'ಅನರ್ಹರ ನೋಯಿಸಿದರೆ ಬಿಜೆಪಿಗೆ ಶಾಪ ತಟ್ಟುತ್ತೆ'

By Web DeskFirst Published Oct 3, 2019, 8:25 AM IST
Highlights

ಅನರ್ಹರ ನೋಯಿಸಿದರೆ ಬಿಜೆಪಿಗೆ ಶಾಪ: ರಾಜಣ್ಣ| ಬಿಜೆಪಿ ಶಾಸಕರು ತಮಗೆ ಆ ಸ್ಥಾನ ಸಿಗಲಿಲ್ಲ, ಈ ಸ್ಥಾನ ಸಿಗಲಿಲ್ಲ ಎನ್ನಬಾರದು

ತುಮಕೂರು[ಅ.03]: ಅನರ್ಹ ಶಾಸಕರನ್ನು ನೋಯಿಸಿದರೆ ಬಿಜೆಪಿಗೆ ಶಾಪ ತಟ್ಟುತ್ತದೆ ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದಿರುವುದೇ ಅನರ್ಹರಿಂದ. ಬಿಜೆಪಿ ಶಾಸಕರು ತಮಗೆ ಆ ಸ್ಥಾನ ಸಿಗಲಿಲ್ಲ, ಈ ಸ್ಥಾನ ಸಿಗಲಿಲ್ಲ ಎನ್ನಬಾರದು. ಸರ್ಕಾರ ಬರುವುದಕ್ಕಾದರೂ ಅನರ್ಹರು ಕಾರಣರಾಗಿದ್ದಾರೆ. ಹೀಗಾಗಿ ಅನರ್ಹರ ಮನನೋಯಿಸುವ ಕೆಲಸ ಬಿಜೆಪಿಯವರು ಮಾಡಬಾರದು. ಅವರಿಗೆ ಕೊಟ್ಟಮಾತನ್ನು ಬಿಜೆಪಿ ನಡೆಸಲಿದೆ ಎಂಬ ವಿಶ್ವಾಸ ತಮಗಿದೆ ಎಂದರು.

ಸಿದ್ದರಾಮಯ್ಯ ಪಕ್ಷದಲ್ಲಿ ಇಲ್ಲದಿದ್ದರೆ ಕಾಂಗ್ರೆಸ್‌ ಪಕ್ಷ ದೊಡ್ಡ ಸೊನ್ನೆ. ಕೆಲವರು ಲಾಬಿ ಮಾಡಿಕೊಂಡು ದೊಡ್ಡ ಲೀಡರ್‌ಗಳು ಅಂತಾ ಹೇಳಿಕೊಂಡು ತಿರುಗಾಡುತ್ತಾರೆ. ಆದರೆ, ಅಂತವರಿಗೆ 10 ವೋಟ್‌ ಹಾಕಿಸುವ ಯೋಗ್ಯತೆ ಇಲ್ಲ. ಮುಂಬೈ, ದೆಹಲಿಯಲ್ಲಿ ತಿರುಗಾಡಿಕೊಂಡು ಮಾಧ್ಯಮಗಳ ಮುಂದೆ ಕೆಲವರು ಸ್ಟೇಟ್‌ಮೆಂಟ್‌ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ಪಕ್ಷಕ್ಕೆ ಒಳ್ಳೆಯದಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಂಸದ ಮುನಿಯಪ್ಪ ಪಕ್ಷದ ಹಿತದೃಷ್ಟಿಯಿಂದ ಸಂಯಮ ಕಳೆದುಕೊಳ್ಳಬಾರದು. ಇಬ್ಬರು ಹಿರಿಯ ನಾಯಕರಿದ್ದಾರೆ. ಮಾಧ್ಯಮದಲ್ಲಿ ಬರುವ ಮಟ್ಟಿಗೆ ಅಸಮಾಧಾನ ಭುಗಿಲೆದ್ದಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಮಾರಕ ಎಂದರು.

ಇದೇ ವೇಳೆ ತುಮಕೂರು ಜಿಲ್ಲೆಯವರೇ ವಿರೋಧ ಪಕ್ಷದ ನಾಯಕರಾಗಬೇಕು ಅಂತಾರೇ, ನಾಯಕರಾದರೇ ಕಾಂಗ್ರೆಸ್‌ ಪಕ್ಷ ಸಮಾಧಿಯಾಗಲಿದೆ ಎಂದು ಪರೋಕ್ಷವಾಗಿ ಪರಮೇಶ್ವರ್‌ಗೆ ಟಾಂಗ್‌ ನೀಡಿದರು.

click me!