ಈಗಾಗಲೇ ನಡೆದ ಚುನಾವಣೆಯನ್ನು ಅಕ್ರಮವೆಂದು ಘೋಷಿಸಿ ಚುನಾವಣೆ ಪ್ರಕ್ರಿಯೆ ರದ್ದು ಮಾಡಬೇಕು ಎಂದು ಸರ್ಕಾರಕ್ಕೆ ದೂರು ನೀಡಲಾಗಿದೆ.
ದಾವಣಗೆರೆ (ಫೆ.27]: ದಾವಣಗೆರೆ ಮೇಯರ್ ಆಯ್ಕೆಗೆ ನಡೆದ ಚುನಾವಣೆಯನ್ನು ಅಕ್ರಮವೆಂದು ಘೋಷಿಸಿ, ಚುನಾವಣೆ ಪ್ರಕ್ರಿಯೆ ರದ್ಧುಗೊಳಿಸುವಂತೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನಗರದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೇಯರ್-ಉಪ ಮೇಯರ್-4 ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಬಿಜೆಪಿ ಎಂಎಲ್‌ಸಿಗಳನ್ನು ಕಾನೂನು ಬಾಹಿರವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಬಿಜೆಪಿ ಕುಮ್ಮಕ್ಕಿನಿಂದ ಜಿಲ್ಲಾ ಆಡಳಿತ, ಪ್ರಾದೇಶಿಕ ಆಯುಕ್ತರು ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದರು. ಹೈಕೋರ್ಟ್‌ನಲ್ಲಿ ಎಂಎಲ್‌ಸಿಗಳ ನಕಲಿ ವಿಳಾಸ ಪ್ರಕರಣ ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯದಿಂದ ತೀರ್ಪು ಬರುವ ಮುನ್ನವೇ ಜಿಲ್ಲಾಡಳಿತವು ಪಾಲಿಕೆಯ ಇಬ್ಬರು ಪ್ರಭಾರ ಉಪ ಆಯುಕ್ತ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಕರ್ತವ್ಯಲೋಪದ ಕಾರಣದಡಿ ಅಮಾನತುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮೇಯರ್ ಆಯ್ಕೆ ಅಸಿಂಧುಗೊಳಿಸಲಿ ಎಂದು ಆಗ್ರಹಿಸಿದರು.
undefined
ದಾವಣಗೆರೆ ಟಾಪ್ 15 ಸ್ಮಾರ್ಟ್ ಸಿಟಿ ಆಗಿದ್ದು ಹೇಗೆ?...
ಸ್ವತಃ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾಡಳಿತವು ಮತದಾರರ ಪಟ್ಟಿಯಲ್ಲಿ ಲೋಪ ಎಸಗಿದ್ದನ್ನು ಒಪ್ಪಿಕೊಂಡಂತಾಗಿದೆ. ಹೈಕೋರ್ಟ್ ತೀರ್ಪು ಬರುವ ಮುನ್ನವೇ ಜಿಲ್ಲಾಡಳಿತ ತಪ್ಪೊಪ್ಪಿಕೊಂಡಿದ್ದಂತೂ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಮೊದಲು ಅಕ್ರಮವಾಗಿ ಸೇರ್ಪಡೆಗೊಂಡ 12 ಮಂದಿ ಎಂಎಲ್‌ಸಿಗಳ ಹೆಸರನ್ನು ಪಟ್ಟಿಯಿಂದಲೇ ತೆಗೆದು ಹಾಕಲಿ ಎಂದು ಹೇಳಿದರು.
ಜಿಲ್ಲಾ ಆಡಳಿತ, ಪ್ರಾದೇಶಿಕ ಆಯುಕ್ತರು ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಅಮಾಯಕರಾದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ಮೇಯರ್-ಉಪ ಮೇಯರ್-ನಾಲ್ಕು ಸ್ಥಾಯಿ ಸಮಿತಿಗಳಿಗೆ ಮತ್ತೊಮ್ಮೆ ಚುನಾವಣೆ ನಡೆಸಿ, ಅರ್ಹ ಮತದಾರರಿಗೆ ಮಾತ್ರವೇ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಕಾಂಗ್ರೆಸ್ ಸದಸ್ಯ ಎ.ನಾಗರಾಜ ಮಾತನಾಡಿ, ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ಆದರೆ, ಇಬ್ಬರು ಅಮಾಯಕ ಅಧಿಕಾರಿಗಳನ್ನು ಉನ್ನತ ಅಧಿಕಾರಿಗಳು ಬಲಿಪಶು ಮಾಡಿದ್ದಾರೆ. ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು, ಮತದಾರರ ಪಟ್ಟಿಸಿದ್ಧಪಡಿಸಿರುವ ಇಬ್ಬರೂ ಅಧಿಕಾರಿಗಳು ಕರ್ತವ್ಯ ಲೋಪದ ಆರೋಪಕ್ಕೆ ಗುರಿಯಾಗಿದ್ದಾರೆ ಎಂದರು.
ದಾವಣಗೆರೆ ಪಾಲಿಕೆ ಮೇಯರ್-ಉಪ ಮೇಯರ್-4 ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆಯ ಎಲ್ಲಾ ವಿದ್ಯಾಮಾನಗಳನ್ನು ಗಮನಿಸಿ, ಎಲ್ಲಾ ಅಗತ್ಯ ದಾಖಲಾತಿಗಳೊಂದಿಗೆ ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ನಾವು ದೂರು ನೀಡಲಿದ್ದೇವೆ. ಮತ್ತೊಂದು ಕಡೆ ಕಾನೂನು ಹೋರಾಟವೂ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪಕ್ಷದ ಮುಖಂಡರಾದ ಕೆ.ಜಿ.ಶಿವಕುಮಾರ, ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ, ಅಬ್ದುಲ್ ಲತೀಫ್, ಮಂಜುನಾಥ ಗಡಿಗುಡಾಳ್, ವಿನಾಯಕ ಪೈಲ್ವಾನ್, ಸೈಯದ್ ಚಾರ್ಲಿ, ಕೆ.ಚಮನ್ ಸಾಬ್, ಕಲ್ಲಹಳ್ಳಿ ನಾಗರಾಜ, ಹುಲ್ಮನಿ ಗಣೇಶ, ಇಟ್ಟಿಗುಡಿ ಮಂಜುನಾಥ ಇತರರು ಇದ್ದರು.