ಅನಾರೋಗ್ಯದಿಂದ ಹಾಸಿಗೆ ಹಿಡಿದ ತಾಯಿ | ಹಿಡಿದಿದ್ರೂ ಗಡಿ ದಾಟದ ಡಿಸಿ! ಚಾಮರಾಜನಗರ ಜಿಲ್ಲಾಧಿಕಾರಿಯ ನಡೆಗೆ ಭಾರೀ ಮೆಚ್ಚುಗೆ
ಬೆಂಗಳೂರು (ಏ. 29): ಮನೆಮನೆ ಆರೋಗ್ಯ ಸಮೀಕ್ಷೆ, ಚೆಕ್‌ಪೋಸ್ಟ್‌ಗಳಲ್ಲಿ ಭಾರೀ ಬಿಗಿಭದ್ರತೆ ಕೈಗೊಳ್ಳುವ ಮೂಲಕ ಕೊರೋನಾ ಜಿಲ್ಲೆಗೆ ಕಾಲಿಡದಂತೆ ಹೋರಾಟ ನಡೆಸುತ್ತಿರುವ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಮ್ಮ ತಾಯಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಅವರನ್ನು ನೋಡಲು ಹೋಗದೆ ಹಗಲಿರುಳು ದುಡಿಯುತ್ತಿದ್ದಾರೆ.
ತಾವೇ ಅಂತರ ಜಿಲ್ಲಾ ಪ್ರವೇಶ ನಿರ್ಬಂಧಿಸಿ ಉಲ್ಲಂಘಿಸುವುದು ಎಷ್ಟುಸರಿ ಎಂದು ತೀವ್ರ ಅನಾರೋಗ್ಯದಿಂದ ತಾಯಿ ಹಾಸಿಗೆ ಹಿಡಿದಿದ್ದರೂ 49 ದಿನಗಳಿಂದ ಚಾಮರಾಜನಗರ ಜಿಲ್ಲೆಯ ಗಡಿ ದಾಟಿ ಮೈಸೂರಿಗೆ ಹೋಗಿಲ್ಲ. ಇದರ ಮೂಲಕ ವೈಯಕ್ತಿಕ ಜೀವನವನ್ನೂ ಬದಿಗೊತ್ತಿ ಕೊರೋನಾ ವಾರಿಯರ್ ಎಂದರೇನು ಎಂಬುದನ್ನು ಸಾರಿದ್ದಾರೆ.
7 ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ತವರಿಗೆ ಬರಲು ಹರಸಾಹಸ: ಮಾತು ಬರದ ಪತಿ-ಪತ್ನಿಯ ವೇದನೆ..!
ಹೌದು, ಜಿಲ್ಲೆಯ ಸುತ್ತಮುತ್ತಲೆಲ್ಲಾ ಹಾಟ್ ಸ್ಪಾಟ್ ಆದರೂ ಗ್ರೀನ್ ಝೋನ್‌ನಲ್ಲೇ ಚಾಮರಾಜನಗರ ಇರಲು ಕಾರಣ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತೆಗೆದುಕೊಳ್ಳುತ್ತಿರುವ ಖಡಕ್ ತೀರ್ಮಾನಗಳು ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ, 77 ವರ್ಷದ ತಾಯಿ ಯಶೋಧಮ್ಮ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ 24 ದಿನಗಳ ಕಾಲ ಮೈಸೂರಿನ ಜಯದೇವ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದು, ಅವರನ್ನು ಮಾ.9ರಂದು ಭೇಟಿಯಾಗಿದ್ದೇ ಕೊನೆ. ಅಂದಿನಿಂದ ಮೈಸೂರಿಗೆ ತೆರಳಿ ನೋಡಲಾಗದೇ ಕೊರೋನಾ ಯೋಧರಾಗಿ ದುಡಿದ್ದಾರೆ. ಜಿಲ್ಲೆಯ ಜನರನ್ನು ಕೊರೋನಾದಿಂದ ರಕ್ಷಿಸಲು ದುಡಿಯುತ್ತಿರುವ ಜಿಲ್ಲಾಧಿಕಾರಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.