* ಮುಗಿಯದ ಹಿಜಾಬ್ ವಿವಾದ
* ಹಿಜಾಬ್ ಧರಿಸಿಯೇ ಕಲಾಪಕ್ಕೆ ಬರುತ್ತೇನೆ
* ಮುಸ್ಲಿಂ ಮೂಲಭೂತ ಹಕ್ಕು ಕಸಿಯುವ ಕೆಲಸ ನಡೆಯುತ್ತಿದೆ
* ಶಾಸಕಿ ನೀಜ್ ಫಾತಿಮಾ ಆಕ್ರೋಶ
ಕಲಬುರಗಿ (ಫೆ. 06) ಹಿಜಾಬ್ (Hijab) ವಿಚಾರದಲ್ಲಿ ಹುಟ್ಟಿಕೊಂಡ ಗೊಂದಲ ನ್ಯಾಯಾಲಯದ ಆವರಣದಲ್ಲಿದೆ. ಪರ ಮತ್ತು ವಿರೋಧದ ಹೇಳಿಕೆಗಳು ಬರುತ್ತಲೇ ಇವೆ. ಇದೆಲ್ಲದರ ನಡುವೆ ವಿದ್ಯಾರ್ಥಿನಿಯರ ಜತೆ ಹೋರಾಟದಲ್ಲಿ ನಿಂತಿದ್ದ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ (Congress) ಶಾಸಕಿ ಕನೀಜ್ ಫಾತಿಮಾ ((Kaneez Fatima)) ಸವಾಲೊಂದನ್ನು ಹಾಕಿದ್ದಾರೆ.
ಹಿಜಾಬ್ ನಮ್ಮ ಹಕ್ಕು. ನಾವು ಯಾವುದೇ ಕಾರಣಕ್ಕೂ ಬುರ್ಖಾ ಹಾಕಿಕೊಳ್ಳುವುದನ್ನು ಬಿಡುವುದಿಲ್ಲ. ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ನಾನೂ ಸಹ ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ. ಧೈರ್ಯ ಇದ್ದವರು ತಡೆಯಲಿ ಎಂದು ಸವಾಲು ಹಾಕಿದ್ದಾರೆ.
ಹಿಜಾಬ್ ಧರಿಸುವುದು ಮುಸ್ಲಿಂ ಸಮುದಾಯದ ಹಕ್ಕು. ಬಿಜೆಪಿ ಸರ್ಕಾರ ಅಸಂಬದ್ಧ ಕಾನೂನುಗಳ ಮೂಲಕ ಹಕ್ಕು ಕಸಿದುಕೊಳ್ಳುವ ಕೆಲಸ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹೊಸ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ. ಇದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ಸಹ ವಿದ್ಯಾರ್ಥಿಯರು ಹಿಜಾಬ್ ಧರಿಸಿ ಶಾಲಾ ಕಾಲೇಜಿಗೆ ಬರುತ್ತಿದ್ದರು. ಇಷ್ಟು ವರ್ಷದಿಂದ ಇಲ್ಲದ ವಿರೋಧ ಈಗ ಯಾಕೆ ಎಂದು ಪ್ರಶ್ನೆ ಮಾಡಿದರು.
Hijab Row Protest: ಹಿಜಾಬ್ ವಿವಾದ, ಶಾಸಕಿ ಕನೀಜ್ ಫಾತಿಮಾ ನೇತೃತ್ವದಲ್ಲಿ ಪ್ರತಿಭಟನೆ
ಉಡುಪಿ (Udupi) ಮತ್ತು ಕುಂದಾಪುರ (Kundapura)ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ (Hijab) ಧರಿಸಿದ ಬಂದ ವಿದ್ಯಾರ್ಥಿನಿಯರನ್ನು ಕಾಲೇಜು ಪ್ರವೇಶಕ್ಕೆ ನಿರಾಕರಿಸಿದ ಕ್ರಮ ಖಂಡಿಸಿ ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಹಿಬಾಬ್ ನಮ್ಮ ಹಕ್ಕು, ಇದು ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕು ಎಂದು ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು.
ಇದೇ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಮಾತನಾಡಿ ನಾನು ಹಿಜಾಬ್ ಧರಿಸಿಕೊಂಡೇ ವಿಧಾನ ಸೌಧದ ಕಲಾಪಗಳಲ್ಲಿ ಭಾಗವಹಿಸಿದ್ದೇನೆ. ನನ್ನ ಕ್ಷೇತ್ರದ ಜನರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸದನದಲ್ಲಿ ಮಾತನಾಡಿದ್ದೇನೆ. ಹಾಗಾದರೆ ಇನ್ನು ಮುಂದೆ ನಾನು ಕಲಾಪಕ್ಕೆ ಬರದಂತೆ ತಡೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದರು.
ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 6 ಮುಸ್ಲಿಂ (Muslim) ವಿದ್ಯಾರ್ಥಿನಿಯರು (Student) ಸರ್ಕಾರದ ಆದೇಶ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ಎಚ್ಚರಿಕೆಯ ನಡುವೆಯೂ ಮಂಗಳವಾರ ಹಿಜಾಬ್ ಧರಿಸಿಕೊಂಡು ಬಂದಿದ್ದು ಪ್ರಾಂಶುಪಾಲರು ಅವರಿಗೆ ತರಗತಿ ಪ್ರವೇಶವನ್ನು ನಿರಾಕರಿಸಿದ್ದರು. ಈ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ವೇದಿಕೆಯಾಗಿತ್ತು.
ಹೈಕೋರ್ಟ್ ಮೊರೆ: ಹಿಜಾಬ್ ಧರಿಸುವುದು ಸಂವಿಧಾನದ ಮೂಲಭೂತ ಹಕ್ಕೆಂದು(Fundamental Right) ಘೋಷಿಸಬೇಕು ಹಾಗೂ ಹಿಜಾಬ್ ಧಾರಣೆಯನ್ನು ಶಿಕ್ಷಣ ಸಂಸ್ಥೆಗಳು ನಿರ್ಬಂಧಿಸುವಂತಿಲ್ಲ ಎಂದು ಆದೇಶಿಸುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು(Muslim Student) ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ರೇಷಮ್ ಎಂಬ ವಿದ್ಯಾರ್ಥಿನಿ ಹೈಕೋರ್ಟ್‌ಗೆ(High Court) ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲ ಶಾಂತಬಿಷ್ ಶಿವಣ್ಣ ವಕಾಲತ್ತು ತೆಗೆದುಕೊಂಡಿದ್ದು ಹೈಕೋರ್ಟ್ ನಲ್ಲಿ ವಿಚಾರಭೆ ನಡೆಯಲಿದೆ.