ಮಹಾಮೋಸ: ಅರ್ಧ ಟ್ಯಾಂಕರ್‌ ಹಾಲಿಗೆ ಅರ್ಧ ಟ್ಯಾಂಕರ್‌ ನೀರು..!

By Kannadaprabha NewsFirst Published May 30, 2021, 8:12 AM IST
Highlights

* ಹಣದಾಸೆಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಟ್ಯಾಂಕರ್‌ ಗುತ್ತಿಗೆದಾರರಿಂದಲೇ ವಂಚನೆ
* ಕಲಬೆರಕೆಗೆ ಸುಸಜ್ಜಿತ ವ್ಯವಸ್ಥೆ
* ತಿರುಮಲ ಡೇರಿಗೆ ಪೂರೈಕೆ

ಮಂಡ್ಯ(ಮೇ.30): ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡಲು ಟೆಂಡರ್‌ ಪಡೆದ ಗುತ್ತಿಗೆದಾರರು ಅಕ್ರಮವಾಗಿ ಅರ್ಧ ಟ್ಯಾಂಕರ್‌ ಹಾಲಿಗೆ ಅರ್ಧ ಟ್ಯಾಂಕರ್‌ ನೀರು ಮಿಶ್ರಣ ಮಾಡಿ ಕಲಬೆರಕೆ ಹಾಲನ್ನು ಪೂರೈಕೆ ಮಾಡುವುದರೊಂದಿಗೆ ಮಹಾಮೋಸ ಎಸಗಿರುವ ಸಂಗತಿ ಬೆಳಕಿಗೆ ಬಂದಿದೆ.

ಹಾಲು ಒಕ್ಕೂಟದ ಬಿಎಂಸಿ ಘಟಕಗಳಾದ ತಗ್ಗಹಳ್ಳಿ, ಚಿಕ್ಕೋನಹಳ್ಳಿ, ಮರಳಿಗ ಮತ್ತು ಕೆರೆಮೇಗಳದೊಡ್ಡಿಗಳಿಂದ ನಿತ್ಯ ಸಂಗ್ರಹವಾಗುವ ಹಾಲನ್ನು ಮುಖ್ಯ ಡೇರಿಗೆ ತರುವುದಕ್ಕೆ ಗುತ್ತಿಗೆ ಪಡೆದಿದ್ದ ಪಿ.ರಾಜು ಪ್ರತಿನಿತ್ಯ 6000 ಲೀಟರ್‌ ಹಾಲನ್ನು ಖಾಸಗಿ ಡೇರಿಗಳಿಗೆ ನೀಡಿ 1.44 ಲಕ್ಷ ಸಂಗ್ರಹಿಸಿಕೊಳ್ಳುತ್ತಿದ್ದರೆಂದು ಪ್ರಾಥಮಿಕ ತನಿಖಾ ಸಮಯದಲ್ಲಿ ತಿಳಿದುಬಂದಿದೆ. ಮೇ 27ರಂದು ಗುತ್ತಿಗೆದಾರರು ಸಂಗ್ರಹಿತ ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡದೆ ಖಾಸಗಿ ಡೇರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಒಕ್ಕೂಟದವರು ದಾಳಿ ನಡೆಸಿದ್ದು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರೈತರಿಂದ ಹೆಚ್ಚುವರಿ ಹಾಲು ಖರೀದಿ ನಿಲ್ಲಿಸಲು KMF ಚಿಂತನೆ..!

ತಿರುಮಲ ಡೇರಿಗೆ ಪೂರೈಕೆ: 

ಮನ್‌ಮುಲ್‌ನ ಬಿಆರ್‌ಸಿ ಕೇಂದ್ರಗಳಲ್ಲಿ ಸಂಗ್ರಹವಾದ ಹಾಲನ್ನು ಆಂಧ್ರಪ್ರದೇಶದ ತಿರುಮಲ ಡೇರಿಗೆ ಸರಬರಾಜು ಮಾಡಲಾಗುತ್ತಿತ್ತು ಎನ್ನುವುದು ಗೊತ್ತಾಗಿದೆ. ಸೋಮನಹಳ್ಳಿಯಲ್ಲಿರುವ ನಂದಿ ಹೆಸರಿನ ಚಿಲ್ಲಿಂಗ್‌ ಸೆಂಟರ್‌ನಲ್ಲಿ ಹಾಲನ್ನು ಶೇಖರಿಸಿಟ್ಟುಕೊಂಡು ಅದನ್ನು ನಂತರ ತಿರುಮಲ ಡೇರಿಗೆ ರವಾನಿಸಲಾಗುತ್ತಿತ್ತು. ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಇದು ನಡೆಯುತ್ತಿತ್ತು ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.

ಕಲಬೆರಕೆಗೆ ಸುಸಜ್ಜಿತ ವ್ಯವಸ್ಥೆ!

ಹಾಲಿನ ಟ್ಯಾಂಕರ್‌ ವಾಹನಗಳ ಅರ್ಧಭಾಗ ನೀರು ಶೇಖರಣೆಯಾಗಿರುವಂತೆ ಉಳಿದರ್ಧ ಭಾಗ ಹಾಲು ಶೇಖರಣೆಯಾಗುವಂತೆ ವಿನ್ಯಾಸ ಮಾಡಿಕೊಂಡು ಟ್ಯಾಂಕರ್‌ಗಳಿಗೆ ಹಾಲನ್ನು ತುಂಬಿಸಿಕೊಳ್ಳಲಾಗುತ್ತಿತ್ತು. ಹಾಲು ತುಂಬುವ ಸಮಯದಲ್ಲೇ ನೀರು ಜೊತೆ ಸೇರಿಸಿಕೊಳ್ಳುವಂತೆ ಲಾರಿಯಲ್ಲೇ ಬ್ಯಾಟರಿ ವ್ಯವಸ್ಥೆಯೊಂದಿಗೆ ಸ್ವಿಚ್‌ ವ್ಯವಸ್ಥೆ ಮಾಡಿಕೊಂಡಿದ್ದರು. ಗುತ್ತಿಗೆ ಪಡೆದ ವಾಹನಗಳನ್ನು ದುರಸ್ತಿ ನೆಪದಲ್ಲಿ ಬೇರೆ ಬೇರೆ ವಾಹನಗಳಲ್ಲಿ ಹಾಲನ್ನು ತುಂಬಿಸಿಕೊಂಡು ಉತ್ತಮವಾದ ಹಾಲನ್ನು ಖಾಸಗಿ ಡೇರಿಗಳಿಗೆ ಕಲಬೆರಕೆ ಹಾಲನ್ನು ಒಕ್ಕೂಟಕ್ಕೆ ಪೂರೈಸಲಾಗುತ್ತಿತ್ತು ಎಂದು ಮನ್‌ಮುಲ್‌ ಅಧ್ಯಕ್ಷ ಬಿ.ರಾಮಚಂದ್ರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
 

click me!