ಕರಾವಳಿ ಜಿಲ್ಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಕಡಲ್ಕೊರೆತದ ಸಮಸ್ಯೆ ಹೆಚ್ಚುತ್ತಿದ್ದು ಉತ್ತರ ಕನ್ನಡ ಅಷ್ಟೇ ಅಲ್ಲದೇ ರಾಜ್ಯದ ಕರಾವಳಿ ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್
ಕಾರವಾರ (ಜು.21) : ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಮಳೆಯ ಅಬ್ಬರವಂತೂ ಸಾಕಷ್ಟು ಕಡಿಮೆಯಾಗಿದ್ರೂ, ಕಡಲ್ಕೊರೆತಗಳಂತೂ ಮುಂದುವರಿಯುತ್ತಿವೆ. ಉತ್ತರಕನ್ನಡ ಜಿಲ್ಲೆಯಲ್ಲೂ ಪ್ರಮುಖ ಪ್ರದೇಶಗಳು ಸೇರಿದಂತೆ ಸಾಕಷ್ಟು ಭಾಗಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಡಲಿನ ಒಡಲಿಗೆ ಸೇರುತ್ತಿದ್ದು, ಸಮುದ್ರ ತೀರದಲ್ಲಿ ನೆಲೆಸಿರುವ ಮೀನುಗಾರರಲ್ಲಂತೂ ಭೀತಿಯ ವಾತಾವರಣ ಸೃಷ್ಠಿಯಾಗಿದೆ. ಇದರಿಂದ ಆತಂಕಿತರಾಗಿರುವ ಕಡಲಜೀವಶಾಸ್ತ್ರಜ್ಞರು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬೀಚ್‌ಗಳು ಮಾತ್ರವಲ್ಲದೇ, ಹಲವು ಗ್ರಾಮಗಳು ಕೂಡಾ ಸಮುದ್ರ ಪಾಲಾಗುವ ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ...
ಕರಾವಳಿ ಜಿಲ್ಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಕಡಲ್ಕೊರೆ(Sea drilling)ತದ ಸಮಸ್ಯೆ.. ಕಡಲಿನಿಂದ ಮರಳು ಹಿಂಬರುವ ಪ್ರಮಾಣದಲ್ಲಿ ಭಾರೀ ಇಳಿಮುಖ..! ಭವಿಷ್ಯದಲ್ಲಿ ಕಡಲತೀರಗಳು, ಗ್ರಾಮಗಳು ಕಡಲ ಒಡಲಿಗೆ ಸಾಧ್ಯತೆ...! ಹೌದು, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇದೀಗ ಮಳೆಯ ಕಾಟ ಕಡಿಮೆಯಾಗಿದ್ರೂ, ಕಡಲ ಕೊರೆತದ ಸಮಸ್ಯೆ ಮಾತ್ರ ಮುಂದುವರಿದಿದೆ. ಇದರಿಂದಾಗಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗಗಳಾದ ಕಾರವಾರ(Karwar), ಅಂಕೋಲಾ(Ankola), ಕುಮಟಾ(Kumata), ಹೊನ್ನಾವರ(Honnavar), ಭಟ್ಕಳ(Bhatkala)ದಲ್ಲಿ ಅಲ್ಲಲ್ಲಿ ಕಡಲ್ಕೊರೆತಗಳಾಗಿವೆ. ಇದರಿಂದಾಗಿ ಸಮುದ್ರ ತೀರದ ನಿವಾಸಿಗಳು ಹಾಗೂ ಮೀನುಗಾರರು ಸಾಕಷ್ಟು ಆತಂಕಿತರಾಗಿದ್ದಾರೆ.
ಕಡಲ್ಕೊರೆತ ತಡೆಗೆ ‘ಸೀ ವೇವ್ ಬ್ರೇಕರ್’ ತಂತ್ರಜ್ಞಾನ: ಸಿಎಂ ಬೊಮ್ಮಾಯಿ
ಭೂ ವಿಜ್ಞಾನ ಸಚಿವಾಲಯದ ಕರಾವಳಿ ಸಂಶೋಧನೆಯ ರಾಷ್ಟ್ರೀಯ ಕೇಂದ್ರ 1990-2016ರವರೆಗೆ ನಡೆಸಿದ ಅಧ್ಯಯನ ಪ್ರಕಾರ, ಶೇ. 22ರಷ್ಟು ರಾಜ್ಯದ ಕರಾವಳಿ ಭಾಗ ಸವೆಯುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ 175.65ಕಿ.ಮೀ. ಕರಾವಳಿ ಭಾಗವಿದ್ದರೆ, ಉಡುಪಿಯಲ್ಲಿ 100.71ಕಿ.ಮೀ. ಹಾಗೂ ಮಂಗಳೂರಿನಲ್ಲಿ 36.66ಕಿ.ಮೀ. ಕರಾವಳಿ ಭಾಗವಿದೆ. ಆದರೆ, ಪ್ರತೀ ವರ್ಷ ದಕ್ಷಿಣಕನ್ನಡದಲ್ಲಿ 1.08ಕಿ.ಮೀ.ಗಂಭೀರ, 2.36ಕಿ.ಮೀ. ಮಧ್ಯಮ ಹಾಗೂ 13.18ಕಿ.ಮೀ. ಕಡಿಮೆ ಪ್ರಮಾಣದ ಸಮುದ್ರ ಕೊರೆತಗಳಾಗಿವೆ.
ಉಡುಪಿಯಲ್ಲಿ ಪ್ರತೀ ವರ್ಷ 0.32ಕಿ.ಮೀ. ಗಂಭೀರ, 0.98ಕಿ.ಮೀ. ಮಧ್ಯಮ ಹಾಗೂ 34.92ಕಿ.ಮೀ. ಕಡಿಮೆ ಕೊರೆತಗಳಾಗಿವೆ. ಇನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತೀವರ್ಷ 0.80ಕಿ.ಮೀ. ಗಂಭೀರ, 1.12ಕಿ.ಮೀ. ಮಧ್ಯಮ ಹಾಗೂ 15.26 ಕಿ.ಮೀ. ಕಡಿಮೆ ಪ್ರಮಾಣದ ಸಮುದ್ರ ಕೊರೆತಗಳಾಗಿವೆ. ಇವುಗಳಿಗೆಲ್ಲಾ ಅವೈಜ್ಞಾನಿಕ ಮರಳುಗಾರಿಕೆ, ಸಿಆರ್‌ಝಡ್ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿಗಳು, ನದಿ ಹಾಗೂ ಕಡಲ ತೀರಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಅಭಿವೃದ್ಧಿ ಕಾರ್ಯಗಳು ಹಾಗೂ ಇತರ ಚಟುವಟಿಕೆಗಳು ನಡೆಯುವುದೇ ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು ಅಂತಾರೆ ತಜ್ಞರು.
ಮಂಗ್ಳೂರಲ್ಲಿ ಕಡಲಬ್ಬರ: ಬೈಕಂಪಾಡಿ ಮೀನಕಳಿಯದಲ್ಲಿ ರಸ್ತೆಯೇ ಸಮುದ್ರ ಪಾಲು.
ಮಳೆಗಾಲದಲ್ಲಿ ಸಮುದ್ರ ಕೊರೆತ ಮಾಡಿ, ಚಳಿಗಾಲ ಹಾಗೂ ಬೇಸಿಗೆಗಾಲದ ಸಮಯದಲ್ಲಿ ಮತ್ತೆ ಮರಳನ್ನು ಆ ಪ್ರದೇಶಗಳಿಗೆ ತುಂಬುತ್ತದೆ. ಇದನ್ನು ಇರೋಷನ್ ಹಾಗೂ ರೀ ಅಕ್ರೆಡಿಷನ್ ಪ್ರಕ್ರಿಯೆ ಅಂತಾರೆ. ಆದರೆ, ಪ್ರಸ್ತುತ, ಎಷ್ಟು ಭಾಗ ಕೊರೆತವಾಗುತ್ತದೆಯೋ, ಅಷ್ಟೇ ಪ್ರಮಾಣದಲ್ಲಿ ಮರಳು ತುಂಬುತ್ತಿಲ್ಲ. 2016-19ರವರೆಗೆ ಚೆನ್ನೈ ಮೂಲದ ಸಂಸ್ಥೆಯೊಂದು ಸಮುದ್ರ ಕೊರತೆಯ ಬಗ್ಗೆ ಅಧ್ಯಯನ ನಡೆಸಿದ್ದು, ಕೊರತೆಯಾದಷ್ಟೇ ಪ್ರಮಾಣದಲ್ಲಿ ಮರಳು ವಾಪಾಸು ಬಂದು ಬೀಳುತ್ತಿಲ್ಲ ಅನ್ನೋ ವರದಿ ನೀಡಿದೆ. ಒಂದು ಕಿ.ಮೀ. ಸಮುದ್ರ ಕೊರೆತವಾದ್ರೆ, ಕೇವಲ ಶೇ. 25ರಷ್ಟು ಮಾತ್ರ ಮರಳು ವಾಪಾಸು ಬರುತ್ತಿದ್ದು, ಉಳಿದ 75ರಷ್ಟು ಮರಳು ಸಮುದ್ರದಲ್ಲೇ ಹೋಗುತ್ತಿದೆ ಎಂದು ತಿಳಿಸಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಬೀಚ್‌ಗಳು ಹಾಗೂ ಹಲವು ಗ್ರಾಮಗಳು ಸಮುದ್ರ ಪಾಲಾಗಬಹುದು. ಈ ಕಾರಣದಿಂದ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕಡಲಜೀವಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಅಂದಹಾಗೆ, ಕಡಲಜೀವಶಾಸ್ತ್ರಜ್ಞರು ಹೇಳೋ ಪ್ರಕಾರ, ನಾವು ಬೀಚ್‌ಗಳನ್ನು ಸರಿಯಾಗಿ ಬಳಸದಿರುವುದೇ ಕಡಲಕೊರೆತಕ್ಕೆ ಪ್ರಮುಖ ಕಾರಣ. ಸಮುದ್ರ ಬದಿಯಲ್ಲಿ ಒಂದು ಕಡೆ ಮಾತ್ರ ತಡೆಗೋಡೆ ಹಾಕೋದ್ರಿಂದ, ಬೃಹತ್ ಯೋಜನೆಗಳಿಂದ ಅಲೆಗಳು ತಮ್ಮ ದಾರಿ ಬದಲಾಯಿಸಿ ಮತ್ತೊಂದೆಡೆ ಕೊರೆಯಲಾರಂಭಿಸುತ್ತವೆ. ಈ ಹಿಂದೆ ಕಾಳಿನದಿ ಎಡಭಾಗಕ್ಕೆ ಹರಿದುಹೋಗುತ್ತಿತ್ತಾದ್ರೂ, ಪ್ರಸ್ತುತ ಅದರ ದಾರಿ ಬದಲಾವಣೆಯಾಗಿ ಕಳೆದ 7-8 ವರ್ಷಗಳಲ್ಲಿ ದೇವಭಾಗ್ ಬೀಚ್ ಅನ್ನು ತಿಂದುಬಿಟ್ಟಿದೆ. ಅಭಿವೃದ್ಧಿ ಚಟುವಟಿಕೆ ಹೆಚ್ಚಾದಂತೆ ಸಮುದ್ರ ಕೊರೆತ ಹೆಚ್ಚಾಗುತ್ತಿದ್ದು, ಸಮುದ್ರ ಕೊರೆತವಾಗುವ ಸ್ಥಳಗಳಲ್ಲಿ ಯಾವುದೇ ನಿರ್ಮಾಣ ಕಾಮಗಾರಿಗಳು ನಡೆಯಬಾರದು. ತಜ್ಞರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ರೂ, ಅನುಷ್ಠಾನದಲ್ಲಿ ಹಿನ್ನಡೆಯಾದಂತೆ ಕಾಣುತ್ತಿದೆ.
ಕಾಪುನಲ್ಲಿ ಕಡಲ್ಕೊರೆತ: ರೆಸಾರ್ಟ್‌ಗೆ ತಡೆಗೋಡೆ, ಬಡವರ ಮನೆಗಳಿಗಿಲ್ಲ ರಕ್ಷಣೆ..!
ಸಿಆರ್‌ಝಡ್ ಪ್ರದೇಶಗಳನ್ನು ಮಾಡಿರೋದೇ ಮೀನುಗಾರರಿಗೆ ಸಹಾಯವಾಗಲೆಂದು. ಆದರೆ, ಸ್ಥಿತಿ ಇದೇ ರೀತಿಯಾದಲ್ಲಿ ಮುಂದಿನ ದಿನಗಳಲ್ಲಿ ಮೀನುಗಾರರು ಹೆಚ್ಚು ನಿರಾಶ್ರಿತರಾಗುವ ಸಾಧ್ಯತೆಗಳಿವೆ. ಇನ್ನು ಜನಪ್ರತಿನಿಧಿಗಳು, ಮಂಗಳೂರಿನ ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ ತಡೆಗಟ್ಟಲು ನಡೆಸಿದ ಪೈಲೆಟ್ ಯೋಜನೆಯನ್ನು ಉತ್ತರಕನ್ನಡ ಜಿಲ್ಲೆಗೂ ತಂದು ಅನುಷ್ಠಾನಗೊಳಿಸುವುದಾಗಿ ಹೇಳಿಕೊಳ್ಳುತ್ತಾ ಬರುತ್ತಿದ್ದಾರಾದ್ರೂ, ಈವರೆಗೆ ಯಾವುದೇ ಸಫಲ ಯೋಜನೆಯನ್ನು ಜಾರಿ ಮಾಡಲಾಗಿಲ್ಲ. ಇನ್ನು ಮುಂದಾದ್ರೂ ಸರಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆಯುವ ಸಮುದ್ರ ಕೊರೆತವನ್ನು ತಡೆಗಟ್ಟಬೇಕೆಂದು ಜನರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಕರಾವಳಿ ಭಾಗವಾದ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತೀ ವರ್ಷ ಕಡಲ್ಕೊರೆತದ ಪ್ರಮಾಣ ಹೆಚ್ಚಾಗುತ್ತಿದ್ದು, ಸಮುದ್ರ ತೀರದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಸರಕಾರ ಇದನ್ನು ತಡೆಗಟ್ಟಲು ಸೂಕ್ತ ಪರಿಹಾರ ಕೈಗೊಳ್ಳದಿದ್ದಲ್ಲಿ ಮೀನುಗಾರರು ಹಾಗೂ ಇತರ ಜನರ ಜೀವನದ ಮೇಲೆ ಭಾರೀ ಪರಿಣಾಮ ಬೀರುವುದಲ್ಲದೇ, ಕರಾವಳಿ ಜಿಲ್ಲೆಗಳ ಸಾಕಷ್ಟು ಪ್ರದೇಶಗಳು ಕಡಲಿನ ಒಡಲಿಗೆ ಸೇರುವುದರಲ್ಲಿ ಎರಡು ಮಾತಿಲ್ಲ.