ಮಳೆಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ಅನ್ಯಾಯವಾಗಬಾರದು. ಹೀಗಾಗಿ ಬೆಳೆನಷ್ಟ ಅನುಭವಿಸಿದ ರೈತರಿಗೆ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಸೂಚಿಸಿದ ಸಚಿವ ಉಮೇಶ ಕತ್ತಿ
ವಿಜಯಪುರ(ಆ.11): ತೀವ್ರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೆಳೆ ಹಾನಿ, ವಸತಿ ಹಾನಿ, ಶಾಲಾ ಕಟ್ಟಡ ಹಾನಿ ಸೇರಿದಂತೆ ಆಗಿರುವ ಇನ್ನಿತರ ಹಾನಿ ಬಗ್ಗೆ ಕಂದಾಯ, ಕೃಷಿ, ತೋಟಗಾರಿಕೆ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಒಂದು ವಾರದೊಳಗೆ ಜಂಟಿ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಗಡುವು ವಿಧಿಸಿದರು. ಬುಧವಾರ ನೈಸರ್ಗಿಕ ವಿಕೋಪ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮಳೆಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ಅನ್ಯಾಯವಾಗಬಾರದು. ಹೀಗಾಗಿ ಬೆಳೆನಷ್ಟ ಅನುಭವಿಸಿದ ರೈತರಿಗೆ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಸೂಚಿಸಿದ ಅವರು, ಈಗ ಜಿಲ್ಲೆಯಲ್ಲಿ ಸಮೃದ್ಧ ಮಳೆಯಾಗಿದೆ. ಬಿತ್ತನೆ ಮಾಡುವ ರೈತರಿಗೆ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕೊರತೆ ಇರುವ ಬೀಜಗಳ ದಾಸ್ತಾನಿಗೆ ಗಮನ ಹರಿಸಬೇಕು. ರೈತರ ಬೇಡಿಕೆಯಂತೆ ಕಡಲೆ ಮತ್ತು ತೊಗರಿ ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಲೋಕೋಪಯೋಗಿ ಇಲಾಖೆ ಎಇಇಗೆ ಬೂಟಿನಿಂದ ಹೊಡೆಯುತ್ತೇನೆಂದ ಉಮೇಶ್ ಕತ್ತಿ!
ವಿಜಯಪುರ ತಾಲೂಕಿನಲ್ಲಿ ಒಟ್ಟು 99 ಮನೆಗಳಿಗೆ ಹಾನಿಯಾಗಿತ್ತು. ಈ ಪೈಕಿ ಈಗಾಗಲೇ 78 ಮನೆಗಳಿಗೆ ನಿಯಮಾನುಸಾರ ಪರಿಹಾರ ಕಲ್ಪಿಸಲಾಗಿದೆ. 17 ಮನೆಗಳಿಗೆ ಪರಿಹಾರ ಕೊಡುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸಭೆಗೆ ತಿಳಿಸಿದರು. ಯಾವುದೇ ಮನೆಗಳು ಬಿಟ್ಟು ಹೋಗದಂತೆ ಸರ್ವೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಹಾಗೂ ಇತರರು ಇದ್ದರು.
ಮಾರ್ಚ್ ಅಂತ್ಯಕ್ಕೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ
ಮಾರ್ಚ್ ಅಂತ್ಯದೊಳಗಾಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಡೋಣಿ ನದಿಯ ಪ್ರವಾಹ ಸೇರಿದಂತೆ ಮಳೆಯಿಂದಾದ ಹಾನಿ ವೀಕ್ಷಣೆಗಾಗಿ ವಿಜಯಪುರ ಪ್ರವಾಸದಲ್ಲಿದ್ದ ಅವರು ಬುಧವಾರ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿದ ನಂತರ ಮಾತನಾಡಿದರು.
ವಿಜಯಪುರದಲ್ಲಿವೆ 300ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಅಪರೂಪದ ಕೃಷ್ಣಮೃಗಗಳು
ಜಿಲ್ಲೆಯ ಜನರ ಬಹು ನಿರೀಕ್ಷೆಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು 2023ರ ಮಾರ್ಚ್ ಅಂತ್ಯದವರೆಗೆ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗಡುವು ವಿಧಿಸಿದರು. ಪ್ರಗತಿಯಲ್ಲಿರುವ, ಟರ್ಮಿನಲ್ ಕಟ್ಟಡ, ಎಟಿಸಿ ಟವರ್, ಸಿಎಫ್‌ಆರ್ ಕಟ್ಟಡ, ರನ್ ವೇ ಸೇರಿದಂತೆ ಇತರೆ ಕಾಮಗಾರಿಯ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು. ವಿಜಯಪುರ ನಿಲ್ದಾಣವನ್ನು ಎಟಿಆರ್-72ದಿಂದ ಏರ್ ಬಸ್-320 ವಿಮಾನಗಳ ಹಾರಾಟಕ್ಕೆ ಮೇಲ್ದರ್ಜೇಗೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮೂರನೇ ಹಂತದ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅವಶ್ಯವಿರುವ .120 ಕೋಟಿಗಳಿಗೆ ಸಹ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ.ಚಿಕ್ಕಲಗಿ ಅವರು ಸಚಿವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ, ವಿಜಯಪುರ ತಹಸೀಲ್ದಾರ ಸಿದ್ಧರಾಯ ಬೋಸಗಿ ಹಾಗೂ ಇತರರು ಇದ್ದರು.