ಗ್ಯಾರಂಟಿ ಯೋಜನೆಗಳ ಒತ್ತಡದ ಮಧ್ಯೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವುದಾಗಿ ಘೋಷಿಸುವುದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದ್ದಾರೆ.
ದಾವಣಗೆರೆ (ಜು.9) : ಗ್ಯಾರಂಟಿ ಯೋಜನೆಗಳ ಒತ್ತಡದ ಮಧ್ಯೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವುದಾಗಿ ಘೋಷಿಸುವುದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದ್ದಾರೆ.
ಇದು ಸಮಸ್ತ ಕನ್ನಡಿಗರ ವ್ಯಾಕುಲತೆಗೆ ಕಾರಣವಾಗಿದೆ. ಹಿಂದೆ 2016ರಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದಾಗ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಘೋಷಣೆ ಮಾಡಿ, 20 ಕೋಟಿ ರು. ಮೀಸಲಿಟ್ಟು, ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಗಲೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್ಸೆಸ್ ಮಲ್ಲಿಕಾರ್ಜುನ ಅಂದು ಸಮ್ಮೇಳನದ ಘೋಷಣೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗಲೂ ಎಸ್ಸೆಸ್ ಮಲ್ಲಿಕಾರ್ಜುನ ಸಚಿವರಾಗಿ ಬಜೆಟ್‌ನಲ್ಲಿ ಬಿಟ್ಟು ಹೋಗಿರುವ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸುವ ಘೋಷಣೆ ಮಾಡಿಸಿ, ಅದಕ್ಕೆ ಅಗತ್ಯವಾದ ಅನುದಾನ ಮೀಸಲಿಡಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Karnataka budget 2023: ಕಾಫಿ ನಾಡಿಗೆ ಕೈ ಕೊಟ್ಟರಾಜ್ಯ ಸರ್ಕಾರ: ಜಿಲ್ಲೆಗೆ ಬಿಗ್ ಝೀರೋ ಶಾಕ್
ವಿಶ್ವ ಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಮುಖ್ಯಮಂತ್ರಿಯವರ ಮೇಲೆ ಸಚಿವರು, ಶಾಸಕರು ಒತ್ತಡ ಹೇರಬೇಕು. ನಾಡು, ನುಡಿ ಬಗ್ಗೆ ಅಪಾರ ಗೌರವ ಹೊಂದಿರುವ ಸಿಎಂ ಸಿದ್ದರಾಮಯ್ಯ ಹಿಂದೆ ದಿವಂಗತ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು ಎಂದರು.
ಜಿಲ್ಲೆಯ ಕಸಾಪ, ಸಾಹಿತಿಗಳು, ವಿದ್ವಾಂಸರು, ಕನ್ನಡ ಪರ ಸಂಘಟನೆಗಳು, ಕನ್ನಡದ ಮನಸ್ಸುಗಳ ಮನವಿಯಂತೆ ಸಿಎಂ ಸಿದ್ದರಾಮಯ್ಯ ವಿಶ್ವ ಕನ್ನಡ ಸಮ್ಮೇಳನ ಘೋಷಿಸಲಿ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲೆಯ ಶಾಸಕರು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿ, ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲು ಕ್ರಮ ಕೈಗೊಳ್ಳಬೇಕು.
ಬಿ.ವಾಮದೇವಪ್ಪ , ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ