ನಡೆದಾಡುವ ದೇವರು, ಆಧ್ಯಾತ್ಮದ ಚಿಲುಮೆಯಾಗಿರುವ ಸಿದ್ದೇಶ್ವರ ಶ್ರೀಗಳು ಅಗಲಿ ಇಂದಿಗೆ ವರ್ಷ ಆಗಿರುವುದನ್ನು ಯಾರಿಂದಲೂ ನಂಬಲು ಆಗುತ್ತಿಲ್ಲ. ಸಿದ್ದೇಶ್ವರ ಸ್ವಾಮೀಜಿಗಳು ಭೌತಿಕವಾಗಿ ನಮ್ಮಿಂದ ಅಗಲಿದ್ರೂ ಸಹ ಕೋಟಿ ಕೋಟಿ ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂಬುದು ಎಲ್ಲರ ಅಂಬೋಣ. ಬಯಲಲ್ಲೇ ಬಂದು ಬಯಲಾಗಿ ಹೋದ ಸ್ವಾಮೀಜಿಗಳು ಕೊಟ್ಟಿರುವ ಸಂದೇಶಗಳು ಇಡಿ ಜಗತ್ತಿಗೆ ಮಾದರಿಯಾಗಿವೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಜ.02): ನಡೆದಾಡುವ ದೇವರು ವಿಶ್ವಕಂಡ ಶತಮಾನದ ಸಂತ ಶ್ರೀ ಸಿದ್ದೇಶ್ವರ ಶ್ರೀಗಳು ನಮ್ಮನ್ನಗಲಿ ಇಂದಿಗೆ ಒಂದು ವರ್ಷವಾಯಿತು. ಈ ಹಿನ್ನೆಲೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಗುರುನಮನ ಕಾರ್ಯಕ್ರಮ ನಡೆಸಲಾಯಿತು. ಕಳೆದ 11ದಿನಗಳಿಂದ ನಿತ್ಯ ಒಂದೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇಂದು(ಮಂಗಳವಾರ) ಕೊನೆಯ ದಿನದ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ನಡೆಯಿತು. ಸಿದ್ದೇಶ್ವರ ಶ್ರೀಗಳಿಗೆ ಹೂಗಳು ಪ್ರಿಯವಾಗಿದ್ದರಿಂದ ಪುಷ್ಪ ನಮನ ಸಲ್ಲಿಸಲಾಯಿತು. ಸಿಎಂ ಸಿದ್ರಾಮಯ್ಯ ಸೇರಿದಂತೆ ಅನೇಕ ರಾಜಕೀಯ ನಾಯಕರು ಹಾಗೂ ನೂರಾರು ಮಠಾಧಿಶರು ಭಾಗವಹಿಸಿದ್ರು.
ಲಕ್ಷ-ಲಕ್ಷ ಭಕ್ತರಿಂದ ಪುಷ್ಪ ನಮನ..!
ಶತಮಾನಕ ಕಂಡ ಸಂತ ಎನಿಸಿಕೊಂಡಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷ ಕಳೆಯಿತು. ಈ ಹಿನ್ನೆಲೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿಂದು ಗುರು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 8 ಗಂಟೆಗೆ ಸಿದ್ದೇಶ್ವರ ಸ್ವಾಮೀಜಿಗಳ ಗುರುಗಳಾದ ವೇದಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರಣವ ಮಂಟಪಕ್ಕೆ ಪೂಜೆ ಸಲ್ಲಿಸಲಾಯಿತು. ಆಶ್ರಮದ ಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಸ್ವಾಮೀಜಿ ನೇತ್ರತ್ವದಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಬಳಿಕ ಆಶ್ರಮಕ್ಕೆ ಬಂದಿದ್ದ ಲಕ್ಷಾಂತರ ಭಕ್ತರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ರು.
ಬಿಸಿಲಿಗೆ ಹೆಸರುವಾಸಿಯಾಗಿದ್ದ ಈ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಚಳಿ!
ಶ್ರೀಗಳ ಸರಳತೆ ಕೊಂಡಾಡಿದ ಸುತ್ತೂರು ಶ್ರೀ..!
ಸರತಿ ಸಾಲಿನಲ್ಲಿ ಬಂದ ಭಕ್ತರು ಜ್ಞಾನಯೋಗಿಯ ಆಶೀರ್ವಾದಕ್ಕೆ ಪಾತ್ರರಾದ್ರು. ನಿನ್ನೆಯಷ್ಟೆ ದೀಪ ನಮನ ಕಾರ್ಯಕ್ರಮ ಮಾಡಿ ಇಡಿ ಆಶ್ರಮದ ತುಂಬೆಲ್ಲ ದೀಪಾಲಂಕಾರ ಕಂಗೊಳಿಸುತ್ತಿತ್ತು. ಇನ್ನು ಶ್ರೀಗಳ ಕುರಿತಾಗಿ ಮಾತನಾಡಿದ ಸುತ್ತೂರು ಶ್ರೀಗಳು ಸಿದ್ದೇಶ್ವರ ಶ್ರೀಗಳ ಸಜ್ಜನಿಕೆ ಹಾಗೂ ಅವರ ಜ್ಞಾನಭಂಡಾರದ ಬಗ್ಗೆ ಕೊಂಡಾಡಿದರು.
ಜ್ಞಾನಯೋಗಿಗೆ ಸಿಎಂ ಪುಷ್ಪ ನಮನ..!
ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಸಿದ್ರಾಮಯ್ಯ ಹಾಗೂ ಹಲವು ಸಚಿವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಬಳಿಕ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಸಿದ್ರಾಮಯ್ಯನವರು ಶ್ರೀಗಳ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡ್ರು. ನಾವೆಲ್ಲ ಬಸವಾದಿ ಶರಣರ ಅನುಯಾಯಿಗಳಾಗಿದ್ದೇವೆ. ಅದೇ ರೀತಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಸಹ ಅದೇ ಹಾದಿಯಲ್ಲಿ ನಡೆದವರು. ಜಾತಿ, ಧರ್ಮದ ಎಲ್ಲೆಯನ್ನು ಮೀರಿ ತಮ್ಮ ಆಧ್ಯಾತ್ಮದ ಮೂಲಕ ಕೋಟಿ ಕೋಟಿ ಜನ್ರ ಮನಸ್ಸಿನಲ್ಲಿ ಆಶ್ವತವಾಗಿ ಉಳಿದಿದ್ದಾರೆ. ಕಳೆದ ವರ್ಷ ಶ್ರೀಗಳಿಗೆ ಅನಾರೋಗ್ಯ ಕಾಡಿದ್ದ ಸಮಯದಲ್ಲಿ ಬಂದು ಆರೋಗ್ಯ ವಿಚಾರಿಸಿದ್ದೆ, ಈ ಬಾರಿ ಸಿಎಂ ಆಗಿ ನಾನು ಕರ್ನಾಟಕ ಸರ್ಕಾರದ ಪರವಾಗಿ ಬಂದು ಗುರುವಿಗೆ ನಮನ ಸಲ್ಲಿಸುತ್ತಿದ್ದೇನೆ ಎಂದ್ರು.
ಜ್ಞಾನಯೋಗಾಶ್ರಮದಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ..!
ಇನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹ ಆಗಮಿಸಿ ಜ್ಞಾನಯೋಗಾಶ್ರಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜ್ಞಾನ ಭಂಡಾರ ಎಂಬ ಗ್ರಂಥಾಲಯವನ್ನು ಉದ್ಘಾಟಿಸಿದ್ರು. ಇದೇ ವೇಳೆ ಮಾತನಾಡಿದ ಅವರು ಶ್ರೀಗಳು ಅನಾರೋಗ್ಯಕ್ಕೀಡಾಗಿದ್ದ ವೇಳೆ ಪ್ರಧಾನಿ ಮೋದಿ ಅವರು ಫೋನ್ ನಲ್ಲಿ ಶ್ರೀಗಳೊಂದಿಗೆ ಮಾತನಾಡಿದ್ರು. ಇದೀಗ ಕಾರ್ಯಕ್ರಮಕ್ಕೆ ಬರಲು ಆಗದ್ದರಿಂದ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಸಿದ್ದೇಶ್ವರ ಸ್ವಾಮೀಜಿಗಳಿಗೆ ಗುರುನಮನ ಸಲ್ಲಿಸಿ ಕಳಿಸಿದ್ದ ಇಂಗ್ಲಿಷ್ ಸಂದೇಶವನ್ನು ತಾವೇ ಸ್ವತಹ ಓದಿದ್ರು.
ಶಕ್ತಿ ಯೋಜನೆ ಜಾರಿಯಾದ ಬಳಿಕ ಗಂಡಸರಿಗೆ ತೊಂದರೆ; ನಿಮಗೆ ಕೈಮುಗಿತಿನಿ ಮನೆಯಲ್ಲಿ ಹೇಳಿ ಹೋಗ್ರಿ ಎಂದ ಅಶೋಕ್ ಪಟ್ಟಣ್
11 ದಿನಗಳ ಗೋಷ್ಠಿಗೆ ಇಂದು ತೆರೆ; ಶ್ರೀಗಳ ನೀರಾವರಿ ಕನಸು ನೆನೆದ ಎಂಬಿಪಿ..!
ಕಳೆದ 11ದಿನಗಳಿಂದ ಆಶ್ರಮದಲ್ಲಿ ನಿತ್ಯ ಸಾಯಂಕಾಲ ಒಂದೊಂದು ಗೋಷ್ಠಿಗಳನ್ನುನಡೆಸುವ ಮೂಲಕ ಶ್ರೀಗಳಿಗೆ ಪ್ರಿಯವಾದ ವಿಷಯಗಳ ಬಗ್ಗೆ ಸಾಹಿತಿಗಳು, ರಾಜಕಾರಣಿಗಳು ಸೇರಿದಂತೆ ಮುಂತಾದವರಿಂದ ಗೋಷ್ಠಿಗಳನ್ನು ನಡೆಸಲಾಗಿತ್ತು. ನಿನ್ನೆ ದೀಪೋತ್ಸವ ಹಾಗೂ ಇಂದು ಪುಷ್ಪ ನಮನ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಲಾಯಿತು. ಶತಮಾನದ ಸಂತನಿಗೆ ಗುರುನಮನ ಸಲ್ಲಿಸಲು ಕರ್ನಾಟಕದ ಮೂಲೆ ಮೂಲೆಯಿಂದ ಮಾತ್ರವಲ್ಲದೆ ನೆರಯ ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ರು. ವೇದಿಕೆ ಮೇಲೆ ಮಾತನಾಡಿದ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಈ ನೆಲಕ್ಕೆ ಒಂದು ಬೊಗಸೆ ನೀರು ಕೊಟ್ರೆ ಸಾಕು ಇದು ಕ್ಯಾಲಿಫೋರ್ನಿಯಾವನ್ನು ಮೀರಿಸುತ್ತದೆ ಎಂದು ಶ್ರೀಗಳು ಯಾವಾಗಲೂ ಹೇಳ್ತಿದ್ರು. ಹಾಗಾಗಿ ನಾನು ನೀರಾವರಿ ಸಚಿವನಾಗಿದ್ದ ವೇಳೆ ಈ ಕೆಲಸ ಮಾಡುವ ಮೂಲಕ ಶ್ರೀಗಳ ಮನವನ್ನು ಗೆದ್ದಿದ್ದೇನೆ. ಅವರ ಆಶೀರ್ವಾದ ನನ್ನ ಮೇಲಿದೆ ಎಂದು ಶ್ರೀಗಳನ್ನು ನೆನೆದ್ರು.
ಜಗತ್ತಿಗೆ ಮಾದರಿಯಾದ ಶ್ರೀಗಳ ಸರಳತೆ..!
ನಡೆದಾಡುವ ದೇವರು, ಆಧ್ಯಾತ್ಮದ ಚಿಲುಮೆಯಾಗಿರುವ ಸಿದ್ದೇಶ್ವರ ಶ್ರೀಗಳು ಅಗಲಿ ಇಂದಿಗೆ ವರ್ಷ ಆಗಿರುವುದನ್ನು ಯಾರಿಂದಲೂ ನಂಬಲು ಆಗುತ್ತಿಲ್ಲ. ಸಿದ್ದೇಶ್ವರ ಸ್ವಾಮೀಜಿಗಳು ಭೌತಿಕವಾಗಿ ನಮ್ಮಿಂದ ಅಗಲಿದ್ರೂ ಸಹ ಕೋಟಿ ಕೋಟಿ ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂಬುದು ಎಲ್ಲರ ಅಂಬೋಣ. ಬಯಲಲ್ಲೇ ಬಂದು ಬಯಲಾಗಿ ಹೋದ ಸ್ವಾಮೀಜಿಗಳು ಕೊಟ್ಟಿರುವ ಸಂದೇಶಗಳು ಇಡಿ ಜಗತ್ತಿಗೆ ಮಾದರಿಯಾಗಿವೆ.