನಿಕವಾಗಿ ಇನ್ನು ದೃಢಪಟ್ಟಿಲ್ಲ. ಯಾವುದೇ ಪದಾರ್ಥ ಇರಲಿ ಅದನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು ಎಂದರು.
ಸಾಮಾಜಿಕ ತಾಣಗಳ ಸುಳ್ಳು ಸುದ್ದಿ:
ಸಾಮಾಜಿಕ ಜಾಲ ತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳಿಗೆ ಕಿವಿಗೊಡದೇ ಆರೋಗ್ಯ ಇಲಾಖೆಯ ಅಧಿಕೃತ ವೆಬ್ ಸೈಟ್‌ಗಳಿಗೆæ ಭೇಟಿ ನೀಡಿ, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದರು.
ವಿದೇಶದಿಂದ ಬಂದ ಇಬ್ಬರಿಗೆ ಕೊರೋನಾ ಶಂಕೆ: ಆತಂಕದಲ್ಲಿ ಜನತೆ...
ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕಿದೆ. ಆರೋಗ್ಯ ಇಲಾಖೆ ಪ್ರಕಟಿಸಿರುವ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ನಮ್ಮ ಸುತ್ತಮುತ್ತಲ ಪರಿಸರವನ್ನ ಸ್ವಚ್ಛವಾಗಿಟ್ಟುಕೊಳ್ಳುವುದರೊಟ್ಟಿಗೆ ದೇಹದಲ್ಲಿ ಕೊರೋನಾ ಗುಣ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷ ಮಾಡದೇ ಕೂಡಲೇ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು. ಗೋಷ್ಠಿಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಹೆಮ್ಮಿಗೆ ಮೋಹನ್, ಡಾ. ವೈ.ಎಸ್. ವೀರಭದ್ರಪ್ಪ, ಚಿಂತಕ ಮಂಜುನಾಥ್ ದತ್ತ, ಡಾ. ಗುರುರಾಜ್ ಹೆಬ್ಬಾರ್, ಶಬ್ಬೀರ್ ಅಹಮದ್ ಇತರರು ಇದ್ದರು.