ಕರ್ನಾಟಕದಲ್ಲಿ ಇನ್ನೊಂದು ಅಣು ಸ್ಥಾವರ: ಕೊಪ್ಪಳದಲ್ಲಿ ಸ್ಥಾಪನೆ?

Published : Dec 18, 2024, 04:20 AM IST
ಕರ್ನಾಟಕದಲ್ಲಿ ಇನ್ನೊಂದು ಅಣು ಸ್ಥಾವರ: ಕೊಪ್ಪಳದಲ್ಲಿ ಸ್ಥಾಪನೆ?

ಸಾರಾಂಶ

ಪರಮಾಣು ಸ್ಥಾವರ ಆರಂಭಕ್ಕೆ 1200 ಎಕರೆ ಭೂಮಿ ಅಗತ್ಯವಿದೆ. ಆದರೆ ಅರಸಿನಕೇರಿ ಬಳಿ ಲಭ್ಯವಿರುವುದು 615-35 ಎಕರೆ ಭೂಮಿ ಮಾತ್ರ. ಹೀಗಾಗಿ ಸುತ್ತಮುತ್ತಲು, ಜನವಸತಿ ಪ್ರದೇಶದಿಂದ ಕನಿಷ್ಠ 3 ಕಿ.ಮೀ ದೂರದಲ್ಲಿ ಲಭ್ಯವಿರಬಹುದಾದ ಉಳಿದ ಜಾಗದ ಮಾಹಿತಿ ಸಂಗ್ರಹಿಸಿ ವರದಿ ನೀಡಿ ಎಂದು ಕೇಂದ್ರ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಿದೆ.  

ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.18):  ಪರಮಾಣು ವಿದ್ಯುತ್ ಸ್ಥಾವರಗಳ ಆರಂಭಕ್ಕಾಗಿ ಸೂಕ್ತ ಭೂಮಿಗಾಗಿ ಹುಡುಕಾಡುತ್ತಿರುವ ಕೇಂದ್ರ ಸರ್ಕಾರ, ಇದೀಗ ಈ ಸಂಬಂಧ ಕರ್ನಾಟಕದ ಕೊಪ್ಪಳ ಜಿಲ್ಲೆಯ ಅರಸಿನಕೇರಿ ಸಮೀಪದ ಜಾಗ ಆಯ್ಕೆ ಮಾಡಿಕೊಂಡಿದೆ. ಆದರೆ ಪ್ರಸ್ತಾಪಿತ ಪ್ರದೇಶದಲ್ಲಿ ಅಗತ್ಯ ಪ್ರಮಾಣದ ಭೂಮಿಯ ಕೊರತೆ ಇರುವ ಕಾರಣ, ಸುತ್ತಮುತ್ತಲ ಗ್ರಾಮಗಳಲ್ಲಿ ಲಭ್ಯವಿರುವ ಜಾಗದ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಹೀಗಾಗಿ ಕಾರವಾರದ ಕೈಗಾ ಪರಮಾಣು ವಿದ್ಯುತ್‌ ಸ್ಥಾವರದ ಬಳಿಕ ರಾಜ್ಯದಲ್ಲಿ ಇನ್ನೊಂದು ಪರಮಾಣು ವಿದ್ಯುತ್‌ ಸ್ಥಾವರ ಆರಂಭವಾಗುವ ಸುಳಿವು ಸಿಕ್ಕಿದೆ.

ಪರಮಾಣು ಸ್ಥಾವರ ಆರಂಭಕ್ಕೆ 1200 ಎಕರೆ ಭೂಮಿ ಅಗತ್ಯವಿದೆ. ಆದರೆ ಅರಸಿನಕೇರಿ ಬಳಿ ಲಭ್ಯವಿರುವುದು 615-35 ಎಕರೆ ಭೂಮಿ ಮಾತ್ರ. ಹೀಗಾಗಿ ಸುತ್ತಮುತ್ತಲು, ಜನವಸತಿ ಪ್ರದೇಶದಿಂದ ಕನಿಷ್ಠ 3 ಕಿ.ಮೀ ದೂರದಲ್ಲಿ ಲಭ್ಯವಿರಬಹುದಾದ ಉಳಿದ ಜಾಗದ ಮಾಹಿತಿ ಸಂಗ್ರಹಿಸಿ ವರದಿ ನೀಡಿ ಎಂದು ಕೇಂದ್ರ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಕೊಪ್ಪಳ ತಹಸೀಲ್ದಾರ್‌ಗೆ ಪತ್ರ ಬರೆದಿರುವ ಜಿಲ್ಲಾಡಳಿತ, ಸ್ಥಳ ತನಿಖೆ ಮಾಡಿ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಅಗತ್ಯವಾದ ಭೂಮಿ ಲಭ್ಯವಿದ್ದರೆ ಈ ಕುರಿತು ಪಂಚನಾಮ ಮತ್ತು ಕಂದಾಯ ನಕ್ಷೆಯೊಂದಿಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ವಿರೋಧ:

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಾಗದ ಪೈಕಿ ಶೇ.90ರಷ್ಟು ಸರ್ಕಾರಿ ಭೂಮಿಯೇ ಇರುವ ಪ್ರದೇಶವಾಗಿದ್ದು, ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಅರಣ್ಯ ಪ್ರದೇಶದಲ್ಲಿಯೇ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಹಾಗೂ ಅಪಾಯಕಾರಿಯಾಗಿರುವ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಅರಣ್ಯ ಪ್ರದೇಶ:

ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಸುಮಾರು 800 ಎಕರೆ ಅರಣ್ಯ ಪ್ರದೇಶವಿದೆ. ಇಲ್ಲಿ ಕರಡಿ, ಚಿರತೆ, ಜಿಂಕೆ, ಮೊಲ, ಕತ್ತೆ ಕಿರುಬ ಸೇರಿದಂತೆ ನೂರಾರು ಪ್ರಭೇದದ ಪ್ರಾಣಿಗಳು ವಾಸಿಸುತ್ತಿವೆ. ಜೊತೆಗೆ, ಈ ಪ್ರದೇಶದಲ್ಲಿಯೇ ಕರಡಿಧಾಮ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಪ್ರಸ್ತಾವನೆ ಸಹ ಕೇಂದ್ರಕ್ಕೆ ಹೋಗಿದೆ. ಹೀಗಿರುವಾಗ ಇಲ್ಲಿಯೇ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕೇಂದ್ರ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಕೈಗಾ ನಂತರ 2ನೇಯದು:

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿ ಈಗಾಗಲೇ ಕೈಗಾ ಅಣು ವಿದ್ಯುತ್ ಸ್ಥಾವರ ಇದೆ. ಬಳಿಕ ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯನ್ನು ಸ್ಥಾವರಕ್ಕಾಗಿ ಗುರುತಿಸಲಾಗಿತ್ತು. ಆದರೆ ಇದೀಗ ಕೊಪ್ಪಳ ಹೆಚ್ಚು ಸೂಕ್ತ ಎನ್ನುವ ಕಾರಣಕ್ಕೆ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಸರ್ವೇ ಮಾಡುವ ಕಾರ್ಯಕ್ಕೆ ಕಂದಾಯ ಇಲಾಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಸರ್ವೇ ನಡೆಸಿ, ಕೇಂದ್ರಕ್ಕೆ ವರದಿ ನೀಡಲಿದೆ.

ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರದಿಂದ ಪ್ರಸ್ತಾವನೆ ಬಂದಿರುವ ಹಿನ್ನೆಲೆಯಲ್ಲಿ ಸರ್ವೇ ನಡೆಸಲು ತಹಸೀಲ್ದಾರ್‌ಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಸರ್ವೇ ಮಾಡಿ, ವರದಿ ಕಳುಹಿಸುತ್ತೇವೆ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ತಿಳಿಸಿದ್ದಾರೆ. 

ಅತ್ಯಂತ ಅಪಾಯಕಾರಿಯಾಗಿರುವ ಪರಮಾಣು ವಿದ್ಯುತ್ ಸ್ಥಾವರವನ್ನು ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಸ್ಥಾಪಿಸಲು ನಾವು ಬಿಡುವುದಿಲ್ಲ. ಇದಕ್ಕಾಗಿ ಆತ್ಮಹತ್ಯೆಯಂತಹ ಹೋರಾಟಕ್ಕೂ ನಾವು ಹಿಂದೆ ಸರಿಯುವುದಿಲ್ಲ ಎಂದು ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ತಿಳಿಸಿದ್ದಾರೆ.  

PREV
Read more Articles on
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್