
ನವಲಗುಂದ(ಜು.03): ನಮ್ಮ ದೇಶ ಲಸಿಕೆ ಹಾಗೂ ಆಕ್ಸಿಜನ್ ಉತ್ಪಾದನೆಯಲ್ಲಿ ನಂ. 1 ಇದೆ. ಆದರೂ ನಮ್ಮಲ್ಲಿ ಉಚಿತವಾಗಿ ಲಸಿಕೆ ಜನರಿಗೆ ಮುಟ್ಟಿಲ್ಲ. ಈವರೆಗೂ ಕೇವಲ ಶೇ. 6ರಷ್ಟು ಮಾತ್ರ ಲಸಿಕೆ ಹಾಕಲಾಗಿದೆ. ಲಸಿಕೆ ನೀಡುವ ವಿಚಾರವಾಗಿ ಬಿಜೆಪಿ ಬರೀ ಪ್ರಚಾರ ಪಡೆಯುತ್ತಿದೆ ಅಷ್ಟೇ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾದಿಂದ ಮೃತಪಟ್ಟವರ ಸರಿಯಾದ ಲೆಕ್ಕವಿಲ್ಲ ಹಾಗೂ ಪ್ರಮಾಣ ಪತ್ರದಲ್ಲಿ ಕೊರೋನಾದಿಂದ ಮೃತಪಟ್ಟರೂ ಸಾಮಾನ್ಯ ಸಾವು ಅಂತಾ ಕಾಣಿಸುತ್ತಿದ್ದಾರೆ. ನಾವು ಮುಂದಿನ ದಿನಮಾನಗಳಲ್ಲಿ ಮನೆ ಮನೆಗೆ ಹೋಗಿ ಮೃತಪಟ್ಟವರ ಸಂಖ್ಯೆಯನ್ನು ಗುರುತಿಸುವ ಕೆಲಸ ಮಾಡುತ್ತೇವೆ ಎಂದರು.
ಕಡಿಮೆ ಲಸಿಕೆ ನೀಡಿ ದೊಡ್ಡ ಪ್ರಚಾರ ಪಡೆಯುತ್ತಿರುವ ಬಿಜೆಪಿ: ಲಾಡ್
ಮನಮೋಹನ ಸಿಂಗ್ ಪ್ರಧಾನಮಂತ್ರಿ ಇದ್ದಾಗ ಇಂಧನವನ್ನು 120 ಡಾಲರ್ಸ್ ಕೊಟ್ಟು ಖರೀದಿಸಿ ಅದನ್ನು ಕೇವಲ 50ರಿಂದ 60 ಗಳಲ್ಲಿ ಜನರಿಗೆ ಒದಗಿಸಿದ್ದರು. ಆದರೆ, ಈಗಿನ ಸರ್ಕಾರ ಇಂಧನವನ್ನು 60 ಡಾಲರ್‌ಗೆ ಖರೀದಿಸಿ ಅದನ್ನು 100 ಗಳ ವರೆಗೆ ದೊರೆಯುವಂತೆ ಬಿಜೆಪಿ ಮಾಡಿದೆ. ಸೀತೆ ಜನಿಸಿದ ನೇಪಾಳದಲ್ಲಿ ಹಾಗೂ ರಾವಣ ಹುಟ್ಟಿದ ಶ್ರೀಲಂಕಾದಲ್ಲಿ ಇಂಧನದ ಬೆಲೆ ಇಂದಿಗೂ ಕಡಿಮೆ ಇದೆ. ಆದರೆ, ರಾಮ ಜನಿಸಿದ ಭಾರತದಲ್ಲಿ ಮಾತ್ರ ಪೆಟ್ರೋಲ್, ಡಿಸೇಲ್ ಬೆಲೆ 100ಕ್ಕೇರಿಸಿದ ಬಿಜೆಪಿ ಸರ್ಕಾರ ಇದೆ ಎಂದರು.
ಕಾಂಗ್ರೆಸ್ ಮುಖಂಡರಾದ ಕೆ.ಎನ್. ಗಡ್ಡಿ, ವಿನೋದ್ ಅಸೂಟಿ, ವರ್ಧಮಾನಗೌಡ ಹಿರೇಗೌಡ್ರ, ಮಂಜುನಾಥ ಜಾಧವ್, ಮಂಜುನಾಥ ಮಾಯಣ್ಣವರ, ಸದುಗೌಡ ಪಾಟೀಲ, ನಾರಾಯಣ ರಂಗರಡ್ಡಿ, ಮೌನೇಶ ರೇವಣ್ಣವರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.