
ಚಿಕ್ಕಮಗಳೂರು: ರೌಡಿಶೀಟರ್‌ಗಳೊಂದಿಗೆ ನಡುರಾತ್ರಿ ಪಾರ್ಟಿ ಮಾಡಿದ ಆರೋಪದ ಮೇರೆಗೆ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯ ಎಎಸ್ಐ ವೀರೇಂದ್ರರನ್ನು ಅಮಾನತು ಮಾಡಲಾಗಿದೆ. ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಅವರು ಅಮಾನತು ಮಾಡಿ ಆದೇಶ ನೀಡಿದ್ದಾರೆ.
ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಘಟನೆ ನಡೆದಿತ್ತು. ಈ ಸಂಬಂಧ ಸ್ಥಳೀಯ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಬಾರ್ ಎದುರು ಪ್ರತಿಘಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಎಸ್‌ಪಿ ಅವರು ಎಎಸ್‌ಐ ವೀರೇಂದ್ರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನು, ಇಡೀ ರಾತ್ರಿ ಬಾರ್ ನಲ್ಲಿ ಜೋರಾಗಿ ಹಾಡು ಹಾಕಿ ಪಾರ್ಟಿ ಮಾಡಿದ ಆರೋಪ ಕೇಳಿ ಬಂದಿದ್ದು, ಇದರಿಂದ ಬೇಸತ್ತ ಮಹಿಳೆಯರು ಬಾರ್ ಮುಂದೆ ರಾತ್ರೋರಾತ್ರಿ ಪ್ರತಿಭಟನೆ ನಡೆಸಿ, ಬಾರ್ ಬಂದ್ ಮಾಡುವಂತೆ ಸೇರಿದಂತೆ ಆಗ್ರಹಿಸಿದ್ದರು. ಬಾರ್ ನಲ್ಲಿ ಎಎಸ್ಐ ವೀರೇಂದ್ರ ಅವರು ಪಾರ್ಟಿ ಆಯೋಜನೆ ಮಾಡಿದ್ದರಂತೆ. ಅಲ್ಲದೇ, ಎಎಸ್‌ಐ ವಿರುದ್ಧ ನಿರಂತರವಾಗಿ ದೂರು ಕೇಳಿ ಬಂದ ಹಿನ್ನೆಲೆ ಅಮಾನತು ಮಾಡಿ ಆದೇಶ ನೀಡಲಾಗಿದೆ.
ಇದೇ ತಿಂಗಳ 15ರಂದು ಎಎಸ್‌ಐ ವೀರೇಂದ್ರ ಅವರು ಖಾಯಿಲೆ ಹಿನ್ನೆಲೆಯಲ್ಲಿ ರಜೆಯಲ್ಲಿದ್ದರು. ಆದರೆ ಅಂದು ರಾತ್ರಿ 9 ಗಂಟೆ ಸಮಯದಲ್ಲಿ ಎಮ್ಮೆದೊಡ್ಡಿ ಗ್ರಾಮದಲ್ಲಿ ಪತ್ನಿ ಹೆಸರಿನಲ್ಲಿರುವ ಸನ್‌ಮೂನ್ ಗ್ರೂಪ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಸುಮಾರು 80 ರಿಂದ 90 ಜನರನ್ನ ಸೇರಿಸಿಕೊಂಡು ಸಖರಾಯಪಟ್ಟಣದ ಪೊಲೀಸ್ ಠಾಣೆಯ ರೌಡಿಶೀಟರ್ ನವೀನ್ ನಾಯ್ಕ ಎಂಬುವವನ ಹುಟ್ಟುಹಬ್ಬವನ್ನು ಮದ್ಯಪಾನ ಮಾಡಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ಸ್ಥಳೀಯ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗಲು ಕಾರಣವಾಗಿರುತ್ತಾರೆ.
ಬಾರ್ ತೆರೆಯುವ ವಿಚಾರದಲ್ಲಿ ಬಾರ್ ಮಾಲೀಕರು ಮತ್ತು ಸ್ಥಳೀಯ ಗ್ರಾಮಸ್ಥರಿಗೂ ವಿರೋಧ ಉಂಟಾಗಿ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದರೂ ಕೂಡ ಜವಾಬ್ದಾರಿಯುತ ಎಎಸ್ಐ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್‌ಡಿ ವೀರೇಂದ್ರ ಅವರು ರೌಡಿಶೀಟರ್‌ನೊಂದಿಗೆ ಬಾರ್‌ನಲ್ಲಿ ಹುಟ್ಟುಹಬ್ಬ ಆಚರಿಸುತ್ತಾ ಪಟಾಕಿ ಸಿಡಿಸಿಕೊಂಡು ಸಾರ್ವಜನಿಕರಿಗೆ ಕಿರುಕುಳ ನೀಡಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದಾದ ವಾತಾವರಣ ಸೃಷ್ಟಿಯಾಗಲು ಕಾರಣರಾಗಿರುತ್ತಾರೆ.
ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲಾಖೆಯ ಘನತೆಗೆ ಚ್ಯುತಿ ಬಾರದಂತೆ ಸಾರ್ವಜನಿಕ ಜೀವನದಲ್ಲಿ ತಮ್ಮ ವರ್ತನೆಯನ್ನು ರೂಡಿಸಿಕೊಳ್ಳಬೇಕಾಗಿರುವುದು ಅತ್ಯಗತ್ಯವಾಗಿರುತ್ತದೆ. ಆದರೆ ವೀರೇಂದ್ರ ಅವರು ಸ್ಥಳೀಯರ ವಿರೋಧವದ್ದು, ಈ ಹಿಂದೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುವುದು ತಿಳಿದಿದ್ದರೂ, ಸುಮಾರ 80-90 ಜನರನ್ನು ಸೇರಿಸಿ ಗ್ರಾಮಸ್ಥರಿಗೆ ಕಿರುಕುಳ ಉಂಟಾಗುವಂತೆ ವರ್ತಿಸಿದ್ದಾರೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.