Tumakur : ಕೇಂದ್ರ, ರಾಜ್ಯ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಲಿ

By Kannadaprabha NewsFirst Published Dec 15, 2022, 4:37 AM IST
Highlights

ರೈತರ, ತೆಂಗು ಬೆಳೆಗಾರರ ಪರವಾದ ಕಾಳಜಿ ಸ್ವಲ್ಪವಾದರೂ ಇಲ್ಲದ ಸಚಿವ ನಾಗೇಶ್‌ ತಾಲೂಕಿನ ರೈತರಿಂದಲೇ ಅಧಿಕಾರಕ್ಕೆ ಬಂದಿದ್ದು, ನಾನಾಕಾರಣಗಳಿಂದ ಸಂಕಷ್ಟಕ್ಕೊಳಗಾಗಿರುವ ತಾಲೂಕಿನ ರೈತಪರ ಶಾಂತಿಯುತ ಸ್ವಯಂ ಪ್ರೇರಿತ ಬಂದ್‌ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿರುವ ನನಗೆ ಇಲ್ಲ ಸಲ್ಲದ ನಿಯಮ, ಕಾನೂನು ಕಟ್ಟಲೆಗಳನ್ನು ಒಡ್ಡಿ ಬಂದ್‌ ತಡೆಯಲು ಪೊಲೀಸ್‌ ಇಲಾಖೆಯ ಮೂಲಕ ನೋಟಿಸ್‌ ನೀಡಿದ್ದು ನಾಚಿಕೆಗೇಡಿನ ಸಂಗತಿ

  ತಿಪಟೂರು : ರೈತರ, ತೆಂಗು ಬೆಳೆಗಾರರ ಪರವಾದ ಕಾಳಜಿ ಸ್ವಲ್ಪವಾದರೂ ಇಲ್ಲದ ಸಚಿವ ನಾಗೇಶ್‌ ತಾಲೂಕಿನ ರೈತರಿಂದಲೇ ಅಧಿಕಾರಕ್ಕೆ ಬಂದಿದ್ದು, ನಾನಾಕಾರಣಗಳಿಂದ ಸಂಕಷ್ಟಕ್ಕೊಳಗಾಗಿರುವ ತಾಲೂಕಿನ ರೈತಪರ ಶಾಂತಿಯುತ ಸ್ವಯಂ ಪ್ರೇರಿತ ಬಂದ್‌ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿರುವ ನನಗೆ ಇಲ್ಲ ಸಲ್ಲದ ನಿಯಮ, ಕಾನೂನು ಕಟ್ಟಲೆಗಳನ್ನು ಒಡ್ಡಿ ಬಂದ್‌ ತಡೆಯಲು ಪೊಲೀಸ್‌ ಇಲಾಖೆಯ ಮೂಲಕ ನೋಟಿಸ್‌ ನೀಡಿದ್ದು ನಾಚಿಕೆಗೇಡಿನ ಸಂಗತಿ ಎಂದು ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಲೋಕೇಶ್ವರ ಸಚಿವ ನಾಗೇಶ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ, ಎತ್ತಿನಹೊಳೆ ಭೂಸಂತ್ರಸ್ತರಿಗೆ ಮತ್ತು ಕೆ.ಬಿ.ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಲಾಭದಾಯಕ ಭೂ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬುಧವಾರ ತಿಪಟೂರು ಹೋರಾಟ ಸಮಿತಿ ಕರೆ ನೀಡಿದ್ದ ಸ್ವಯಂಪ್ರೇರಿತ ಬಂದ್‌ ಹಿನ್ನಲೆಯಲ್ಲಿ ನಗರದ ಸಿಂಗ್ರಿನಂಜಪ್ಪ ವೃತ್ತದಲ್ಲಿ ರೈತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು ಮಾತನಾಡಿದರು.

ತಿಪಟೂರು ತಾಲೂಕು ಸೇರಿದಂತೆ ತುಮಕೂರು ಜಿಲ್ಲೆಯನ್ನೊಳಗೊಂಡು ರಾಜ್ಯದ 15 ಜಿಲ್ಲೆಗಳಲ್ಲಿ ಕೊಬ್ಬರಿ ಬೆಳೆಯುತ್ತಿದ್ದು ಹಾಲಿ ಕೊಬ್ಬರಿ ಬೆಲೆ ತುಂಬಾ ಕಡಿಮೆಯಾಗಿದೆ. ಸರ್ಕಾರದ ಬೆಂಬಲ ಬೆಲೆಯೂ ಸಹ ತುಂಬಾ ಕಡಿಮೆ ಇದೆ. ಈ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕಾದ ಕರ್ತವ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ್ದಾಗಿದ್ದರೂ ತೆಂಗು ಬೆಳೆಗಾರರ ಮನವಿಯನ್ನು ಕಸದ ಬುಟ್ಟಿಗೆ ಹಾಕಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣಾ ಸಮಯದಲ್ಲಿ ಕೇಂದ್ರ ಮಂತ್ರಿ ಅಮಿತ್‌ಶಾ ತಿಪಟೂರಿನಲ್ಲಿ ಮತಭೇಟೆಗಾಗಿ ಕೊಬ್ಬರಿ ಬೆಳೆಗಾರರ ಸಮಾವೇಶ ನಡೆಸಿ ತೆಂಗು ಬೆಳೆಗಾರರ ಸಮಸ್ಯೆ ಹಾಗೂ ಕೊಬ್ಬರಿ ಬೆಂಬಲ ಬೆಲೆಯನ್ನು ಹೆಚ್ಚಿಸುವುದಾಗಿ ನೀಡಿದ್ದ ಭರವಸೆ ಈವರೆಗೂ ಈಡೇರಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಕೊಬ್ಬರಿ ಬೆಂಬಲ ಬೆಲೆಯನ್ನು 11 ಸಾವಿರದಿಂದ 13 ಸಾವಿರಕ್ಕಾದರೂ ಹೆಚ್ಚಿಸಬೇಕು ಎಂದರು.

ತಾಲೂಕಿನ ನೂರಾರು ರೈತರ ಫಲವತ್ತಾದ ಕೃಷಿ ಜಮೀನುಗಳು ಎತ್ತಿನಹೊಳೆ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಹೋಗುತ್ತಿದ್ದು ಸಂತ್ರಸ್ತರಿಗೆ ಕಳೆದ 4-5 ವರ್ಷಗಳಿಂದಲೂ ಲಾಭದಾಯಕ ಪರಿಹಾರ ನೀಡಿಲ್ಲ. ಸದರಿ ಯೋಜನೆಗಳಿಗೆ ಭೂಮಿ ಕಳೆದುಕೊಳ್ಳುತ್ತಿರುವ ರೈತರ ಪರವಾಗಿ ಇಲ್ಲಿ ಸಚಿವ ಬಿ.ಸಿ. ನಾಗೇಶ್‌ ಭೂಸಂತ್ರಸ್ತರಿಗೆ ಅನುಕೂಲವಾಗುವಂತ ಒಂದೇ ಒಂದು ಸಭೆ ನಡೆಸಿಲ್ಲ. ಸಂತ್ರಸ್ತರು ನಮ್ಮ ಭೂಮಿಗೆ ಯಾವ ರೀತಿ, ಯಾವ ಆಧಾರದಲ್ಲಿ ಬೆಲೆ ನೀಡಲಿದ್ದಾರೆ ಎಂಬುದೂ ತಿಳಿದಿಲ್ಲ ಎಂದು ಹೇಳಿದರು. ಸರ್ಕಾರಗಳು ಕೂಡಲೆ ಕೊಬ್ಬರಿ ಬೆಂಬಲ ಬೆಲೆಯನ್ನು ಹೆಚ್ಚಿಸಿ ತೆಂಗು ಬೆಳೆಗಾರರ ಹಾಗೂ ಎತ್ತಿನಹೊಳೆ ಭೂಸಂತ್ರಸ್ತರ ಹಿತಕಾಪಾಡಬೇಕು. ಇಲ್ಲವಾದಲ್ಲಿ ವಿವಿಧ ರೈತಪರ ಸಂಘಟನೆಗಳೊಂದಿಗೆ ತುಮಕೂರು ಜಿಲ್ಲಾ ಬಂದ್‌ ಮಾಡಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಾಕಷ್ಟುಸಂಖ್ಯೆಯಲ್ಲಿ ರೈತ ಮುಖಂಡರುಗಳು, ಹಾಲಿ, ಮಾಜಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರುಗಳು ಹಾಗೂ ರೈತರಿದ್ದರು.

ರೈತರ ಪರವಾಗಿ ನಾನು ಸ್ವಯಂ ಪ್ರೇರಿತ ಬಂದ್‌ಗೆ ಘೋಷಣೆ ಮಾಡಿದ್ದಕ್ಕೆ ಸಚಿವ ನಾಗೇಶ್‌ ಪೊಲೀಸರ ಮೂಲಕ ನೋಟಿಸ್‌ ಕಳುಹಿಸಿದ್ದಾರೆ. ನಾನು ಸಹ ಪೊಲೀಸ್‌ ಆಗಿದ್ದವನು. ಸಾಕಷ್ಟುಪ್ರತಿಭಟನೆ, ಬಂದ್‌ಗೆ ರಕ್ಷಣೆ ಕೊಟ್ಟಿದ್ದೇನೆ. ಇಂತಹ ನೋಟಿಸ್‌ಗೆ ಹೆದರುವ ವ್ಯಕ್ತಿ ನಾನಲ್ಲ. ಸಚಿವರು ರೈತರ ಬೇಡಿಕೆಗಳನ್ನು ಈಡೇರಿಸಿ ರೈತರ ಕಷ್ಟಕ್ಕೆ ಸ್ಪಂದಿಸಲಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.

ಲೋಕೇಶ್ವರ ಅಧ್ಯಕ್ಷ, ತಿಪಟೂರು ಹೋರಾಟ ಸಮಿತಿ

click me!