* ನಾಲ್ಕು ಎಕರೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ
* 7 ಜಿಲ್ಲೆಯ ಜನತೆಗೆ ಅನುಕೂಲ
* ತುಮಕೂರು, ಶಿವಮೊಗ್ಗ, ಮೈಸೂರಿನಲ್ಲಿಯೂ ಕಿದ್ವಾಯಿ ಕೇಂದ್ರ ಆರಂಭ
ಬೆಳಗಾವಿ(ಏ.02): ಬೆಳಗಾವಿ(Belagavi) ನಗರದ ವಡಗಾವಿಯ ನಾಲ್ಕು ಎಕರೆ ಜಾಗದಲ್ಲಿ 130 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ(Kidwai Cancer Institute) ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ತುಮಕೂರು, ಶಿವಮೊಗ್ಗ, ಮೈಸೂರಿನಲ್ಲಿ ಕಿದ್ವಾಯಿ ಕೇಂದ್ರ ಆರಂಭಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ(Abhay Patil) ಅವರ ಮುತುವರ್ಜಿಯಿಂದ ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಅವರು ಬೆಳಗಾವಿಗೆ ಕ್ಯಾನ್ಸರ್ ಸಂಸ್ಥೆ ಮಂಜೂರು ಮಾಡಿಸಿದ್ದಾರೆ. ಸಾಧ್ಯವಾದರೆ ಮುಂದಿನ ತಿಂಗಳಿನಲ್ಲಿ ಮುಖ್ಯಮಂತ್ರಿಗಳು ಸುಸಜ್ಜಿತ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಆಸ್ಪತ್ರೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
Free Test ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಉಚಿತ!
ಸದ್ಯ ಒಂದು ನೂರು ಹಾಸಿಗೆ ಆಸ್ಪತ್ರೆ:
ಬೆಳಗಾವಿಯಲ್ಲಿ ಸದ್ಯಕ್ಕೆ ನೂರು ಹಾಸಿಗೆ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಸಾಮರ್ಥ್ಯವನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು. ಕಿದ್ವಾಯಿ ಕ್ಯಾನ್ಸರ್ ಕೇಂದ್ರದ ಮಾದರಿಯಲ್ಲಿ ಪ್ರತಿಯೊಂದು ಚಿಕಿತ್ಸೆ ಇಲ್ಲಿ ಲಭ್ಯವಾಗಲಿದೆ. ಎಲ್ಲ ಬಗೆಯ ವಿಭಾಗಗಳನ್ನು ಆರಂಭಿಸಲಾಗುವುದು. ಅಲ್ಲದೇ ಸಂಶೋಧನಾ ಕೇಂದ್ರವನ್ನು ಕೂಡ ಆರಂಭಿಸುವ ಚಿಂತನೆಯಿದೆ. ಮುಂಬರುವ ದಿನಗಳಲ್ಲಿ ಆಸ್ಪತ್ರೆ(Hospital) ವಿಸ್ತರಣೆಗೆ ಅನುಕೂಲವಾಗುವಂತೆ ಜಾಗವನ್ನು ಗುರುತಿಸಲಾಗಿದೆ ಎಂದರು.
ಕ್ಯಾನ್ಸರ್(Cancer) ರೋಗ ದಿನೆ ದಿನೇ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಈ ಭಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸುವುದು ಅತ್ಯಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಆದ್ದರಿಂದ ಸುಸಜ್ಜಿತ ಮೊಬೈಲ್ ಘಟಕದ ಮೂಲಕ ಕ್ಯಾನ್ಸರ್ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
7 ಜಿಲ್ಲೆಯ ಜನತೆಗೆ ಅನುಕೂಲ:
ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ ಆರಂಭದಿಂದ ಸುತ್ತಮುತ್ತಲಿನ ಏಳು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ಬೆಳಗಾವಿ ಗಡಿ ಜಿಲ್ಲೆ ಆಗಿರುವುದರಿಂದ ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳ ಜನರಿಗೂ ಇದರಿಂದ ಪ್ರಯೋಜನ ಆಗಲಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಹೇಳಿದರು.
130 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಆರಂಭಗೊಂಡ ಬಳಿಕ ಯಾವುದೇ ರೀತಿಯ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ನಿರಂತರ ಪ್ರಯತ್ನ ಮುಂದುವರಿಸಲಾಗುವುದು. ಆರೋಗ್ಯ ಕ್ಷೇತ್ರದ(Health Sector) ಬೆಳವಣಿಗೆಯಿಂದ ಶಿಕ್ಷಣ ಮತ್ತು ವ್ಯಾಪಾರಕ್ಕೆ ಕೂಡ ಅನುಕೂಲವಾಗಲಿದೆ ಎಂದರು.
ಔಷಧಿ ಇಲ್ಲದೆ ಲಂಕಾದಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ: ದ್ವೀಪ ರಾಷ್ಟ್ರಕ್ಕೆ ಭಾರತದ ನೆರವು!
ಈ ಭಾಗಕ್ಕೆ ಆಸ್ಪತ್ರೆ ಮಂಜೂರು ಮಾಡಿರುವುದಕ್ಕೆ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಮುಂಬರುವ ದಿನಗಳಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಕೂಡ ಆರಂಭಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಮತ್ತಿತರರು ಉಪಸ್ಥಿತರಿದ್ದರು.
ರೋಗಿಗಳ ಸುಲಿಗೆ ನಿಲ್ಲಿಸುವ ಕಾಯ್ದೆ ಲೆಕ್ಕಕ್ಕೇ ಇಲ್ಲ..!
ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ(Private Hospitals) ರೋಗಿಗಳ ಸುಲಿಗೆ ನಿಯಂತ್ರಿಸಲು 2017-18ರಲ್ಲಿ ಉಭಯ ಸದನಗಳಲ್ಲಿ ಅಂಗೀಕೃತಗೊಂಡು ಕಾನೂನಾಗಿ ರೂಪುಗೊಂಡಿರುವ ಕೆಪಿಎಂಇ ತಿದ್ದುಪಡಿ-2017 ಕಾಯಿದೆ(KPME Amendment-2017) ನಿಯಮಗಳು ಕಾಗದದ ಮೇಲೆಯೇ ಉಳಿದಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪಟ್ಟಿ ಪ್ರದರ್ಶನ ಸೇರಿದಂತೆ ಕೆಪಿಎಂಇ ತಿದ್ದುಪಡಿ ಕಾಯ್ದೆಯನ್ವಯ ವಿಧಿಸಿರುವ ಷರತ್ತುಗಳೆಲ್ಲ ಉಲ್ಲಂಘನೆಯಾಗುತ್ತಿವೆ.
ಹೀಗಿದ್ದರೂ ಸರ್ಕಾರ(Government of Karnataka), ಆರೋಗ್ಯ ಇಲಾಖೆ(Department of Health), ಜಿಲ್ಲಾಡಳಿತಗಳು ಕಣ್ಮುಚ್ಚಿ ಕುಳಿತಿವೆ. ಇದರಿಂದ ಜನಸಾಮಾನ್ಯರ ಸುಲಿಗೆ ಮುಂದುವರೆದಿದ್ದು, ಕೊರೋನಾ(Coronavirus) ರೋಗಿಗಳಿಗಂತೂ(Patients) ಸರ್ಕಾರವೇ ಇಂತಿಷ್ಟುದರ ಮಾತ್ರ ಪಡೆಯಬೇಕು ಎಂಬ ಸ್ಪಷ್ಟ ಆದೇಶ ಹೊರಡಿಸಿದ್ದರೂ ಯಾವ ಆಸ್ಪತ್ರೆಯೂ ಪಾಲಿಸುತ್ತಿಲ್ಲ. ಸರ್ಕಾರ ನಿಗದಿಪಡಿಸಿರುವ ಚಿಕಿತ್ಸೆ ದರದ 2-3 ಪಟ್ಟು ಹೆಚ್ಚು ವಸೂಲಿ ಮಾಡುತ್ತಿದ್ದು, ಇದು ತಮ್ಮ ಗಮನಕ್ಕೆ ಬಂದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.