ಮುಸ್ಲಿಂ ಯುವತಿ ಜೊತೆಗಿದ್ದ ಹಿಂದೂ ಯುವಕನಿಗೆ 'ನೈತಿಕ ಪೊಲೀಸ್'ಗಿರಿ ತೋರಿಸಿದ ಹುಡುಗರು!

Published : Feb 03, 2026, 03:49 PM IST
Chikkaballapur Moral Policing

ಸಾರಾಂಶ

ಚಿಕ್ಕಬಳ್ಳಾಪುರದಲ್ಲಿ ಒಂದೇ ಕಾಲೇಜಿನ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಒಟ್ಟಿಗೆ ಹೋಗುತ್ತಿದ್ದಾಗ, ಅನ್ಯ ಕೋಮಿನ ಅಪ್ರಾಪ್ತರು ಅವರನ್ನು ತಡೆದು ಪ್ರಶ್ನಿಸಿದ್ದಾರೆ. ವಿಡಿಯೋ ಮಾಡಿ, ಚಾಕು ತೋರಿಸಿ ಬೆದರಿಕೆ ಹಾಕಿದ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ (ಫೆ.03): ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದನ್ನು ಪ್ರಶ್ನಿಸಿ, ಅನ್ಯ ಕೋಮಿನ ಅಪ್ರಾಪ್ತ ಬಾಲಕರಿಬ್ಬರು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಕೆ ಹಾಕಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ.

ಹೌದು, ರಾಜ್ಯದಲ್ಲಿ ಅಲ್ಲಲ್ಲಿ ನೈತಿಕ ಪೊಲೀಸ್‌ಗಿರಿಯ (Moral Policing) ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಚಿಕ್ಕಬಳ್ಳಾಪುರ ನಗರದಲ್ಲಿಯೂ ಅಂತಹದ್ದೇ ಆತಂಕಕಾರಿ ಘಟನೆಯೊಂದು ನಡೆದಿದೆ. ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳಾಗಿರುವ ಯುವಕ ಮತ್ತು ಯುವತಿ, ಒಂದೇ ಊರಿನವರು ಹಾಗೂ ಸ್ನೇಹಿತರಾಗಿದ್ದಾರೆ. ಇವರಿಬ್ಬರು ಕಾಲೇಜು ಬಸ್ ಇಳಿದು ಬಸ್‌ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇವರನ್ನು ಹಿಂಬಾಲಿಸಿದ ಇಬ್ಬರು ಅಪ್ರಾಪ್ತ ಬಾಲಕರು, 'ನೀವು ಬೇರೆ ಬೇರೆ ಧರ್ಮದವರು, ಯಾಕೆ ಜೊತೆಯಲ್ಲಿ ಓಡಾಡುತ್ತಿದ್ದೀರಿ?' ಎಂದು ಪ್ರಶ್ನಿಸಿ ತಗಾದೆ ತೆಗೆದಿದ್ದಾರೆ.

ವಿಡಿಯೋ ಮಾಡಿ ವಿಕೃತಿ

ಕೇವಲ ಪ್ರಶ್ನೆ ಮಾಡಿದ್ದಷ್ಟೇ ಅಲ್ಲದೆ, ಪುಂಡರು ತಮ್ಮ ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ವಿಡಿಯೋ ಮಾಡಲು ಪ್ರಾರಂಭಿಸಿದ್ದಾರೆ. 'ನಮ್ಮ ಕೋಮಿನ ಹುಡುಗಿ ಜೊತೆ ನೀನ್ಯಾಕೆ ಬರುತ್ತಿದ್ದೀಯಾ?' ಎಂದು ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ನಡುರಸ್ತೆಯಲ್ಲೇ ಯುವತಿಗೆ 'ನಿಮ್ಮ ಅಪ್ಪನ ನಂಬರ್ ಕೊಡು, ಈಗಲೇ ಕಾಲ್ ಮಾಡು' ಎಂದು ಒತ್ತಾಯಿಸಿ ಕಿರುಕುಳ ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ಯುವತಿ, ಸ್ಥಳದಲ್ಲೇ ತನ್ನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆದರೂ ಕ್ಯಾರೇ ಎನ್ನದ ಪುಂಡರು ತಮ್ಮ ದರ್ಪವನ್ನು ಮುಂದುವರಿಸಿದ್ದಾರೆ.

ಚಾಕು ತೋರಿಸಿ ಬೆದರಿಕೆ

ತಮ್ಮಿಬ್ಬರ ವಿಡಿಯೋ ಮಾಡಬೇಡಿ, ಅದನ್ನು ಡಿಲೀಟ್ ಮಾಡಿ ಎಂದು ಯುವಕ ಮತ್ತು ಯುವತಿ ಮನವಿ ಮಾಡಿಕೊಂಡಿದ್ದಾರೆ. ವಿಡಿಯೋ ಡಿಲೀಟ್ ಮಾಡುವಂತೆ ಕೇಳಿದ್ದಕ್ಕೆ ರೊಚ್ಚಿಗೆದ್ದ ಅಪ್ರಾಪ್ತ ಬಾಲಕರು, ತಮ್ಮ ಬಳಿಯಿದ್ದ ಚಾಕುವನ್ನು (Knife) ತೋರಿಸಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸಾರ್ವಜನಿಕವಾಗಿಯೇ ನಡೆದ ಈ ಘಟನೆ ವಿದ್ಯಾರ್ಥಿಗಳಲ್ಲಿ ಭಾರಿ ಭಯ ಹುಟ್ಟಿಸಿದೆ.

ಪೊಲೀಸರ ತ್ವರಿತ ಕಾರ್ಯಾಚರಣೆ

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿದ ತಕ್ಷಣ ಎಚ್ಚೆತ್ತುಕೊಂಡ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿದ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮತ್ತು ವಿದ್ಯಾರ್ಥಿಗಳಲ್ಲಿ ಭೀತಿ ಹುಟ್ಟಿಸುವ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಆರೋಪಿಗಳು ಅಪ್ರಾಪ್ತರಾಗಿರುವುದರಿಂದ ಬಾಲ ನ್ಯಾಯ ಕಾಯ್ದೆಯಡಿ ಮುಂದಿನ ಕ್ರಮ ಜರುಗಿಸಲಾಗುತ್ತಿದೆ.

ಸ್ನೇಹಿತರಾಗಿ ಒಟ್ಟಿಗೆ ಓಡಾಡುವುದಕ್ಕೂ ನಿರ್ಬಂಧ ಹೇರುವ ಮನಸ್ಥಿತಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ ಎಂದು ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಆನ್ಲೈನ್ ಗೇಮ್ ಆಡುತ್ತಾ, ಒಂಟಿಯಾಗಿದ್ದ ಅಜ್ಜಿ ಮನೆಗೆ ಹೊಕ್ಕ ಎಂ.ಕಾಂ ಪದವೀಧರ; ಮುಂದಾಗಿದ್ದ ಪೈಶಾಚಿಕ ಕೃತ್ಯ!
ಅಖಂಡ ಬಳ್ಳಾರಿ ಜಿಲ್ಲೆಗೆ ₹2372 ಕೋಟಿ ವೆಚ್ಚದಲ್ಲಿ ಎರಡು ಹೊಸ ರೈಲು ಮಾರ್ಗ, ಅಭಿವೃದ್ಧಿಯ ಹೊಸ ಶಕೆ