ಐಎಂಎ ಕಂಪನಿಯಿಂದ ಲಂಚ ಪಡೆದವರ ಹೆಸರು, ಸಮಯ, ದಿನಾಂಕ ಬರೆದು ನಿರ್ದೇಶಕರಿಗೆ ಮನ್ಸೂರ್‌ನಿಂದ ಮೇಲ್|ಸಿಬಿಐನಿಂದ ಬಹಿರಂಗ| ಪಟ್ಟಿಯಲ್ಲಿ ಪ್ರತಿಯೊಬ್ಬರ ವಿವರ ದಾಖಲಿಸಿರುವ ಐಎಂಎ ಮಾಲೀಕ| ಲಂಚ ಸ್ವೀಕೃತರಿಗೆ ನಡುಕ|
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ನ.25): ಬಹುಕೋಟಿ ವಂಚನೆ ಸಂಬಂಧ ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಮಾಲಿಕ ಮಹಮ್ಮದ್ ಮನ್ಸೂರ್ ಖಾನ್‌ನ ಇ-ಮೇಲ್‌ಗಳ ರಹಸ್ಯವನ್ನು ಭೇದಿಸಿದ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಖಾನ್‌ನಿಂದ ಕೋಟಿ ಕೋಟಿ ರುಪಾಯಿ ಹಣ ಪಡೆದ ರಾಜ್ಯದ ಪ್ರಭಾವಿ ರಾಜಕಾರಣಿಗಳು, ಕೆಲ ಐಎಎಸ್- ಐಪಿಎಸ್ ಹಾಗೂ ಐಟಿ-ಇಡಿ ಅಧಿಕಾರಿಗಳು ಸೇರಿದಂತೆ ‘ಫಲಾನುಭವಿಗಳ ಪಟ್ಟಿ’ ಲಭಿಸಿದೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.
ತನ್ನ ಹಣಕಾಸು ವ್ಯವಹಾರದಲ್ಲಿ ಬಿಡಿಗಾಸು ವ್ಯಯಿಸಿದರೂ ಕೂಡಾ ಮನ್ಸೂರ್ ಅದರ ಲೆಕ್ಕ ಬರೆದಿಟ್ಟಿದ್ದಾನೆ. ತನ್ನಿಂದ ಹಣ ಸ್ವೀಕರಿಸಿದ ವ್ಯಕ್ತಿಗಳ ಹೆಸರು, ದಿನಾಂಕ, ಗಂಟೆ ಹೀಗೆ ಪ್ರತಿಯೊಂದನ್ನು ಐಎಂಎ ಕಂಪನಿ ಆಡಳಿತ ಮಂಡಳಿಯ ನಿರ್ದೇಶಕರಿಗೆ ಇ-ಮೇಲ್ ಮೂಲಕ ಆತ ಅಧಿಕೃತವಾಗಿ ಮಾಹಿತಿ ಒದಗಿಸಿದ್ದ. ವಂಚನೆ ಕೃತ್ಯದ ತನಿಖೆಗಿಳಿದ ಸಿಬಿಐ ಅಧಿಕಾರಿಗಳು, ಆತನ ಇ-ಮೇಲ್‌ಗಳನ್ನು ಕೆದಕಿದಾಗ ಲಂಚಬಾಕ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮುಖಗಳು ಅನಾವರಣಗೊಂಡಿವೆ ಎಂದು ತಿಳಿದು ಬಂದಿದೆ.
ಪ್ರಾಥಮಿಕ ಹಂತದ ತನಿಖೆಯಲ್ಲಿ ರೋಷನ್ ಬೇಗ್ ಮಾತ್ರವಲ್ಲದೆ ಮೂವರು ಮಾಜಿ ಸಚಿವರು, ಓರ್ವ ಹಿರಿಯ ಐಎಎಸ್, ನಾಲ್ವರು ಐಪಿಎಸ್‌ಗಳು, ಇಬ್ಬರು ಐಟಿ ಹಾಗೂ ಓರ್ವ ಇಡಿ ಅಧಿಕಾರಿಗಳು ಸಿಬಿಐ ರಾಡಾರ್‌ನಲ್ಲಿದ್ದಾರೆ. ಈಗಾಗಲೇ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ವಿರುದ್ಧ ಆರೋಪ ಪಟ್ಟಿಸಲ್ಲಿಕೆಯಾಗಿದೆ. ಡಿವೈಎಸ್ಪಿ ಇ.ಶ್ರೀಧರ್, ಇನ್‌ಸ್ಪೆಕ್ಟರ್ ರಮೇಶ್ ಹಾಗೂ ಪಿಎಸ್‌ಐ ಗೌರಿಶಂಕರ್ ಅಮಾನುತಗೊಂಡಿದ್ದು, ಅವರಿಗೆ ಬಂಧನ ಭೀತಿ ಎದುರಾಗಿದೆ ಎನ್ನಲಾಗಿದೆ.
ಐಎಂಎ ಕೇಸ್‌ನಲ್ಲಿ ಬೇಗ್ ಬಂಧನ; ರಾಜಕಾರಣಿಗಳಿಗೆ ನಡುಕ ಶುರು; ಯಾರ್ಯಾರಿದ್ದಾರೆ ಲಿಸ್ಟ್‌ನಲ್ಲಿ?
ಇ-ಮೇಲ್‌ಗಳಲ್ಲಿ ಲಭಿಸಿದ ಫಲಾನುಭವಿಗಳ ಪಟ್ಟಿಹಿಡಿದು ವಂಚಕ ಜಾಲವನ್ನು ಜಾಲಾಡಿಸಲು ಸಿಬಿಐ ಕಾರ್ಯಾಚರಣೆ ಆರಂಭಿಸಿದೆ. ಮೊದಲ ಹಂತದಲ್ಲಿ 400 ಕೋಟಿ ಪಡೆದ ಆರೋಪ ಹೊತ್ತು ಮಾಜಿ ಸಚಿವ ರೋಷನ್ ಬೇಗ್ ಜೈಲು ಪಾಲಾಗಿದ್ದಾರೆ. ಈ ಬೆನ್ನಲ್ಲೇ ಕಾಂಚಾಣದಾಸೆಗೆ ಮನ್ಸೂರ್ ಮೋಸದ ವ್ಯವಹಾರಕ್ಕೆ ರಕ್ಷಣೆ ಕಲ್ಪಿಸಿದವರಿಗೆ ಸಿಬಿಐ ತನಿಖೆ ನಡುಕು ಹುಟ್ಟಿಸಿದೆ. ಕೆಲವು ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಗೆ ಬಂಧನ ಭೀತಿ ಕೂಡಾ ಶುರುವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಡೈರಿ ಇಲ್ಲ, ಇ-ಮೇಲ್ ಮುಖ್ಯ
ಹಣಕಾಸು ವಂಚನೆಗಳಿಗೆ ಸಂಬಂಧಿಸಿದ ಡೈರಿಯಲ್ಲೇ ಆರೋಪಿಗಳು ಹಣದ ವಿಚಾರ ಬರೆದಿಡುವುದು ಸಾಮಾನ್ಯ ವಿದ್ಯಮಾನವಾಗಿದೆ. ಆದರೆ ಮನ್ಸೂರ್ ಪ್ರಕರಣದ ಡೈರಿಗಿಂತ ಇ-ಮೇಲ್‌ಗಳು ಹೆಚ್ಚು ಪ್ರಾಮುಖ್ಯತೆ ಪಡೆದಿರುವುದು ಗಮನಾರ್ಹ ವಿಚಾರವಾಗಿದೆ.
ತನ್ನ ಹಣಕಾಸು ವ್ಯವಹಾರವು ಅನೀತಿಯಾಗಿದೆ ಎಂಬುದು ಗೊತ್ತಿದ್ದರೂ ಸಹ ಮನ್ಸೂರ್ ಲೆಕ್ಕಾಚಾರ ಮನುಷ್ಯನಾಗಿದ್ದಾನೆ. ಆತನ ವ್ಯವಹಾರಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ‘ಶ್ರೀರಕ್ಷೆ’ ಕಲ್ಪಿಸಿದವರು ಪ್ರತಿಯಾಗಿ ಜೇಬು ತುಂಬಿಸಿಕೊಂಡಿದ್ದಾರೆ. ತನ್ನ ಏಳು ನಿರ್ದೇಶಕರ ಆಡಳಿತ ಮಂಡಳಿಗೆ ಆತ ಪ್ರತಿಯೊಂದು ವಿಚಾರವನ್ನು ತಿಳಿಸಿದ್ದಾನೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಯಾರಿಗೆ ದುಡ್ಡು ಕೊಟ್ಟರೂ ಮುಕ್ತವಾಗಿ ಆಡಳಿತ ಮಂಡಳಿಗೆ ಇ-ಮೇಲ್ ಮೂಲಕ ಆತ ತಿಳಿಸಿದ್ದಾನೆ. ಹೀಗಾಗಿ ಡೈರಿಗಿಂತ ಮನ್ಸೂರ್‌ನ ಇ-ಮೇಲ್‌ಗಳು ಮುಖ್ಯವಾಗಿವೆ. ಏಕೆಂದರೆ ಆಡಳಿತ ಮಂಡಳಿಗೆ ಕಳುಹಿಸಿರುವ ಪ್ರತಿ ಇ-ಮೇಲ್‌ಗಳು ಅಧಿಕೃತ ಎಂದೇ ಪರಿಗಣಿತಾಗಿರುವುದು ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಮನ್ಸೂರ್ ದೂತ ನಿಜಾಂ
ರಾಜಕಾರಣಿಗಳು, ಪೊಲೀಸರು, ಐಟಿ-ಇಡಿ ಅಧಿಕಾರಿಗಳು ಸೇರಿದಂತೆ ಈ ಗೌಪ್ಯ ವ್ಯವಹಾರಗಳಿಗೆ ಮನ್ಸೂರ್ ನಂಬಿಕಸ್ಥ ದೂತನಾಗಿ ಐಎಂಎ ಆಡಳಿತ ಮಂಡಳಿ ನಿರ್ದೇಶಕ ನಿಜಾಮುದ್ದೀನ್ ನಿರ್ವಹಿಸಿದ್ದಾನೆ. ತಮ್ಮ ಕಂಪನಿ ವ್ಯವಹಾರಗಳಿಗೆ ಸಂಕಷ್ಟಎದುರಾದರೆ ಅದನ್ನು ಬಗೆಹರಿಸಲು ಸರ್ಕಾರ ಮಟ್ಟದಲ್ಲಿ ಮನ್ಸೂರ್ ಪರವಾಗಿ ನಿಜಾಮುದ್ದೀನ್ ಓಡಾಡುತ್ತಿದ್ದ. ಹೀಗಾಗಿ ನಿಜಾಮುದ್ದೀನ್ ವಿಚಾರಣೆ ವೇಳೆಯಲ್ಲಿ ಸಹ ರಹಸ್ಯ ಹಣಕಾಸು ವಿಚಾರವು ಬಯಲಾಗಿತ್ತು ಎಂದು ತಿಳಿದು ಬಂದಿದೆ.
ನಗದು, ಚಿನ್ನದಲ್ಲೇ ಲಂಚ
ಇನ್ನು ಮನ್ಸೂರ್‌ನಿಂದ ಲಂಚವನ್ನು ಬಹುತೇಕರು ನಗದು ರೂಪದಲ್ಲಿ ಪಡೆದಿದ್ದಾರೆ. ಕೆಲವು ಹಿರಿಯ ಅಧಿಕಾರಿಗಳಿಗೆ ಚಿನ್ನದ ರೂಪದಲ್ಲಿ ಸಹ ಸಂದಾಯವಾಗಿದೆ. ಎಸ್‌ಐಟಿ ತನಿಖೆ ವೇಳೆ ಬೆಂಗಳೂರು ಮಾಜಿ ಜಿಲ್ಲಾಧಿಕಾರಿ ದಿ.ವಿಜಯಶಂಕರ್, ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್, ಮಂಜುನಾಥ್ ಹಾಗೂ ಬಿಡಿಎ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಅಲಿಯಾಸ್ ಬಿಡಿಎ ಕುಮಾರ್ ಅವರಿಗೆ ನಗದು ರೂಪದಲ್ಲಿ ಮನ್ಸೂರ್ ಲಂಚ ಕೊಟ್ಟಿದ್ದ ಎಂಬ ಆರೋಪ ಕೇಳಿ ಬಂದಿತ್ತು.