ಪಾಲಿಕೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಹೇಗಾದರೂ ಮಾಡಿ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್-ಬಿಜೆಪಿ ಒಳಗೊಳಗೇ ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ. ಅತಂತ್ರ ಫಲಿತಾಂಶ ಪ್ರಕಟ ಬೆನ್ನಲ್ಲೇ ಉಭಯ ಪಕ್ಷಗಳ ಚಿಂತಕರ ಚಾವಡಿ ಜಾಗೃತಗೊಂಡಿದೆ.
ನಾಗರಾಜ ಎಸ್.ಬಡದಾಳ್
ದಾವಣಗೆರೆ [ನ.16] : ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ನಗರ ಪಾಲಿಕೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಹೇಗಾದರೂ ಮಾಡಿ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್-ಬಿಜೆಪಿ ಒಳಗೊಳಗೇ ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ. ಅತಂತ್ರ ಫಲಿತಾಂಶ ಪ್ರಕಟ ಬೆನ್ನಲ್ಲೇ ಉಭಯ ಪಕ್ಷಗಳ ಚಿಂತಕರ ಚಾವಡಿ ಜಾಗೃತಗೊಂಡಿದೆ. ಮ್ಯಾಜಿಕ್ ನಂಬರ್ ಆದ 23ರ ಸಂಖ್ಯೆ ತಲುಪಲು ಈ ಮಧ್ಯೆ ಕಾಂಗ್ರೆಸ್ಸಿನ ಒಬ್ಬ ಬಂಡಾಯ ಅಭ್ಯರ್ಥಿ, ಬಿಜೆಪಿಯ ನಾಲ್ವರು ಬಂಡಾಯ ಅಭ್ಯರ್ಥಿಗಳಾಗಿ ಗೆದ್ದಿರುವುದು ಈಗ ರಾಜಕೀಯ ಚಟುವಟಿಕೆಗಳು ಗರಿಗೆದರಲು ಕಾರಣವಾಗಿದೆ.
undefined
ಬಿಜೆಪಿ ಟಿಕೆಟ್ ವಂಚಿತರಾಗಿ, ಪಕ್ಷದಿಂದಲೇ ಉಚ್ಛಾಟನೆಯಾದರೂ ಎದೆಗುಂದದೇ ಪಕ್ಷದ ನಿಷ್ಟಾವಂತ ಕಾರ್ಯಕರ್ತರು, ಸ್ಥಳೀಯ ಜನರು ತುಂಬಿದ ಆತ್ಮವಿಶ್ವಾಸದ ಮಾತುಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಂಡಾಯ ಬಾವುಟ ಹಾರಿಸಿ, ಗೆದ್ದ ಸದಸ್ಯರಿಗೆ ಈಗ ಮಾತೃ ಪಕ್ಷವೇ ರತ್ನಗಂಬಳಿ ಹಾಸಬೇಕಾದ ಸ್ಥಿತಿ ಬಂದಿದೆ. ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಪಕ್ಷದ ವಿರುದ್ಧವೇ ಬಂಡಾಯ ಸಾರಿ ಗೆದ್ದವರದ್ದೂ ಇದೇ ಕಥೆ.
ಒಟ್ಟು 45 ಸದಸ್ಯ ಬಲದ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 23 ಸದಸ್ಯರ ಬಲ ಬೇಕು. ಹಾಗೇ ನೋಡಿದರೆ ಚುನಾವಣೆಯಲ್ಲಿ 22 ವಾರ್ಡ್‌ನಲ್ಲಿ ಗೆದ್ದು, ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಕಾಂಗ್ರೆಸ್‌ಗೆ ಸದ್ಯಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನು ಒಬ್ಬರ ಬೆಂಬಲ ಬೇಕು. 17 ಸದಸ್ಯರನ್ನು ಗೆದ್ದ ಬಿಜೆಪಿ ಲೆಕ್ಕಾಚಾರದ ಪ್ರಕಾರ ಐವರು ಪಕ್ಷೇತರರ ಪೈಕಿ ನಾಲ್ವರು ಬಿಜೆಪಿ ವಿರುದ್ಧ ಬಂಡಾಯ ಹಾರಿಸಿದ್ದವರು. ಆ ಎಲ್ಲರನ್ನು ಮಾತೃ ಪಕ್ಷಕ್ಕೆ ಕರೆ ತರುವ ಮಾತು ಆಡುತ್ತಿದೆ.
ಪಕ್ಷ ನಿಷ್ಟರಾಗಿದ್ದ ತಾವು ದಶಕಗಳಿಂದಲೂ ನಿಸ್ವಾರ್ಥದಿಂದ ಪಕ್ಷಕ್ಕೆ ದುಡಿದರೂ ಪಾಲಿಕೆ ಚುನಾವಣೆ ವೇಳೆ ಟಿಕೆಟ್ ತಪ್ಪಿದ್ದರಿಂದ ಬಂಡಾಯ ಸಾರಿದ್ದ ಬಂಡಾಯ ಅಭ್ಯರ್ಥಿಗಳು ತಮ್ಮ ಜೀವನವಿಡೀ ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್ ಸೇರಿದಂತೆ ಇತರೆ ಅಭ್ಯರ್ಥಿಗಳ ವಿರುದ್ಧವೂ ಜಯ ಸಾಧಿಸಿದ್ದಾರೆ. ಈಗ ಬಂಡಾಯ ಬಾವುಟದಡಿ ಗೆದ್ದು ಬಂದವರಿಗೆ ಮಾತೃ ಪಕ್ಷವೇ ಕೈಬೀಸಿ ಕರೆಯುತ್ತಿದೆ.
ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಬಂಡಾಯ ಅಭ್ಯರ್ಥಿಗಳು ಗೆದ್ದಾಗಿದ್ದಾರೆ. 22 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷವಂತೂ ಇಬ್ಬರು ಬಂಡಾಯ ಸಾರಿದ್ದವರು ತಮ್ಮ ಪಕ್ಷದವರೆನ್ನುತ್ತಿದೆ. ಆದರೆ, ಗೆದ್ದ ಐವರು ಬಂಡಾಯ ಅಭ್ಯರ್ಥಿಗಳಲ್ಲಿ ನಾಲ್ವರು ಬಿಜೆಪಿಯವರು ಎಂಬುದಾಗಿ ಕೇಸರಿ ಪಕ್ಷ ಹೇಳುತ್ತಿದೆ. ಐವರೂ ಬಂಡಾಯ ಅಭ್ಯರ್ಥಿಗಳನ್ನು ಸೆಳೆಯಲು ಕಾಂಗ್ರೆಸ್ ಸಹ ತಮ್ಮ ಪಕ್ಷದ ಪ್ರಮುಖ ಮುಖಂಡರ ಮೂಲಕ ಪ್ರಯತ್ನ ನಡೆಸಿದೆ. ಅದೇ ರೀತಿ ಬಿಜೆಪಿಯಿಂದಲೂ ಐವರೂ ಪಕ್ಷೇತರರನ್ನು ಸೆಳೆಯಲು ಪ್ರಯತ್ನ ಮುಂದುವರಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಒಂದು ವೇಳೆ ಕಾಂಗ್ರೆಸ್ ಪಕ್ಷ 22 ಸದಸ್ಯ ಬಲದ ಜೊತೆಗೆ ಇಬ್ಬರು ಪಕ್ಷೇತರರು, ಒಬ್ಬ ಜೆಡಿಎಸ್ ಸದಸ್ಯರನ್ನೂ ಸೆಳೆದರೆ ಮ್ಯಾಜಿಕ್ ನಂಬರ್‌ಗಿಂತಲೂ 2 ಸ್ಥಾನ ಹೆಚ್ಚಾಗಲಿವೆ. ಮೇಯರ್ ಆಯ್ಕೆ ವೇಳೆ ದಕ್ಷಿಣ ಶಾಸಕ ಸೇರಿದಂತೆ ಇಬ್ಬರು ವಿಧಾನ ಪರಿಷತ್ ಸದಸ್ಯರ ಮತವೂ ಸೇರುವುದರಿಂದ 28ಕ್ಕೆ ನಮ್ಮ ಬಲ ಹೆಚ್ಚಾಗುತ್ತದೆಂಬುದು ಕಾಂಗ್ರೆಸ್ ಪಾಳೆಯದ ಲೆಕ್ಕಾಚಾರವಾಗಿದೆ. ಇಂತಹದ್ದೊಂದು ಲೆಕ್ಕಾಚಾರವನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಜಿ.ಮಂಜಪ್ಪ ಮುಂದಿಡುತ್ತಾರೆ.
ಬಿಜೆಪಿಯಲ್ಲೂ 17 ಸದಸ್ಯರಿದ್ದು, ನಾಲ್ವರು ಪಕ್ಷೇತರರೂ ನಮ್ಮವರೆ. ಮತ್ತೊಬ್ಬ ಪಕ್ಷೇತರರ ಜೊತೆಗೂ ಮಾತನಾಡಿದ್ದೇವೆ. ಪಕ್ಷೇತರರು ಬಿಜೆಪಿಗೆ ಬೆಂಬಲಿಸಿದರೆ, ತಮ್ಮ ಪಕ್ಷವೂ ಬಿಜೆಪಿಗೆ ಬೆಂಬಲಿಸುತ್ತದೆಂದು ಬಿಜೆಪಿ ನಾಯಕರು ಹೇಳಿದ್ದಾರೆ. ಜೆಡಿಎಸ್‌ನಿಂದ ನಮಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. 17 ಸದಸ್ಯರ ಜೊತೆಗೆ ಐವರು ಪಕ್ಷೇತರರು, ಜೆಡಿಎಸ್ ಸದಸ್ಯೆ ಸೇರಿದಂತೆ 23 ಬಲ ನಮ್ಮದಾಗುತ್ತದೆ. ಇನ್ನು ಶಾಸಕರು, ಸಂಸದರು ಸೇರಿ ನಮ್ಮ ಬಲ 25ಕ್ಕೆ ಏರಿಕೆಯಾಗಲಿದೆ. ನಮ್ಮ ಪಕ್ಷವು ಪಾಲಿಕೆ ಚುಕ್ಕಾಣಿ ಹಿಡಿಯಲು ಪೂರಕ ಬೆಳವಣಿಗೆ ನಡೆದಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಹೇಳುತ್ತಾರೆ.