ಬೆಂಗಳೂರು: ಜೀರೋ ಟ್ರಾಫಿಕ್ಕಲ್ಲಿ ಬಂದರೂ ಬೆಡ್‌ ಇಲ್ಲದೆ ನಿಮ್ಹಾನ್ಸ್‌ನಲ್ಲಿ ಮಗು ಸಾವು..!

By Kannadaprabha NewsFirst Published Nov 30, 2023, 4:17 AM IST
Highlights

ಆಸ್ಪತ್ರೆಗೆ ತಲುಪಿದ ಬಳಿಕ ಹಾಸಿಗೆ ಕೊರತೆ ಕಾರಣ ನೀಡಿ ಚಿಕಿತ್ಸೆ ನೀಡಲು ವೈದ್ಯರು ವಿಳಂಬ ಮಾಡಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ದೂರಿದ್ದಾರೆ. ಇನ್ನು ಈ ಘಟನೆ ಬಗ್ಗೆ ನಿಮ್ಹಾನ್ಸ್‌ ಆಸ್ಪತ್ರೆ ಆಡಳಿತ ಮಂಡಳಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಬೆಂಗಳೂರು(ನ.30):  ತುರ್ತು ಚಿಕಿತ್ಸೆಗಾಗಿ ಹಾಸನದಿಂದ ಜೀರೋ ಟ್ರಾಫಿಕ್ ವ್ಯವಸ್ಥೆ ಮೂಲಕ ಆಗಮಿಸಿದ್ದ ಒಂದು ವರ್ಷದ ಮಗುವಿಗೆ ನಿಮ್ಹಾನ್ಸ್ ಆಸ್ಪತ್ರೆ ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಮಗು ಮೃತಪಟ್ಟಿರುವ ಆರೋಪ ಕೇಳಿಬಂದಿದೆ.

ಚಿಕ್ಕಮಗಳೂರಿನ ಬಸವನಗುಡಿ ನಿವಾಸಿಗಳಾದ ವೆಂಕಟೇಶ್ ಹಾಗೂ ಜ್ಯೋತಿ ದಂಪತಿಯ ಒಂದು ವರ್ಷದ ಮಗು ಹಾಸನದ ಮನೆಯೊಂದರಲ್ಲಿ 10 ಅಡಿ ಮೇಲಿನಿಂದ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು. ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ನಿಮ್ಹಾನ್ಸ್ ಆಸ್ಪತ್ರೆಗೆ ಕೊಂಡೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು.

Latest Videos

ತೆರೆದ ಹೃದಯ ಚಿಕಿತ್ಸೆ; 3 ದಿನದ ಬೇಬಿ ಜೀರೋ ಟ್ರಾಫಿಕ್‌ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಶಿಫ್ಟ್!

ಮಗುವಿಗಾಗಿ ಹಾಸನದಿಂದ ಬೆಂಗಳೂರಿನವರೆಗೆ 224 ಕಿ.ಮೀ. ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಆ್ಯಂಬುಲೆನ್ಸ್‌ ಚಾಲಕ ಹಾಸನದಿಂದ 224 ಕಿ.ಮೀ. ದೂರವನ್ನು 1.40 ಗಂಟೆಯಲ್ಲಿ ಕ್ರಮಿಸಿ ನಿಮ್ಹಾನ್ಸ್‌ ತಲುಪಿಸಿದ್ದರು. ಹಾಸನದ ವೈದ್ಯರು ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆ ಮಾಡಿ ತುರ್ತು ಚಿಕಿತ್ಸಾ ಅಗತ್ಯಗಳ ಬಗ್ಗೆ ತಿಳಿಸಿದ್ದರು.

ಆದರೆ, ಆಸ್ಪತ್ರೆಗೆ ತಲುಪಿದ ಬಳಿಕ ಹಾಸಿಗೆ ಕೊರತೆ ಕಾರಣ ನೀಡಿ ಚಿಕಿತ್ಸೆ ನೀಡಲು ವೈದ್ಯರು ವಿಳಂಬ ಮಾಡಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ದೂರಿದ್ದಾರೆ. ಇನ್ನು ಈ ಘಟನೆ ಬಗ್ಗೆ ನಿಮ್ಹಾನ್ಸ್‌ ಆಸ್ಪತ್ರೆ ಆಡಳಿತ ಮಂಡಳಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಹೆಚ್ಚಿರುತ್ತದೆ. ವೈದ್ಯರು ಒತ್ತಡದ ನಡುವೆಯೂ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ಈ ಮಗುವಿನ ಸಾವಿನ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಹಿತಿ ಸಂಗ್ರಹಿಸಿ ಪ್ರತಿಕ್ರಿಯಿಸುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ತಿಳಿಸಿದ್ದಾರೆ.

click me!