ದಾಖಲೆ ಬೆಲೆಗೆ ಮಾರಾಟವಾಗುತ್ತಿರುವ ಒಣ ಮೆಣಸಿನಕಾಯಿ| ವಾಹನ ತಡೆಯಲು ಹೋದ ರೈತನ ಮೇಲೆಯೇ ಹಲ್ಲೆ ಮಾಡಿದ ಕಳ್ಳರು| ಈರುಳ್ಳಿ ಹಾಗೂ ಮೆಣಸಿನಕಾಯಿ ಎರಡನ್ನೂ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿಯೇ ಕಳವು ಮಾಡುತ್ತಿರುವುದು ವಿಶೇಷ|
ಗದಗ(ಜ.12): ಈರುಳ್ಳಿಯ ಬಳಿಕ ಇದೀಗ ಕಳ್ಳರ ಕಣ್ಣು ಒಣಮೆಣಸಿನಕಾಯಿಯ ಮೇಲೆ ಬಿದ್ದಿದೆ. ಉಳ್ಳಾಗಡ್ಡಿಯ ನಂತರ ಕಳೆದ ಕೆಲ ದಿನಗಳಿಂದ ಬ್ಯಾಡಗಿ ಮೆಣಸಿನಕಾಯಿ ಬೆಲೆ ಗಗನಕ್ಕೇರಿದ್ದು, ಕಳ್ಳರು ರಾತ್ರೋರಾತ್ರಿ ವಾಹನ ತಂದು ರೈತರ ಹೊಲದಲ್ಲಿನ ಮೆಣಸನ್ನು ತುಂಬಿಕೊಂಡು ಹೋಗುತ್ತಿದ್ದಾರೆ.
ಹೌದು.. ಚಿನ್ನ, ನಗದು, ಬೈಕ್, ಕಾರು ಎಂದು ಅನೇಕ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು ಈದೀಗ ತಮ್ಮ ವರಸೆಯನ್ನು ಬದಲಾಯಿಸಿಕೊಂಡಿದ್ದು, ರೈತ ಸಾಲಸೋಲ ಮಾಡಿ, ಹಗಲಿರುಳು ಎನ್ನದೇ ಬೆವರು ಸುರಿಸಿ ಬೆಳೆದಿರುವ ಒಣಮೆಣಸಿನ ಕಾಯಿಯನ್ನು ಕಳ್ಳತನ ಮಾಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈರುಳ್ಳಿ ಹಾಗೂ ಮೆಣಸಿನಕಾಯಿ ಎರಡನ್ನೂ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿಯೇ ಕಳವು ಮಾಡುತ್ತಿರುವುದು ವಿಶೇಷ.
ತೋಟಗಂಟಿ ಗ್ರಾಮದಲ್ಲಿ ಕಳ್ಳತನ:
ಗದಗ ಜಿಲ್ಲೆಯ ರೋಣ ತಾಲೂಕಿನ ತೋಟಗಂಟಿ ಗ್ರಾಮದ ಕೃಷ್ಣಾ ಪಾಟೀಲ ಎಂಬುವವರ ಕಣದಲ್ಲಿ ಒಣ ಹಾಕಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಐದಕ್ಕೂ ಹೆಚ್ಚು ಕ್ವಿಂಟಾಲ್ ಮೆಣಸಿನಕಾಯಿಯನ್ನು ಗುರುವಾರ ತಡರಾತ್ರಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಟಾಟಾಎಸ್ ವಾಹನದಲ್ಲಿ ಬಂದಿದ್ದ 8 ಜನ ಕಳ್ಳರು ಮೆಣಸಿನಕಾಯಿ ಕಳ್ಳತನ ಮಾಡಿಕೊಂಡು ಹೋಗುವ ವೇಳೆ ತಡೆಯಲು ಹೋಗಿದ್ದ ರೈತನ ಮೇಲೆಯೂ ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳ ಹಲ್ಲೆಯಿಂದ ರೈತ ಕೃಷ್ಣಾ ಪಾಟೀಲ ಅವರ ಕೈಗೆ ಗಾಯವಾಗಿದೆ.
ನರೇಗಲ್ಲ ಠಾಣೆಯಲ್ಲಿ ಕೇಸ್:
ಕೃಷ್ಣಾ ಪಾಟೀಲ ಅವರ ಕಣದಲ್ಲಿ ಒಣ ಹಾಕಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಮೆಣಸಿನಕಾಯಿಯನ್ನು ಕಳ್ಳತನ ಮಾಡಿಕೊಂಡು ಹೋಗುವುದಲ್ಲದೇ ತಡೆಯಲು ಬಂದಿದ್ದ ರೈತನ ಮೇಲೆಯೂ ಹಲ್ಲೆ ಮಾಡಿದ್ದಾರೆ. ಈ ಕುರಿತು ನರೇಗಲ್ ಪೋಲಿಸ್ ಠಾಣೆಯಲ್ಲಿ ರೈತ ಪ್ರಕರಣ ದಾಖಲಿಸಿದ್ದು, ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಂಪರ್ ಬೆಲೆ:
ಒಣ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದೇ ತಡ ಕಳ್ಳರು ಜಮೀನಿನಲ್ಲಿ ಹಾಕಿದ ಒಣ ಮೆಣಸಿನಕಾಯಿ ಕಳ್ಳತನ ಮಾಡುತ್ತಿದ್ದಾರೆ. ಜಿಲ್ಲೆಯು ಕಳೆದ 5-6 ವರ್ಷಗಳಿಂದ ನಿರಂತರವಾಗಿ ಬರಗಾಲ ಪರಿಸ್ಥಿತಿ ಎದುರಿಸಿದೆ. ಈ ಬಾರಿ ಅತಿವೃಷ್ಟಿಯಲ್ಲಿಯೂ ಜಿಲ್ಲೆಯ ರೈತರು ಅಲ್ಪಸ್ವಲ್ಪ ಬೆಳೆಯನ್ನು ಬೆಳೆದಿದ್ದಾರೆ. ಕಳೆದ ತಿಂಗಳು ಈರುಳ್ಳಿಗೆ ಬಂಪರ್ ಬೆಲೆ ಬಂದಿದ್ದ ಸಂದರ್ಭದಲ್ಲಿ ಈರುಳ್ಳಿ ಕಳ್ಳತನವಾಗಿರುವ ಘಟನೆಗಳು ನಡೆದಿದ್ದವು. ಸಧ್ಯ ಒಂದು ಕ್ವಿಂಟಾಲ್‌ಗೆ 30 ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವ ಒಣ ಮೆಣಸಿನಕಾಯಿ ದಾಖಲೆ ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಕಳ್ಳರು ರಾತ್ರೋರಾತ್ರಿ ರೈತರು ಬೆಳೆದ ಒಣ ಮೆಣಸಿನಕಾಯಿ ಕಳ್ಳತನ ಮಾಡಲು ಮುಂದಾಗಿದ್ದಾರೆ. ಇದರಿಂದ ಅನ್ನದಾತ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಅನಾವೃಷ್ಟಿ ಹಾಗೂ ಅತಿವೃಷ್ಟಿಯ ಮಧ್ಯೆಯೇ ಒಣ ಮೆಣಸಿನಕಾಯಿ ಕೈ ಹಿಡದಿದೆ. ಆದರೆ, ಇನ್ನೇನು ಬೆಳೆ ಕೈಗೆ ಬಂದಿದೆ ಎನ್ನುವಷ್ಟರಲ್ಲಿ ಕಳ್ಳರ ಪಾಲಾಗಿ ಹೋಗಿದೆ. ನಾವು ಬೆಳೆದ ಒಣಮೆಣಸಿನ ಕಾಯಿಯನ್ನು ನಮ್ಮ ಕಣದಲ್ಲಿ ಒಣಹಾಕಿದ್ದೆವು. ಆದರೆ, ಗುರುವಾರ ರಾತ್ರಿ ವೇಳೆ ಕಳ್ಳರು ನನ್ನ ಮೇಲೆ ಹಲ್ಲೆ ಮಾಡಿ ಟಾಟಾ ಎಸ್ ಗಾಡಿಯಲ್ಲಿ ಬೆಳೆಯನ್ನು ಕದ್ದೊಯ್ದಿದ್ದಾರೆ. ಸಂಬಂಧಪಟ್ಟಅಧಿಕಾರಿಗಳು ಕಳ್ಳರಿಗೆ ಕಡಿವಾಣ ಹಾಕಬೇಕು. ನಮಗೆ ನ್ಯಾಯ ಒದಗಿಸಬೇಕು ಎಂದು ಒಣಮೆಣಸಿನಕಾಯಿ ಬೆಳೆದ ರೈತ ಕೃಷ್ಣಾ ಪಾಟೀಲ ಅವರು ಹೇಳಿದ್ದಾರೆ.