Assembly Election : ಬಿಜೆಪಿ ಪಕ್ಷದಲ್ಲಿ ಗುಂಪುಗಾರಿಕೆ : ಟಿಕೆಟ್‌ಗಾಗಿ ಪೈಪೋಟಿ

By Kannadaprabha NewsFirst Published Dec 11, 2022, 6:05 AM IST
Highlights

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮಳವಳ್ಳಿ ತಾಲೂಕಿನಲ್ಲಿ ಬಿಜೆಪಿ ಪಕ್ಷದಲ್ಲಿ ಗುಂಪುಗಾರಿಕೆಯಿಂದ ಕ್ಷೇತ್ರದ ಮೂಲ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.

ಸಿ.ಸಿದ್ದರಾಜು ಮಾದಹಳ್ಳಿ.

 ಮಳವಳ್ಳಿ (ಡಿ. 11):  ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮಳವಳ್ಳಿ ತಾಲೂಕಿನಲ್ಲಿ ಬಿಜೆಪಿ ಪಕ್ಷದಲ್ಲಿ ಗುಂಪುಗಾರಿಕೆಯಿಂದ ಕ್ಷೇತ್ರದ ಮೂಲ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.

ಪಟ್ಟಣದಲ್ಲಿ ಪ್ರತ್ಯೇಕ ಮುಖಂಡರು ಎರಡು ಬಿಜೆಪಿ (BJP)  ಕಚೇರಿಗಳು ತೆರೆದಿರುವುದು ತಾಲೂಕು ಘಟಕದಲ್ಲಿ ಗುಂಪುಗಾರಿಗೆ ಇದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯ ಒದಗಿಸುತ್ತಿವೆ. ಪಕ್ಷದ ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರಲ್ಲಿ ಅಧಿಕೃತ ಕಚೇರಿ ಯಾವುದು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಜಿಲ್ಲಾ ಮತ್ತು (Karnataka ) ಬಿಜೆಪಿ ಮುಖಂಡರೇ ಸ್ವಷ್ಟಉತ್ತರ ನೀಡಬೇಕಿದೆ.

ಹಲವು ವರ್ಷಗಳಿಂದ ಪಟ್ಟಣದ ರಾವಣಿ ರಸ್ತೆಯಲ್ಲಿರುವ ಮಾಜಿ ಸಚಿವ ಬಿ.ಸೋಮಶೇಖರ್‌ ಕಟ್ಟಡದಲ್ಲಿ ಬಿಜೆಪಿ ಕಚೇರಿಯನ್ನು ತೆರೆಯಲಾಗಿತ್ತು. ಆದರೆ, ಇತ್ತೀಚೆಗೆ ಬಿಜೆಪಿ ಕಚೇರಿ ಪಟ್ಟಣದ ಮುಖ್ಯರಸ್ತೆಯಲ್ಲಿ ಇರಬೇಕೆಂಬ ವರಿಷ್ಠರ ಆದೇಶದ ಮೇರೆಗೆ ಮಳವಳ್ಳಿ- ಮೈಸೂರು ರಸ್ತೆಯಲ್ಲಿ ಹೊಸ ಕಚೇರಿ ತೆರೆಯಲಾಗಿದೆ.

ಹೊಸ ಬಿಜೆಪಿ ಕಚೇರಿಗೆ ಉದ್ಘಾಟನೆಗೆ ಮಾಜಿ ಸಚಿವ ಬಿ.ಸೋಮಶೇಖರ್‌ ಹೊರತು ಪಡಿಸಿ, ಕಂದಾಯ ಸಚಿವ ಆರ್‌.ಅಶೋಕ್‌, ಜಿಲ್ಲಾಧ್ಯಕ್ಷ ಉಮೇಶ್‌ ಸೇರಿದಂತೆ ಹಲವು ನಾಯಕರು ಆಗಮಿಸಿ ಶುಭ ಕೋರಿ ಹೋಗಿದ್ದರು. ಸ್ವಲ್ಪ ದಿನದಲ್ಲಿಯೇ ಮಾಜಿ ಸಚಿವ ಬಿ.ಸೋಮಶೇಖರ್‌ ಸಂವಿಧಾನ ಅರ್ಪನಾ ದಿನ ಕಾರ್ಯಕ್ರಮ ಮಾಡಿ ಇದೇ ಅಧಿಕೃತ ಬಿಜೆಪಿ ಕಚೇರಿಯಾಗಿದೆ. ಹೊಸದಾಗಿ ತೆರೆದಿರುವ ಕಚೇರಿ ಕೆಲವರ ವೈಯಕ್ತಿಕ ಕಚೇರಿಯಾಗಿದೆ ಎಂದು ಗೊಂದಲದ ಹೇಳಿಕೆ ನೀಡಿದ್ದರು.

ಕ್ಷೇತ್ರದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಸೋಮಶೇಖರ್‌ ಜೊತೆಯಲ್ಲಿದ್ದರೇ, ಇನ್ನೂ ಕೆಲವು ಬಿಜೆಪಿ ಕಾರ್ಯಕರ್ತರು ಹೊಸ ಕಚೇರಿಯಲ್ಲಿನ ಮುಖಂಡರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ಎನ್ನುವುದನ್ನು ತಿಳಿಯದೇ ಗೊಂದಲದಲ್ಲಿದ್ದು ತಟಸ್ಥವಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ಟಿಕೆಟ್‌ಗೆ ಪೈಪೋಟಿ:

ಮಂಡ್ಯ ಜಿಲ್ಲೆಯಲ್ಲಿ ಬಲಿಷ್ಠವಾಗಿ ನೆಲೆಯೂರಲು ರಾಜ್ಯ ಬಿಜೆಪಿ ಘಟಕ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಚುನಾವಣೆಯಲ್ಲಿ ಕನಿಷ್ಠ 3 ರಿಂದ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ನಾಯಕರು ಹೋರಾಟ ಮಾಡುತ್ತಿದ್ದಾರೆ. ಆದರೆ, ಮಳವಳ್ಳಿ ಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್‌ಗಾಗಿ ಮಾಜಿ ಸಚಿವ ಬಿ.ಸೋಮಶೇಖರ್‌, ಮುನಿರಾಜು, ಯಮದೂರು ಸಿದ್ದರಾಜು, ದೋರನಹಳ್ಳಿ ಕುಮಾರಸ್ವಾಮಿ, ಮಧು ಗಂಗಾಧರ್‌ ಪೈಪೋಟಿ ನಡೆಸುತ್ತಿದ್ದಾರೆ.

ಪಟ್ಟಣದಲ್ಲಿ ಎರಡು ಪಕ್ಷದ ಕಚೇರಿ ತೆರೆದಿರುವುದರಿಂದ ಮಾಜಿ ಸಚಿವ ಬಿ.ಸೋಮಶೇಖರ್‌, ಮಧುಗಂಗಾಧರ್‌ ಒಂದುಗುಂಪಿನಲ್ಲಿ, ಮುನಿರಾಜು, ಯಮದೂರು ಸಿದ್ದರಾಜು, ಕುಮಾರಸ್ವಾಮಿ ಮತ್ತೊಂದು ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯ ನಾಯಕರು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ತಾಲೂಕಿನಲ್ಲಿ ಯಾವುದು ಗೊಂದಲವಿಲ್ಲ ಎಂದು ಹೇಳಿದ್ದರೂ ಕೂಡ ಪ್ರತ್ಯೇಕ ಕಚೇರಿಗಳಲ್ಲಿ ಸ್ಥಳೀಯ ನಾಯಕರು ಕುಳಿತು ಪಕ್ಷ ಸಂಘಟನೆಗಾಗಿ ಸಭೆ, ಸಮಾರಂಭ ಮಾಡುತ್ತಿರುವುದನ್ನು ತಾಲೂಕು ಬಿಜೆಪಿ ಮುಖಂಡರೇ ಬಹಿರಂಗಪಡಿಸಿದ್ದಾರೆ.

ಮಾಜಿ ಸಚಿವ ಬಿ.ಸೋಮಶೇಖರ್‌ ತಮ್ಮ ರಾಜಕೀಯ ಹಿರಿತನವನ್ನು ನೋಡಿ ವರಿಷ್ಠರು ತನಗೆ ಟಿಕೆಚ್‌ ನೀಡುತ್ತಾರೆಂದು ತಮ್ಮ ಬಿಜೆಪಿ ಕಚೇರಿಯಲ್ಲಿ ಕಾರ್ಯ ಚಟುವಟುಕೆ ನಡೆಸುತ್ತಿದ್ದರೆ, ಇತ್ತ ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ಜಿ.ಮುನಿರಾಜು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಬಿಜೆಪಿ ವರಿಷ್ಠರು ನನಗೆ ಟಿಕೆಚ್‌ ನೀಡುವ ಭರವಸೆ ನೀಡಿದ್ದಾರೆ ಎಂದು ಜನರ ಮನವೊಲಿಕೆಗೆ ಮುಂದಾಗಿದ್ದಾರೆ.

ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ:

ಇವರಿಬ್ಬರ ನಡುವೆ ನಮಗೆ ಟಿಕೆಚ್‌ ಸಿಗಬಹುದು ಎನ್ನುವ ಆಸೆಯೊಂದಿಗೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಯಮದೂರು ಸಿದ್ದರಾಜು ಹಾಗೂ 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೋರನಹಳ್ಳಿ ಕುಮಾರಸ್ವಾಮಿ ಅವರು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಸಿದ್ದಾರೆ. ಇಬ್ಬರು ಪ್ರಬಲ ಆಕಾಂಕ್ಷಿಗಳ ನಡುವೆ ಮತ್ತಿಬ್ಬರು ತಮಗೆ ಟಿಕೆಚ್‌ ಸಿಗಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಜನರು ಈ ಬಾರಿ ಮಳವಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎನ್ನುವ ಉತ್ಸಾಹ ಈ ನಾಯಕರಲ್ಲಿದೆ.

ಗೊಂದಲ ನಿವಾರಣೆ ಯಾವಾಗ:

ಎರಡು ಕಚೇರಿಗಳ ಗೊಂದಲದಿಂದ ತಾಲೂಕಿನಲ್ಲಿ ಬಲಿಷ್ಠಗೊಳ್ಳುತ್ತಿರುವ ಬಿಜೆಪಿಯ ಸಂಘಟನೆಗೆ ಮುಳುಗವಾಗುವ ಸಾಧ್ಯತೆ ಇದೆ. ಮಾಜಿ ಸಚಿವ ಬಿ.ಸೋಮಶೇಖರ್‌ ವರ್ಸಸ್‌ ಮೂವರು ನಡುವೆ ಯಾರಿಗೆ ಟಿಕೆಚ್‌ ಎನ್ನುವ ಪ್ರಶ್ನೆ ಸಾಮಾನ್ಯ ಕಾರ್ಯಕರ್ತರಲ್ಲಿ ಕಾಡ ತೊಡಗುತ್ತಿದೆ. ಕಚೇರಿಯ ಗೊಂದಲ ಹಾಗೂ ಟಿಕೆಚ್‌ಗಾಗಿ ನಡೆಯುತ್ತಿರುವ ಗುದ್ದಾಟಕ್ಕೆ ಚುನಾವಣಾ ಉಸ್ತುವಾರಿ ಉಳಿಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿ ಇರುವ ಕಂದಾಯ ಸಚಿವ ಆರ್‌.ಅಶೋಕ್‌ ಸೇರಿದಂತೆ ಪಕ್ಷದ ನಾಯಕರು ಅಂತಿಮ ತೆರೆ ಎಳೆಯಬೇಕಿದೆ.

ಪಕ್ಷದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಮುಖಂಡರು ಕಚೇರಿ ಮಾಡಿಕೊಂಡಿದ್ದಾರೆ. ಆದರೆ, ಮಳವಳ್ಳಿ ತಾಲೂಕಿನಲ್ಲಿ ಮಂಡಲ ಅಧ್ಯಕ್ಷರು ಎಲ್ಲಿ ಕುಳಿತುಕೊಳ್ಳುತ್ತಾರೋ ಅದೇ ಅಧಿಕೃತ ಕಚೇರಿ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ.

ಸಿ.ಪಿ.ಉಮೇಶ್‌, ಬಿಜೆಪಿ ಜಿಲ್ಲಾಧ್ಯಕ್ಷರು.

ತಾಲೂಕಿನ ಬಿಜೆಪಿ ಪಕ್ಷದಲ್ಲಿ ಎರಡು ಗುಂಪುಗಳಿವೆ. ಬಿಜೆಪಿ ಅಪ್ಪಟ ಕಾರ್ಯಕರ್ತರಾದ ನಾವು ಬಿಜೆಪಿ ಕಚೇರಿಗೆ ಹೋಗಬೇಕೆಂದುಕೊಂಡು ಹೋದರೇ ಒಂದು ಗುಂಪಿಗೆ ಸೀಮಿತಗೊಳಿಸುತ್ತಾರೆ. ಒಬ್ಬರನ್ನು ಕಂಡರೇ ಮತ್ತೊಬ್ಬರಿಗೆ ಆಗುವುದಿಲ್ಲ. ಅಧಿಕೃತ ಕಚೇರಿ ಯಾವುದು ಎಂದು ವರಿಷ್ಠರು ಸ್ವಷ್ಟಪಡಿಸಬೇಕು.

ಮಹೇಶ್‌, ಬಿಜೆಪಿ ಕಾರ್ಯಕರ್ತ. 

click me!