ಹೊರಗಿನಿಂದ ಬಂದು ಇಲ್ಲಿ ಆಶ್ರಯ ಪಡೆದವರು ಪರದೇಸಿಗಳೇ ಹೊರತು ಇಲ್ಲಿಯವರಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಮುಖಂಡರೋರ್ವರು ಅಸಮಾಧಾನ ಹೊರಹಾಕಿದ್ದಾರೆ.
ರಾಮನಗರ (ಮಾ.10): ಬೇರೆ ಜಿಲ್ಲೆಯಿಂದ ಇಲ್ಲಿಗೆ ಬಂದು ರಾಜಕೀಯ ಆಶ್ರಯ ಪಡೆದಿರುವ ವ್ಯಕ್ತಿಗಳು ಪರದೇಸಿಗಳೇ ಹೊರತು ಜಿಲ್ಲೆಯ ನಾಯಕರು ಹಾಗೂ ಜನರಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಸರ್ವೆ ಇಲಾಖೆಯ ರೈತ ವಿರೋಧಿ ಧೋರಣೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಮನಗರ ಕ್ಷೇತ್ರದಿಂದ ಆಯ್ಕೆಯಾದ ಪರದೇಸಿಗಳು ರಾಜಕಾರಣದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಆದರೀಗ ಆ ಹುದ್ದೆ ಅಲಂಕರಿಸಲು ಕಾರಣರಾದವರನ್ನೇ ಆಯ್ಕೊಂಡು ತಿನ್ನುವವರೆಂದು ತುಚ್ಛವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
undefined
ಸೀಡಿ ವಿಚಾರ : ಮತ್ತೆ ಪ್ರಸ್ತಾಪಿಸಿದ ಎಚ್ ಡಿ ಕುಮಾರಸ್ವಾಮಿ .
ರಾಮನಗರ ಕ್ಷೇತ್ರದ ಜನರು ನೀಡಿದ ಭಿಕ್ಷೆಯಿಂದ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹುದ್ದೆಗಳನ್ನು ಒಲಿದವು. ಆದರೆ, ಎಂದೂ ಕ್ಷೇತ್ರದ ಜನರ ಕಷ್ಟಸುಖಗಳಿಗೆ ಸ್ಪಂದಿಸಲಿಲ್ಲ. ಕೋವಿಡ್ ನಂತಹ ಸಂಕಷ್ಟದ ದಿನಗಳಲ್ಲಿಯೂ ಸಹಾಯ ಹಸ್ತ ಚಾಚಲಿಲ್ಲ. ಯುವಕರಿಗೆ ಉದ್ಯೋಗ, ಬಡವರಿಗೆ ಸೂರು ಕಲ್ಪಿಸುವ ಕೆಲಸ ಮಾಡಲಿಲ್ಲ. ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಕೈಲಾದ ಸಹಾಯ ಮಾಡಿದರೆ ನನ್ನನ್ನೇ ದಾನಶೂರ ಕರ್ಣ ಎಂದು ಗೇಲಿ ಮಾಡುತ್ತಿದ್ದಾರೆ. ಹೌದು ನಾನು ದಾನಶೂರ ಕರ್ಣನೇ, ನಿಮ್ಮಂತೆ ಡೋಂಗಿತನ ಮಾಡಲು ಬರುವುದಿಲ್ಲ. ನನ್ನ ಕೊನೆ ಉಸಿರು ಇರುವವರೆಗೂ ಜನ ಸೇವೆ ಮಾಡುತ್ತೇನೆ ಎಂದರು.
ಗೋ ಬ್ಯಾಕ್ ಚಳವಳಿ ಎಚ್ಚರಿಕೆ: ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ರಾಮನಗರ ಜಿಲ್ಲೆ ತಬ್ಬಲಿಯಾಗುತ್ತದೆ. ಇದಕ್ಕೆ ಸಿಎಂ ಯಡಿಯೂರಪ್ಪ ಬಜೆಟ್‌ನಲ್ಲಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದೇ ಸಾಕ್ಷಿ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಕಷ್ಟಸುಖಗಳಿಗೆ ಸ್ಪಂದಿಸದಿದ್ದರೆ ಗೋ ಬ್ಯಾಕ್ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ರಾಮನಗರ ಅವ್ಯವಸ್ಥೆಗೆ ಮೂವರು ಜೆಡಿಎಸ್ ಶಾಸಕರೇ ಕಾರಣ. ಶಾಸಕರು ಅಧಿಕಾರಿಗಳ ಸಭೆ ಕರೆದು ಚುರುಕು ಮುಟ್ಟಿಸುವ ಕೆಲಸ ಮಾಡಿಲ್ಲ. ಕಾಟಾಚಾರಕ್ಕೆ ಕೆಡಿಪಿ ಸಭೆ ಹಾಗೂ ಜನಸಂಪರ್ಕ ಸಭೆ ನಡೆಸಬಾರದು. ಸರ್ಕಾರ ಹಾಗೂ ಶಾಸಕರಿಗೆ ಅಧಿಕಾರಿಗಳಿಗ ಮೇಲಿನ ಹಿಡಿತ ಕೈ ತಪ್ಪಿರುವುದೇ ಅವ್ಯವಸ್ಥೆಗೆ ಕಾರಣ ಎಂದು ಟೀಕಿಸಿದರು.
ನಾಲ್ಕು ಕಟ್ಟಡಗಳನ್ನು ಕಟ್ಟಿದಾಕ್ಷಣ ಜಿಲ್ಲೆ ಉದ್ಧಾರ ಆಗುವುದಿಲ್ಲ. ನಿಮ್ಮನ್ನು ನಂಬಿ ಮತ ನೀಡಿದವರಿಗೆ ಹಾಗೂ ರೈತರಿಗೆ ನ್ಯಾಯ ಒದಗಿಸುವಂತೆ ಕೇಳುತ್ತಿದ್ದೇವೆ. ರೈತರು ಹಾಗೂ ಜನಸಾಮಾನ್ಯರಿಗೆ ತೊಂದರೆಯಾದರೆ ಸುಮ್ಮನೆ ಕೂರುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಜನ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದ ಜನರ ಭಾವನೆ ಜತೆ ಆಟ ಆಡುತ್ತಿದ್ದಾರೆ. ಅವರ ಪಾಪದ ಕೊಡ ತುಂಬುತ್ತಿದೆ. ಪಶ್ಚಾತ್ತಾಪ ಪಡುವ ದಿನಗಳು ದೂರ ಉಳಿದಿಲ್ಲ. ಜಿಲ್ಲೆ ಹಾಗೂ ಕ್ಷೇತ್ರದ ಜನರು ನಿಮ್ಮ ಡೋಂಗಿತನ ಹಾಗೂ ಮೊಸಳೆ ಕಣ್ಣೀರಿನಿಂದ ಎಚ್ಚೆತ್ತುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಜಿಪಂ ಅಧ್ಯಕ್ಷ ಎಚ್.ಎನ್.ಅಶೋಕ್, ಮಾಜಿ ಅಧ್ಯಕ್ಷ ರಮೇಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್, ತಾಪಂ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷರಾದ ಕಾಂತರಾಜ್ ಪಟೇಲ್, ನಟರಾಜ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಯು.ನರಸಿಂಹಯ್ಯ, ಮುಖಂಡರಾದ ವಿ.ಎಚ್.ರಾಜು, ಸಿಎನ್‌ಆರ್ ವೆಂಕಟೇಶ್, ಚೇತನ್ ಗೌಡ, ಪಾರ್ವತಮ್ಮ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜು ಯರೇಹಳ್ಳಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ನಿಜಾಮುದ್ದೀನ್ ಷರೀಫ್ ಮತ್ತಿತರರು ಭಾಗವಹಿಸಿದ್ದರು.