* ಬ್ಯಾಡಗಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ರೋಗಿಗಳ ಆಕ್ರೋಶ
* ಸೋಂಕಿತರಿಗೆ ಹಣ್ಣು, ಹಾಲು, ಬ್ರೆಡ್ ಕಾಂಗ್ರೆಸ್ ಪಕ್ಷದ ವತಿಯಿಂದ ವಿತರಣೆ
* ಮನೆಗೆ ಕಳಿಸಿ ಪುಣ್ಯ ಕಟ್ಟಿಕೊಳ್ಳಿ
ಬ್ಯಾಡಗಿ(ಮೇ.15): ಕೋವಿಡ್ ಕೇರ್ ಸೆಂಟರ್‌ನಲ್ಲಿನ ಕಳಪೆ ಆಹಾರ ವಿತರಿಸಲಾಗುತ್ತಿದೆ ಎಂದು ಆರೋಪಿಸಿ ಸೋಂಕಿತರು ಸೆಂಟರ್ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಶುಕ್ರವಾರ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತೆರೆಯಲಾದ ಕೋವಿಡ್ ಸೆಂಟರ್‌ನಲ್ಲಿ 38 ಜನ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಗುಣಮಟ್ಟದ ಆಹಾರ ಸೇರಿದಂತೆ ಮೂಲ ಸೌಲಭ್ಯಗಳಿಲ್ಲದೇ ಬೇಸತ್ತ ಸೋಂಕಿತರು ಪ್ರತಿಭಟನೆ ನಡೆಸಿದರು.
ಇದೇನು ನಿರ್ಗತಿಕರ ತಾಣವೇ?:
ಕೊವಿಡ್ ಕೇರ್ ಸೆಂಟರ್‌ನಲ್ಲಿ ಸರಿಯಾದ ಸಮಯಕ್ಕೆ ಊಟ ಉಪಾಹಾರ ನೀಡದೆ ನಮ್ಮನ್ನು ಅತ್ಯಂತ ಕನಿಷ್ಠವಾಗಿ ನಡೆಸಿಕೊಳ್ಳಲಾಗುತ್ತಿದೆ. ಮಧ್ಯಾಹ್ನ 12 ಗಂಟೆಯಾದರೂ ಬೆಳಗಿನ ಉಪಾಹಾರ ನೀಡುತ್ತಿಲ್ಲ, ಶುದ್ಧ ಕುಡಿಯುವ ನೀರುಸಹ ಕೊಡುತ್ತಿಲ್ಲ. ನಿತ್ಯ ಪೂರೈಸುವ ಆಹಾರವೂ ಕಳಪೆಯಾಗಿದ್ದು, ಇದೇನು ನಿರ್ಗತಿಕರ ವಸತಿ ನಿಲಯವೇ ಎಂದು ಪ್ರಶ್ನಿಸಿದರು.
ಕೊರೋನಾ ಸೋಂಕಿತ ವೃದ್ಧ ಜಿಲ್ಲಾಸ್ಪತ್ರೆ ಬಾಗಿಲಲ್ಲೇ ಆತ್ಮಹತ್ಯೆ
ಮನೆಗೆ ಕಳಿಸಿ ಪುಣ್ಯ ಕಟ್ಟಿಕೊಳ್ಳಿ:
ಗುಣಮಟ್ಟದ ಆಹಾರ ನೀಡಲು ಮನವಿ ಮಾಡಿದರೆ ಸಾಮಗ್ರಿ ಕೊರತೆಯಿದೆ ಎಂಬ ಸಮಜಾಯಿಷಿ ಅಧಿಕಾರಿಗಳು ನೀಡುತ್ತಾರೆ. ಇದ್ಯಾವ ಸೀಮೆ ಕೋವಿಡ್ ಸೆಂಟರ್ ಸ್ವಾಮಿ? ನಮ್ಮನ್ನು ಮನೆಗೆ ಕಳಿಸಿ. ನಾವು ಅಲ್ಲಿಯೇ ಹೋಂ ಐಸೋಲೇಶನ್ ಮಾಡಿಕೊಳ್ಳುತ್ತೇವೆ ಎಂದರು.
ಸ್ಥಳಕ್ಕೆ ಅಧಿಕಾರಿಗಳು:
ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಆಹಾರ ಪೊಟ್ಟಣಗಳನ್ನು ಹೊತ್ತು ತಂದ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಹನುಮಂತಪ್ಪ ಲಮಾಣಿ ಅವರನ್ನು ಸೋಂಕಿತರು ತೀವ್ರ ತರಾಟೆಗೆ ತೆಗೆದುಕೊಂಡರು. ’ಈಗ್ಯಾಕೆ ತಂದ್ರಿ ಊಟ, ಉಪವಾಸ ಸಾಯುತ್ತೇವೆ, ನಿಮ್ಮ ಆಹಾರದ ಪೊಟ್ಟಣಗಳು ಬೇಡವೆಂದು ತಿರಸ್ಕರಿಸಿದರು.
ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡರು:
ಕೋವಿಡ್ ಕೇರ್ ಸೆಂಟರ್‌ನಲ್ಲಿ ಕಳಪೆ ಊಟ ಮತ್ತು ಉಪಹಾರ ವಿತರಿಸುತ್ತಿರುವ ಸುದ್ದಿ ತಿಳಿದು ಕಾಂಗ್ರೆಸ್ ಮುಖಂಡರಾದ ಎಸ್.ಆರ್. ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಜಗದೀಶಗೌಡ ಪಾಟೀಲ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಆರ್. ಪಾಟೀಲ, ಅವರೇನು ಪ್ರಾಣಿಗಳಲ್ಲ, ಗುಣಮಟ್ಟದ ಆಹಾರ ಒದಗಿಸಿ ನಿಮ್ಮ ಮನೆಯಿಂದ ತಂದು ಆಹಾರ ನೀಡುತ್ತಿರುವಿರಾ? ಹಸಿದವನಿಗೆ ಹಳಸಿದನ್ನವು ಅಮೃತ ಎಂಬ ಮಾತುಗಳನ್ನಾಡುವ ಸಂದರ್ಭವೇ ಇದು? ಕೂಡಲೇ ಜಿಲ್ಲಾಧಿಕಾರಿಗಳು ಕೋವಿಡ್ ಸೆಂಟ್‌ರ್ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು. ನಾಳೆಯಿಂದ ಹೀಗಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಪಾಟೀಲ ತಾಕೀತು ಮಾಡಿದರು. ಬಳಿಕ ಎಲ್ಲ ಸೋಂಕಿತರಿಗೆ ಹಣ್ಣು ಹಾಲು ಬ್ರೆಡ್‌ಗಳನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ವಿತರಿಸಲಾಯಿತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona