Bengaluru Flood: ಬೆಂಗಳೂರು ಪ್ರವಾಹಕ್ಕೆ ಕಾಂಗ್ರೆಸ್‌ ಕಾರಣ: ಸಿಎಂ ಬೊಮ್ಮಾಯಿ

By Kannadaprabha NewsFirst Published Sep 7, 2022, 5:00 AM IST
Highlights

ಇಡೀ ಬೆಂಗಳೂರು ಮುಳುಗಿಲ್ಲ, 8ರ ಪೈಕಿ 2 ವಲಯ ಮಾತ್ರ ಮುಳುಗಿವೆ, ಇಡೀ ಊರು ಮುಳುಗಿದೆ ಎಂದು ಬಿಂಬಿಸುವುದು ತಪ್ಪು: ಸಿಎಂ 

ಬೆಂಗಳೂರು/ಮೈಸೂರು(ಸೆ.07):  ‘ಈ ಹಿಂದೆ ಇದ್ದ ಕಾಂಗ್ರೆಸ್‌ ಸರ್ಕಾರದ ಯೋಜನಾ ರಹಿತ ಮತ್ತು ದುರಾಡಳಿತದ ಫಲವಾಗಿ ಬೆಂಗಳೂರಿನ ಕೆಲವು ಬಡಾವಣೆಗಳು ಜಲಾವೃತಗೊಳ್ಳುವ ಸ್ಥಿತಿ ಎದುರಿಸಬೇಕಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪಾದಿಸಿದ್ದಾರೆ. ಮಳೆಯಿಂದ ಇಡೀ ಬೆಂಗಳೂರು ಪೂರ್ತಿ ಮುಳುಗಡೆಯಾಗಿಲ್ಲ. ಆ ರೀತಿ ಬಿಂಬಿಸುವಂಥ ಕೆಲಸ ಆಗುತ್ತಿದೆ ಅಷ್ಟೇ. ಬೆಂಗಳೂರಿನ ಎಂಟು ವಲಯಗಳ ಪೈಕಿ ಕೇವಲ ಎರಡು ವಲಯಗಳಲ್ಲಿನ ಕೆಲವು ಭಾಗಗಳಲ್ಲಿ ಮಾತ್ರ ಸಮಸ್ಯೆ ಆಗಿದೆ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ಮಂಗಳವಾರ ಬೆಂಗಳೂರು ಮತ್ತು ಮೈಸೂರಿನಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯಾದ್ಯಂತ ತೀವ್ರ ಮಳೆಯಾಗುತ್ತಿದ್ದು, ವಿಶೇಷವಾಗಿ ಬೆಂಗಳೂರಲ್ಲಿ ಕಳೆದ 90 ವರ್ಷಗಳಲ್ಲಿ ಆಗದಷ್ಟುಅತಿವೃಷ್ಟಿಯಾಗಿದೆ. ಸವಾಲಿನ ಪರಿಸ್ಥಿತಿಯಲ್ಲಿಯೂ ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

Bengaluru Floods: ಕೆರೆಗಳ ಕೋಡಿ; ಐಟಿ ಸಿಟಿಗೆ ಕಣ್ಣೀರ ಕೋಡಿ!

ಕಾಂಗ್ರೆಸ್‌ ಕಾಲದಲ್ಲಿ ಎಗ್ಗುಇಲ್ಲದ ನಿರ್ಮಾಣ:

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಗ್ಗಿಲ್ಲದೆ ಕೆರೆಗಳಲ್ಲಿ, ಕೆರೆ ಬಂಡ್‌ ಮತ್ತು ಬಫರ್‌ ವಲಯಗಳಲ್ಲಿ ಅನುಮತಿಗಳನ್ನು ನೀಡಲಾಗಿದೆ. ಈ ಪರಿಸ್ಥಿತಿಗೆ ಕಾಂಗ್ರೆಸ್‌ ಕಾರಣ. ಕೆರೆಗಳ ನಿರ್ವಹಣೆಯ ಬಗ್ಗೆ ಅವರು ಯೋಚಿಸಿಯೂ ಇಲ್ಲ. ಇದನ್ನು ನಾನು ಸವಾಲಾಗಿ ಸ್ವೀಕರಿಸಿದ್ದು, ಸ್ಥಿತಿ ಸುಧಾರಿಸಲು 1500 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಪುನಃ 300 ಕೋಟಿ ರು. ಒತ್ತುವರಿ ತೆರವುಗೊಳಿಸಲು ನೀಡಲಾಗಿದೆ. ಮುಂದಿನ ದಿನದಲ್ಲಿ ನೀರಿನ ಹರಿವೆಗೆ ಯಾವುದೇ ಸಮಸ್ಯೆ ಇಲ್ಲದಂತೆ ವ್ಯವಸ್ಥೆ ಮಾಡಲಾಗುವುದು. ಒತ್ತುವರಿಗೂ ಅವಕಾಶವಿಲ್ಲದಂತೆ ಎಚ್ಚರ ವಹಿಸಲಾಗುವುದು’ ಎಂದರು.

‘ಮಳೆಗಾಲದಲ್ಲಿ ಪ್ರತಿಪಕ್ಷದವರು ರಾಜಕಾರಣ ಮಾಡುತ್ತಿದ್ದಾರೆ. ಇದು ನಿಜಕ್ಕೂ ದುರ್ದೈವ. ಎಲ್ಲಾ ರಾಜಕಾರಣ ಬಿಟ್ಟು ನಮಗೆ ಒಗ್ಗಟ್ಟಾಗಿ ಕೆಲಸ ಮಾಡೋಣ’ ಎಂದು ಇದೇ ವೇಳೆ ಮನವಿ ಮಾಡಿದರು.

Heavy Rain : ಅರ್ಧ ಶತಮಾನದ ದಾಖಲೆ ಮಳೆಗೆ ಕಂಗೆಟ್ಟ ಬೆಂಗಳೂರು

2 ವಲಯದಲ್ಲಿ ವಲಯ ಮಾತ್ರ ಸಮಸ್ಯೆ:

‘ಸತತವಾಗಿ ಮಳೆಯಾಗುತ್ತಿರುವುದರಿಂದ ಎಲ್ಲಾ ಕೆರೆಗಳು ತುಂಬಿದ್ದು, ಕೆಲವು ಕೋಡಿ ಹರಿದಿದೆ. ಕೆಲವು ಕೆರೆಗಳು ಬಿರುಕು ಬಿಟ್ಟಿವೆ. ಇಡೀ ಬೆಂಗಳೂರು ಜಲಾವೃತವಾಗಿದೆ ಎಂದು ಬಿಂಬಿಸಲಾಗುತ್ತಿದೆ. ಎರಡು ವಲಯಗಳು, ಅದರಲ್ಲಿಯೂ ಮಹದೇವಪುರ ವಲಯ ಸಮಸ್ಯೆಗೊಳಗಾಗಿದೆ. ಅದು ಸಹ ಒತ್ತುವರಿಯಿಂದ ಕಟ್ಟಿರುವುದಕ್ಕೆ ಸಮಸ್ಯೆ ಆಗಿದೆ. 69 ಕೆರೆಗಳು ಈ ಪ್ರದೇಶದಲ್ಲಿದ್ದು, ಎಲ್ಲವೂ ಕೋಡಿ ಹರಿದಿವೆ. ಎಲ್ಲಾ ಕಟ್ಟಡಗಳು ಕೆಳಮಟ್ಟದಲ್ಲಿವೆ ಮತ್ತು ಒತ್ತುವರಿ ಸಹ ಆಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ತಿಳಿಸಿದರು.

‘ಅಧಿಕಾರಿಗಳು, ಎಂಜಿನಿಯರ್‌ಗಳು, ಎಸ್‌ಡಿಆರ್‌ಎಫ್‌ ತಂಡದ ಸಿಬ್ಬಂದಿ 24/7 ಕೆಲಸ ಮಾಡುತ್ತಿದ್ದಾರೆ. ಸಾಕಷ್ಟುಒತ್ತುವರಿಯನ್ನು ನಾವು ತೆರವುಗೊಳಿಸಿದ್ದೇವೆ. ತೆರವುಗೊಳಿಸುವ ಕಾರ್ಯವನ್ನು ಮುಂದುವರಿಸಲಾಗುವುದು. ಕೆರೆಗಳ ನಿರ್ವಹಣೆಗೆ ಸ್ಲೂಯಿಸ್‌ ಗೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡುವಂತೆ ಸೂಚಿಸಲಾಗಿದೆ. ಕರೆ ಬಂದ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ತಿಳಿಸಲಾಗಿದೆ. ನೀರು ತೆಗೆಯುವ ಕೆಲಸ ಜಾರಿಯಲ್ಲಿದೆ. ಒಂದೆರಡು ಸ್ಥಳಗಳಲ್ಲಿ ಸಮಸ್ಯೆ ಬಿಟ್ಟರೆ ಉಳಿದೆಡೆ ನೀರು ಹೊರತೆಗೆಯಲಾಗಿದೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕೆಲಸ ವಿಳಂಬವಾಗುತ್ತಿದೆ’ ಎಂದರು.
 

click me!