ಅವೈಜ್ಞಾನಿಕ ವಿಭಜನೆಯಿಂದ ಕನ್ನಡಿಗರ ಅಸ್ಮಿತೆಗೆ ಧಕ್ಕೆ| ತೆಲುಗರ ಪ್ರಭಾವ ಹೆಚ್ಚಳ; ಕೂಡಲೇ ವಿಭಜನೆ ಕೈಬಿಡಿ| 1 ಲಕ್ಷಕ್ಕೂ ಹೆಚ್ಚು ಜನರಿಂದ ಸಹಿ ಸಂಗ್ರಹ| ಜಿಲ್ಲಾ ವಿಭಜನೆ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರ ಖಂಡನೀಯ|
ಬೆಂಗಳೂರು(ಜ.14): ಬಳ್ಳಾರಿ ಜಿಲ್ಲೆಯನ್ನು ಅತ್ಯಂತ ಅವೈಜ್ಞಾನಿಕವಾಗಿ ಇಬ್ಭಾಗ ಮಾಡಲಾಗುತ್ತಿದೆ. ಇದರಿಂದ ಗಡಿ ಭಾಗದ ಕನ್ನಡಿಗರ ಅಸ್ಮಿತೆಗೆ ಧಕ್ಕೆಯಾಗಲಿದೆ. ಇದೇ ವೇಳೆ ತೆಲುಗರ ಪ್ರಭಾವ ಹೆಚ್ಚಾಗಲಿದೆ. ಕನ್ನಡಿಗರ ಹಿತಕ್ಕೆ ಅತ್ಯಂತ ಮಾರಕವಾಗಿರುವ ಈ ಜಿಲ್ಲೆ ವಿಭಜನೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಇದರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್ ಈ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ, ಹರಪನಹಳ್ಳಿ ತಾಲೂಕುಗಳನ್ನು ಬಳ್ಳಾರಿ ಜಿಲ್ಲೆಯಿಂದ ವಿಭಜಿಸಿ ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳಿಸಲು ಉದ್ದೇಶಿಸಿದೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಜ.14 ಕೊನೆಯ ದಿನವಾಗಿದ್ದು, ಈವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನರು ಸಹಿ ಮಾಡಿ ಜಿಲ್ಲೆ ವಿಭಜನೆಗೆ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ನಾಸೀರ್ ಹುಸೇನ್ ತಿಳಿಸಿದರು.
ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಜಿಲ್ಲೆ ಯಾವ ರಾಜ್ಯಕ್ಕೆ ಸೇರಬೇಕು ಎಂಬ ಬಗ್ಗೆ ಮತದಾನ ನಡೆದಿತ್ತು. ಆಗ ಬಳ್ಳಾರಿ ಜನತೆ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡರು. ಗಡಿ ಭಾಗವಾದ ಈ ಜಿಲ್ಲೆಯಲ್ಲಿ ತೆಲುಗರ ಪ್ರಭಾವ ಹೆಚ್ಚಿದೆ. ಇಂತಹ ಸೂಕ್ಷ್ಮ ಜಿಲ್ಲೆಯಾಗಿರುವ ಬಳ್ಳಾರಿಯನ್ನು ವಿಭಜಿಸಿದರೆ ಇದು ಮತ್ತೊಂದು ಬೆಳಗಾವಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಂಪಿ ಸ್ಮಾರಕಗಳ ಬಳಿ ಮತ್ತೆ ಡ್ರೋಣ್ ಕ್ಯಾಮೆರಾ ಹಾರಾಟ
ಸಹಿ ಸಂಗ್ರಹ- ಉಗ್ರಪ್ಪ:
ಈ ವೇಳೆ ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ಬಳ್ಳಾರಿ ಜಿಲ್ಲೆ ವಿಭಜನೆಗೆ ಸ್ಥಳೀಯರ ವಿರೋಧವಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದ್ದು, ಮಾಡುವ ಕೆಲಸ ಬಿಟ್ಟು ಬೇರೆಲ್ಲಾ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಅಲ್ಲಿನ ಜನರ ನೋವಿಗೆ ಕಾರಣವಾಗಿದ್ದಾರೆ. ತುಂಗಭದ್ರ ಅಣೆಕಟ್ಟು ಹೂಳು ತೆಗೆಸಿಲ್ಲ. ರಾಷ್ಟ್ರೀಯ ಹೆದ್ದಾರಿಗಳು ಹಾಳಾಗಿವೆ. ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸ್ವಂತ ಕಟ್ಟಡವೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ಜಿಲ್ಲಾ ವಿಭಜನೆ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರ ಖಂಡನೀಯ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಈ ಭಾಗದಲ್ಲಿ ಕನ್ನಡಿಗರ ಪ್ರಮಾಣ ಕಡಿಮೆಯಾಗಿ ಆಂಧ್ರ ಪ್ರಭಾವ ಹೆಚ್ಚಾಗಲಿದೆ. ಇಂತಹ ಅವೈಜ್ಞಾನಿಕ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬಾರದು. ಕಳೆದ 30 ದಿನಗಳಿಂದಲೂ ಜಿಲ್ಲೆ ವಿಜಭನೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಉಗ್ರ ರೂಪಕ್ಕೆ ತಾಳುವ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ವಿಠ್ಠಲ್, ಮುಖಂಡರಾದ ತುಕಾರಾಮ್, ಕೆಪಿಸಿಸಿ ವಕ್ತಾರ ಸತ್ಯಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.