ತನ್ನದೇ ಪಕ್ಷದ ಮುಖಂಡರ ವಿರುದ್ಧ ಮೊಯ್ಲಿ ವಾಗ್ದಾಳಿ

By Kannadaprabha News  |  First Published Aug 21, 2019, 8:23 AM IST

ಕೇಂದ್ರದ ನಿರ್ಧಾರ ಒಂದಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕೆಲ ಕಾಂಗ್ರೆಸ್‌ ಮುಖಂಡರಿಗೆ ಇತಿಹಾಸ ಗೊತ್ತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ವ್ಯಂಗ್ಯವಾಡಿದ್ದಾರೆ.
 


 ಬೆಂಗಳೂರು [ಆ.21]:  ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರ (370 ವಿಧಿ) ರದ್ದುಪಡಿಸಿರುವ ಕೇಂದ್ರದ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕೆಲ ಕಾಂಗ್ರೆಸ್‌ ಮುಖಂಡರಿಗೆ ಇತಿಹಾಸ ಗೊತ್ತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ವ್ಯಂಗ್ಯವಾಡಿದ್ದಾರೆ.

ನಗರದ ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ.ದೇವರಾಜ್‌ ಅರಸು ಅವರ ಜನ್ಮದಿನೋತ್ಸವದಲ್ಲಿ ಅವರು ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರ ದೇಶದ ಭಾಗವೆಂದು ಅಂದಿನ ಪ್ರಧಾನಿ ನೆಹರು ಅವರು, ದೇಶ ವಿಭಜನೆ ವೇಳೆ ಭಾರತಕ್ಕೆ ಸೇರ್ಪಡೆ ಮಾಡಿಕೊಂಡರು. ಅದು ಈಗಿನ ಜನಕ್ಕೆ ತಿಳಿದಿಲ್ಲ. ಕೇಂದ್ರ ಸರ್ಕಾರ 370 ವಿಧಿ ರದ್ದು ಮಾಡಿರುವುದು ದೇಶ ಪ್ರೇಮಕ್ಕಲ್ಲ. ರಾಜ್ಯವನ್ನು ಒಡೆಯುವುದೇ ಬಿಜೆಪಿ ಅಜೆಂಡಾ ಆಗಿದ್ದು, ಕೋಮು ಸಂಘರ್ಷ ಭೀತಿ ಸೃಷ್ಟಿಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

Latest Videos

ಮಾಜಿ ಸಚಿವ ಎಚ್‌.ಕೆ.ಮುನಿಯಪ್ಪ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣರಾದ ಕೆಲ ಕಾಂಗ್ರೆಸ್‌ ಮುಖಂಡರನ್ನು ಪಕ್ಷದಿಂದ ಹೊರಗಿಡಬೇಕು. ಪ್ರಾಮಾಣಿಕವಾಗಿ ಕಾಂಗ್ರೆಸ್‌ಗೆ ಮತ ಹಾಕಿದವರನ್ನು ಉಳಿಸಿಕೊಳ್ಳಬೇಕು. ಬಿಜೆಪಿ ನಾಯಕತ್ವ ಒಪ್ಪಿದವರನ್ನು ಪಕ್ಷದಿಂದ ಹೊರಗಿಡಬೇಕಿದೆ. ಕಾಂಗ್ರೆಸ್‌ ಕಾರ್ಯಕರ್ತರಿಂದ ಉಳಿದಿದೆ ಹೊರತು ನಾಯಕರಿಂದ ಅಲ್ಲ ಎಂದು ಪರೋಕ್ಷವಾಗಿ ರಮೇಶ್‌ಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಎಚ್‌.ಕೆ.ಪಾಟೀಲ್‌, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾಜ್‌ ಮತ್ತಿತರರು ಉಪಸ್ಥಿತರಿದ್ದರು.

click me!