ಕೈ ಮುಖಂಡನಿಂದ ಸರ್ಕಾರಕ್ಕೆ ಗಂಭೀರವಾದ ಸವಾಲ್

By Kannadaprabha NewsFirst Published Nov 11, 2020, 9:58 AM IST
Highlights

ಕಾಂಗ್ರೆಸ್ ಮುಖಂಡರೋರ್ವರು ಸರ್ಕಾರಕ್ಕೆ ಗಂಭೀರವಾದ ಚಾಲೇಂಜ್ ಮಾಡಿದ್ದಾರೆ

ಮೈಸೂರು (ನ.11):  ರಾಜ್ಯ ಸರ್ಕಾರವು ಟಿಪ್ಪು ಜಯಂತಿ ನಿಷೇಧಿಸುವ ಬದಲು ನಿಮಗೆ ತಾಕತ್ತಿದ್ದರೇ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಸಾರಾಯಿ, ಜೂಜಾಟ ನಿಷೇಧ ಮಾಡಿ ಎಂದು ಕಾಂಗ್ರೆಸ್‌ ಶಾಸಕ, ಮಾಜಿ ಸಚಿವ ತನ್ವೀರ್‌ ಸೇಠ್‌ ಸವಾಲು ಹಾಕಿದರು.

ನಗರದ ಬನ್ನಿಮಂಟಪದ ಅಪ್ನಾ ಘರ್‌ ಅನಾಥಾಶ್ರಮದಲ್ಲಿ ಮಂಗಳವಾರ ನಡೆದ ಟಿಪ್ಪು ಸುಲ್ತಾನ್‌ ಅವರ 271ನೇ ಜಯಂತಿ ಮಹೋತ್ಸವದಲ್ಲಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಟಿಪ್ಪುವನ್ನು ವಿರೋಧಿಸುವವರು ಚರ್ಚೆಗೆ ಬರಲಿ. ಅದು ಬಿಟ್ಟು ಕೇವಲ ಮತ ರಾಜಕಾರಣಕ್ಕಾಗಿ ಟಿಪ್ಪುವನ್ನು ವಿರೋಧಿಸುವುದು ನಾಚಿಕೆಗೇಡಿನ ವಿಚಾರ. ಟಿಪ್ಪು ಈ ರಾಷ್ಟ್ರದ ವೀರಪುತ್ರ, ಟಿಪ್ಪು ಜಯಂತಿ ಮಾಡುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ಡಿ.ಕೆ.ಸುರೇಶ್ ಜೊತೆ ಹೊಂದಾಣಿಕೆ : ಗೆದ್ದ ಮುನಿರತ್ನ ...

ಟಿಪ್ಪು ಜಯಂತಿ ಆಚರಣೆಗೆ ನಾವು ಹಠ ಮಾಡುವುದಿಲ್ಲ. ಸರ್ಕಾರದೊಂದಿಗೆ ಸಂಘರ್ಷಕ್ಕೂ ಇಳಿಯುವುದಿಲ್ಲ. ಇತಿಹಾಸವನ್ನು ಯಾರಿಂದಲೂ ತಿರುಚಲು ಸಾಧ್ಯವಿಲ್ಲ. ಆದರೆ, ಟಿಪ್ಪುವಿನ ಹೆಸರಿನಲ್ಲಿ ಮುಸಲ್ಮಾನರನ್ನು ದ್ವೇಷಿಸುವ ರಾಜಕಾರಣ ಮಾಡುತ್ತಿರುವ ಸರ್ಕಾರದ ಧೋರಣೆ ಸರಿಯಲ್ಲ ಎಂದು ಅವರು ಖಂಡಿಸಿದರು.

ಇವರಿಗೆ ದ್ವೇಷ ಬಿತ್ತುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಜನರ ಮಧ್ಯೆ ದ್ವೇಷ ಬಿತ್ತುವ ರಾಜಕಾರಣ ಮಾಡುತ್ತಿದ್ದಾರೆ. ನಾವು ತಿನ್ನುವ ಆಹಾರ, ಉಡುವ ಬಟ್ಟೆಬಗ್ಗೆ ಟೀಕೆ ಮಾಡುತ್ತಾರೆ. ಇದು ನಾಚಿಗೇಡಿನ ವಿಚಾರ. ಜನರ ಮನಸ್ಸನ್ನು ಹಾಳು ಮಾಡುವಂತಹ ರಾಜಕಾರಣ ಸರಿಯಲ್ಲ. ಇತರರ ಭಾವನೆಗಳಿಗೆ ನೋವುಂಟು ಮಾಡುವ ಅವಕಾಶ ಯಾರಿಗೂ ಇಲ್ಲ. ಗಾಂಧಿ ತತ್ವ, ಸ್ವಾತಂತ್ರ್ಯ, ಸಂವಿಧಾನದ ಬಗ್ಗೆ ನಂಬಿಕೆಯಿಲ್ಲದವರು ಮಾಡುವ ಇಂತಹ ಕಿತಾಪತಿಗಳ ಬಗ್ಗೆ ಜನರಿಗೆ ಈಗ ಅರಿವಾಗಿದೆ. ಹೀಗಾಗಿ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಆಡಳಿತ ನಡೆಸಲಿ ಎಂದು ಅವರು ಸಲಹೆ ನೀಡಿದರು.

ಟಿಪ್ಪುವಿನ ಇತಿಹಾಸ ತಿಳಿಯದೆ ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ. ಶ್ರೀರಂಗಪಟ್ಟಣದಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯವನ್ನು ದಾಳಿಕೋರರಿಂದ ರಕ್ಷಿಸಿದ್ದು ಟಿಪ್ಪು. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಹರಕೆ ತೀರಿಸಲು ಪಚ್ಚೆಕಲ್ಲನ್ನು ನೀಡಿದವರೇ ಟಿಪ್ಪು. ಕೋಲಾರದ ಗ್ರಾಮವೊಂದರ ದೇವಸ್ಥಾನದಲ್ಲಿ ಇಂದಿಗೂ ಟಿಪ್ಪು ಹೆಸರಿನಲ್ಲಿ ನಿತ್ಯವೂ ಮುಂಜಾನೆ ಪೂಜೆ ನಡೆಯುತ್ತಿದೆ. ಇದೆಲ್ಲವೂ ಟಿಪ್ಪು

ಹಿಂದೂ ದೇವಾಲಯಗಳ ಮೇಲೆ ಇಟ್ಟಿರುವ ಭಕ್ತಿ ಮತ್ತು ನಂಬಿಕೆಗೆ ಧ್ಯೋತಕವಾಗಿದೆ ಎಂದು ಅವರು ತಿಳಿಸಿದರು.

ಉಪ ಮೇಯರ್‌ ಸಿ. ಶ್ರೀಧರ್‌, ಮಾಜಿ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಪಾಲಿಕೆ ಮಾಜಿ ಸದಸ್ಯ ಶೌಕತ್‌ ಪಾಷಾ, ರಮ್ಮನಹಳ್ಳಿ ಬಸವಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಮೌಲಾನಾಗಳಾದ ಜಕಾವುಲ್ಲಾ, ಇನಾಯತ್‌ ಉಲ್ ರೆಹಮಾನ್‌, ಅಬ್ದುಲ್‌ ಸಲಾಂ, ಅಬ್ದುಲ್‌ ಸುಬಾನಿ, ಸೈಯ್ಯದ್‌ ಅಲಿ ಮೊದಲಾದವರು ಇದ್ದರು.

click me!