
ಚಿಕ್ಕಬಳ್ಳಾಪುರ: ಜಿಲ್ಲಾ ಕಾಂಗ್ರೆಸ್‌ನಲ್ಲಿ ನಾಯಕರ ನಡುವಿನ ಶೀತಲ ಸಮರ ಇದೀಗ ಬಹಿರಂಗ ಸಮರಕ್ಕೆ ತಿರುಗಿದ್ದು, ದಿನಕ್ಕೊಂದು ಹೊಸ ಮಸಲತ್ತುಗಳಿಗೆ ಕಾರಣವಾಗುತ್ತಿದೆ. ಶಾಸಕ ಹಾಗೂ ಮಾಜಿ ಸಚಿವ ಎಂ.ಸಿ ಸುಧಾಕರ್ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ಭಿನ್ನಮತ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ವಾಗ್ದಾಳಿಯ ಹಂತಕ್ಕೆ ತಲುಪಿದೆ.
ಚಿಂತಾಮಣಿ ತಾಲೂಕಿನ ಉಲವಾಡಿ ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಣೆ ವಿಚಾರವಾಗಿ ತಾಲೂಕು ಆಡಳಿತ ಸ್ಪಂದಿಸಿದೆ ಎಂದಿರುವ ಪ್ರದೀಪ್ ಈಶ್ವರ್, ಸಿಎಂ ಸೂಚನೆಯಂತೆ ತಾವು ಪತ್ರಿಕಾಗೋಷ್ಠಿ ರದ್ದುಗೊಳಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಕಂಬಾಲಹಳ್ಳಿ ದಲಿತ ದಹನ ಪ್ರಕರಣವನ್ನು ಉಲ್ಲೇಖಿಸಿ, 'ನಾನು ಯಾರ ಒತ್ತಡಕ್ಕೂ ಜಗ್ಗುವ ವ್ಯಕ್ತಿಯಲ್ಲ, ಸೆಲ್ಫ್ ಮೇಡ್ ಮ್ಯಾನ್. ನಿಮ್ಮೊಂದಿಗೆ ಹೇಗೆ ಫೈಟ್ ಮಾಡಬೇಕು ಎಂಬುದು ನನಗೆ ಗೊತ್ತು, ಲೆಟ್ಸ್ ಫೈಟ್' ಎಂದು ಎಂ.ಸಿ. ಸುಧಾಕರ್ ಹೆಸರು ಹೇಳದೆ ನೇರ ಸವಾಲ್ ಎಸೆದಿದ್ದಾರೆ.
ವಿಶೇಷವೆಂದರೆ, ಪ್ರದೀಪ್ ಈಶ್ವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿ ಹಾಗೂ ಅವರ ಚುನಾವಣಾ ಗೆಲುವಿನ ಹಿಂದೆ ಎಂ.ಸಿ ಸುಧಾಕರ್ ಅವರ ಪಾತ್ರ ಪ್ರಮುಖವಾಗಿತ್ತು. ಸ್ವತಃ ಪ್ರದೀಪ್ ಈಶ್ವರ್ ಅವರೇ ಈ ಹಿಂದೆ 'ಎಂ.ಸಿ. ಸುಧಾಕರ್ ಅವರು ನನ್ನ ರಾಜಕೀಯ ಗುರು' ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ, ಇದೀಗ ಅದೇ 'ರಾಜಕೀಯ ಗುರು'ವಿನ ವಿರುದ್ಧ ಶಿಷ್ಯ ಪ್ರದೀಪ್ ಈಶ್ವರ್ ಬಹಿರಂಗವಾಗಿ ಟೀಕಾ ಪ್ರಹಾರ ನಡೆಸುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅಚ್ಚರಿ ಮೂಡಿಸಿದೆ.
ಪ್ರದೀಪ್ ಈಶ್ವರ್ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರೂ, ಮಾಜಿ ಸಚಿವ ಎಂ.ಸಿ. ಸುಧಾಕರ್ ಮಾತ್ರ ಸದ್ಯಕ್ಕೆ ಮೌನ ವಹಿಸಿದ್ದಾರೆ. ಹೈಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್ ನಾಯಕತ್ವ (ಕೆಪಿಸಿಸಿ) ಈ ವಿಚಾರದಲ್ಲಿ ಯಾವ ರೀತಿ ಮಧ್ಯಪ್ರವೇಶಿಸುತ್ತದೆ ಮತ್ತು ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡುವ 'ವೇಯ್ಟ್ ಅಂಡ್ ವಾಚ್' ತಂತ್ರವನ್ನು ಅವರು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಎಂ.ಸಿ. ಸುಧಾಕರ್ ನೇತೃತ್ವದ ನಿಯೋಗ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಜಿಲ್ಲಾ ಕಾಂಗ್ರೆಸ್ ಅಂಗಳದಲ್ಲಿ ಬಂಡಾಯದ ಕಾವು ಇನ್ನಷ್ಟು ಕಾಯುವಂತೆ ಮಾಡಿದೆ. (ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ)