
ಮಂಗಳೂರು: ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜುಲೈ 6ರವರೆಗೆ ಕರಾವಳಿ ಜಿಲ್ಲೆಗಳಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಅರಬ್ಬಿ ಸಮುದ್ರದ ಮಧ್ಯೆ ಭೀಕರ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್‌ವೊಂದು ಮುಳುಗಡೆಯಾಗಿದ್ದು, ಅದರಲ್ಲಿದ್ದ ಆರು ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಮಂಗಳೂರಿನ ಆಳ ಸಮುದ್ರದಲ್ಲಿ 'ಐಎಫ್‌ಬಿ ಮಂಜುಮಾತಾ' ಎಂಬ ಹೆಸರಿನ ದೋಣಿಯಲ್ಲಿ ಆರು ಜನ ಮೀನುಗಾರರು ಎಂದಿನಂತೆ ಮೀನುಗಾರಿಕೆಯಲ್ಲಿ ತೊಡಗಿದ್ದರು. ಆದರೆ, ಇದ್ದಕ್ಕಿದ್ದಂತೆ ಸಮುದ್ರ ಭೀಕರವಾಗಿ ಪ್ರಕ್ಷುಬ್ಧಗೊಂಡಿದ್ದು, ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಒಳಗಡೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಲಾರಂಭಿಸಿದೆ. ನೀರಿನ ಒತ್ತಡ ಹೆಚ್ಚಾಗುತ್ತಿದ್ದಂತೆ ಬೋಟ್ ಸಮುದ್ರದಲ್ಲಿ ಮುಳುಗಲು ಶುರುವಾಗಿ, ಮೀನುಗಾರರು ಸಂಕಷ್ಟಕ್ಜೆ ಸಿಲುಕಿದರು.
ಮೀನುಗಾರರು ಅಪಾಯದಲ್ಲಿರುವ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ, ತಕ್ಷಣವೇ ಕಡಲ ಕಾವಲು ಪಡೆಯ ಅತ್ಯಾಧುನಿಕ ಹಡಗು 'ಐಸಿಜಿಎಸ್ ಸಚೇತ್' (ICGS Sachet) ಮೂಲಕ ಸ್ಥಳಕ್ಕೆ ಧಾವಿಸಿದರು. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದರಿಂದ ದೋಣಿಯ ಹತ್ತಿರ ಹೋಗುವುದು ಸವಾಲಾಗಿತ್ತು. ಈ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಅತ್ಯಾಧುನಿಕ ತಂತ್ರಜ್ಞಾನವಾದ ರಿಮೋಟ್-ಆಪರೇಟೆಡ್ ಲೈಫ್‌ಬಾಯ್‌ಗಳನ್ನು (Remote-operated Lifebuoys) ಬಳಸಿದರು. ಮುಳುಗುತ್ತಿದ್ದ ಬೋಟ್‌ನಲ್ಲಿದ್ದ ಮೀನುಗಾರರ ಬಳಿಗೆ ಈ ರಿಮೋಟ್ ಚಾಲಿತ ಲೈಫ್‌ಬಾಯ್‌ಗಳನ್ನು ಕಳುಹಿಸಿ, ಅವರ ನೆರವಿನೊಂದಿಗೆ ಆರು ಮಂದಿ ಮೀನುಗಾರರನ್ನು ಯಶಸ್ವಿಯಾಗಿ ರಕ್ಷಿಸಿದರು.
ಕೋಸ್ಟ್ ಗಾರ್ಡ್ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ದೊಡ್ಡದೊಂದು ದುರಂತ ತಪ್ಪಿದಂತಾಗಿದೆ. ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಆರು ಮಂದಿ ಮೀನುಗಾರರನ್ನು ಪ್ರಾಥಮಿಕ ಚಿಕಿತ್ಸೆ, ಆಹಾರ ಹಾಗೂ ಅಗತ್ಯ ನೆರವಿಗಾಗಿ ಮಂಗಳೂರಿನ ನ್ಯೂ ಮಂಗಳೂರು ಬಂದರಿಗೆ (NMPT) ಯಶಸ್ವಿಯಾಗಿ ಕರೆತರಲಾಗಿದೆ. ಸದ್ಯ ಎಲ್ಲಾ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.