ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಎಂದು ಹಿರಿಯರು ಹೇಳ್ತಾರೆ. ಆದ್ರೆ ಈ ಆಸ್ಪತ್ರೆಯಲ್ಲಿ ಪರವಾನಗಿ ನವೀಕರಣ ಸಮಸ್ಯೆಯಿಂದಾಗಿ ರಕ್ತ ನಿಧಿ ಕೇಂದ್ರವೇ ಸ್ಥಗಿತಗೊಂಡಿದ್ದು, ರೋಗಿಗಳು ರಕ್ತ ಪಡೆಯಲು ಪರದಾಡುವಂತಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಮೇ.15): ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಎಂದು ಹಿರಿಯರು ಹೇಳ್ತಾರೆ. ಆದ್ರೆ ಈ ಆಸ್ಪತ್ರೆಯಲ್ಲಿ ಪರವಾನಗಿ ನವೀಕರಣ ಸಮಸ್ಯೆಯಿಂದಾಗಿ ರಕ್ತ ನಿಧಿ ಕೇಂದ್ರವೇ ಸ್ಥಗಿತಗೊಂಡಿದ್ದು, ರೋಗಿಗಳು ರಕ್ತ ಪಡೆಯಲು ಪರದಾಡುವಂತಾಗಿದೆ. ಯಾವುದೇ ರೋಗಿಗಳು ಇಲ್ಲದೇ ಖಾಲಿ ಖಾಲಿ ಹೊಡೆಯುತ್ತಿರುವ ರಕ್ತ ನಿಧಿ ಕೇಂದ್ರ. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಈ ಕೇಂದ್ರ ಕಳೆದ ಎರಡು ವಾರಗಳಿಂದ ಸ್ಥಗಿತಗೊಂಡಿದ್ದು ಆಸ್ಪತ್ರೆಗೆ ದಾಖಲಾಗ್ತಿರೋ ರೋಗಿಗಳಿಗೆ ಸಂಕಷ್ಟ ತಂದೊದಗಿದೆ. ನಿತ್ಯ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾವಿರಾರು ರೋಗಿಗಳು ಬಂದು ಅಡ್ಮಿಟ್ ಆಗ್ತಾರೆ.
undefined
ಅದ್ರಲ್ಲಂತು ಬಹುತೇಕ ಆಕ್ಸಿಡೆಂಟ್ ಆಗಿರುವ ರೋಗಿಗಳೇ ಹೆಚ್ಚು. ಅಂತವರ ಜೀವ ಉಳಿವಿಗಾಗಿ ರಕ್ತ ಬಹುಮುಖ್ಯ ಪಾತ್ರ ವಹಿಸುತ್ತದೆ. ಖಾಸಗಿ ಆಸ್ಪತ್ರೆ ಅಥವಾ ಖಾಸಗಿ ರಕ್ತ ನಿಧಿ ಕೇಂದ್ರಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಹಣ ನೀಡಿ ರಕ್ತವನ್ನು ಖರೀದಿಸುವ ಶಕ್ತಿ ಬಡ ರೋಗಿಗಳಲ್ಲಿ ಇರುವುದಿಲ್ಲ. ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರದಲ್ಲಿ ಶುಲ್ಕ ಕಡಿಮೆ ಎಂದು ಅನೇಕ ರೋಗಿಗಳು ಇಲ್ಲೇ ರಕ್ತ ಸಂಗ್ರಹ ಮಾಡಿಕೊಳ್ತಾರೆ. ಅಗತ್ಯ ಸೌಲಭ್ಯ,ನಿರ್ವಹಣೆ ಕೊರತೆ ಕಾರಣಕ್ಕೆ ಕೇಂದ್ರದ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕಾರ್ಯ ಚಟುವಟಿಕೆ ರದ್ದುಗೊಳಿಸಲು ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲದೇ ಈ ಕೇಂದ್ರದ ಪರವಾನಗಿ ನವೀಕರಣದ ಸಮಸ್ಯೆ ಕೂಡ ಎದುರಾಗಿದ್ದು ಇದ್ರಿಂದಾಗಿ ರೋಗಿಗಳು ಪರದಾಡುವಂತಾಗಿದೆ. ಅನೇಕ ರಕ್ತಹೀನ ರೋಗಿಗಳಿಗೆ ಸಾಕಷ್ಟು ಸಮಸ್ಯೆ ಆಗ್ತಿದೆ, ಇದಕ್ಕೆ ಕೂಡಲೇ ಪರಿಹಾರ ಒದಗಿಸಿ, ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ದ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯ ಹೋರಾಟಗಾರರು ಎಚ್ಚರಿಕೆ ನೀಡಿದರು. ಇನ್ನೂ ರಕ್ತ ನಿಧಿ ಕೇಂದ್ರ ಸ್ಥಗಿತ ಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಸರ್ಜನ್, ನಮ್ಮಲ್ಲಿ ಅಗತ್ಯವಾದ ಯಂತ್ರೋಪಕರಣಗಳು ಇಲ್ಲದಕಾರಣ ಕೇಂದ್ರ ಪರವಾನಗಿ ನವೀಕರಣ ವಿಳಂಬವಾಗಿದೆ.
Dharwad: ಅರಣ್ಯ ಇಲಾಖೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ!
ಈಗಾಗಲೇ ಇಲಾಖೆ ಸೂಚಿಸಿರುವ ನ್ಯೂನ್ಯತೆಗಳನ್ನು ಸರಪಡಿಸಿ, ಪತ್ರ ಬರೆಯಲಾಗಿದೆ. ಇದೇ ತಿಂಗಳು ಮೇ ೨೧ಕ್ಕೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲಿದ್ದು, ಶೀಘ್ರವೇ ಪರವಾನಗಿ ಪಡೆದು ಮೊದಲಿನಂತೆ ರಕ್ತ ನಿಧಿ ಕೇಂದ್ರ ನಡೆಸುತ್ತೇವೆ ಎಂದು ಭರವಸೆ ನೀಡಿದರು. ಒಟ್ಟಾರೆಯಾಗಿ ಜಿಲ್ಲಾ ಆಸ್ಪತ್ರೆಯಂತಹ ದೊಡ್ಡ ಆಸ್ಪತ್ರೆಯಲ್ಲಿಯೇ ರಕ್ತ ನಿಧಿ ಕೇಂದ್ರ ಸ್ಥಗಿತಗೊಂಡಿದ್ದು, ರಕ್ತ ಹೀನ ಸಮಸ್ಯೆಯಿಂದ ಬಳಲ್ತಿರೋ ರೋಗಿಗಳಿಗೆ ಸಾಕಷ್ಟು ತೊಂದರೆಯಾಗ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ರೋಗಿಗಳಿಗೆ ಆಗ್ತಿರುವ ಸಮಸ್ಯೆಗೆ ಜಿಲ್ಲಾ ಆರೋಗ್ಯ ಇಲಾಖೆ ಇತಿಶ್ರೀ ಹಾಡಬೇಕಿದೆ.